
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯ ಸಂದರ್ಭ ಬ್ರಾಹ್ಮಣ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವುದು ತೀವ್ರ ಆಕ್ರೋಶಕಾರಿ ಹಾಗೂ ಖಂಡನೀಯವಾಗಿದೆ. ಧಾರ್ಮಿಕ ಭಾವನೆಗಳ ರಕ್ಷಣೆಯು ಸರ್ಕಾರದ, ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹೊಣೆಗಾರಿಕೆ. ಆದರಿಲ್ಲಿ ಅದಕ್ಕೆ ಘಾಸಿ ಮಾಡಲಾಗಿದೆ.
ಗಾಯತ್ರಿ ದೀಕ್ಷೆಯೊಂದಿಗೆ ಧರಿಸುವ ಕಾಶಿದಾರ ಮತ್ತು ಜನಿವಾರವನ್ನು ಪರೀಕ್ಷಾಧಿಕಾರಿಗಳು ಬಲವಂತವಾಗಿ ತೆಗೆಸಿರುವ ವರದಿ ಇದೊಂದು ಭೀಕರ ಧಾರ್ಮಿಕ ಅನಾಚಾರವಾಗಿದೆ.ಇದು ಕೇವಲ ವಿದ್ಯಾರ್ಥಿಗಳ ಉಡುಪು ಕುರಿತ ವಿಚಾರವಲ್ಲ, ನಿರ್ದಿಷ್ಟ ಒಂದು ಸಮುದಾಯದ ಧರ್ಮಾನುಷ್ಠಾನದ ಮೇಲೆ ನಡೆದ ಧಾಳಿಯಾಗಿದೆ. ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿ, ಭಾವನೆಗಳ ಮೇಲೆ ನುಗ್ಗಿದ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ.ಪರೀಕ್ಷಾಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಪುನರಾವರ್ತನೆ ಆಗದಂತೆ ಕಟ್ಟುನಿಟ್ಟಿನ ಮಾರ್ಗ ಜಾರಿಗೊಳಿಸಬೇಕು “ಉಪನಯನ” ಎಂಬುದು ಕೇವಲ ಧಾರ್ಮಿಕ ಆಚರಣೆ ಅಲ್ಲ — ಅದು ಜೀವನಶೈಲಿ, ಜ್ಞಾನಾರ್ಜನೆಯ ಪ್ರಾರಂಭ, ಧರ್ಮ ಮತ್ತು ಕರ್ತವ್ಯದ ದಾರಿ. ಇದರ ಭಾಗವಾಗಿ ಧರಿಸಲಾಗುವ ಜನಿವಾರವನ್ನು “ಜ್ಞಾನದ ಕಣ್ಣು” ಎಂದು ಬಣ್ಣಿಸಲಾಗುತ್ತದೆ. ಅಂಥ ಪುಣ್ಯ ಆಚರಣೆಯ ಪ್ರತೀಕವಾದ ಜನಿವಾರವನ್ನು, ಶಿಕ್ಷಣ ಕೇಂದ್ರವೆಂಬ ಜ್ಞಾನ ಮಂದಿರದಲ್ಲಿಯೇ ಬಲವಂತವಾಗಿ ತೆಗೆಸಲಾಗಿದೆ ಎಂದರೆ ಅದು ಕೇವಲ ತಪ್ಪು ಅಲ್ಲ ಬಹು ದೊಡ್ಡ ಅಪರಾಧ.ಇಲ್ಲಿ ಅಧಿಕಾರಿಗಳ ಮೂಲಕ “ಜ್ಞಾನದ ಕಣ್ಣಿಗೆ ಕತ್ತರಿ ಇಡಲಾಗಿದೆ.
ಜನಿವಾರವನ್ನು ಬಲವಂತವಾಗಿ ಉದ್ದೇಶ ಪೂರ್ವಕವಾಗಿ ತೆಗೆಸಲಾಗಿದೆ.ಬ್ರಾಹ್ಮಣ ವಿದ್ಯಾರ್ಥಿಗಳ ಉಪನಯನದ ಭಾಗವಾಗಿರುವ ಜನಿವಾರವು ಅವರ ಧಾರ್ಮಿಕ ಮತ್ತು ವೈದಿಕ ಜೀವನದ ಸಂಕೇತ. ಉಪನಯನವು “ಜ್ಞಾನೋದಯದ” ದ್ವಾರ. ಅದೇ ಜ್ಞಾನದ ಕಚೇರಿಯಂತೆ ಇರಬೇಕಾದ ಪರೀಕ್ಷಾ ಕೊಠಡಿಯಲ್ಲಿ, ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯ ನಿರಾಕರಣೆ ಅಲ್ಲ, ಜ್ಞಾನದ ಪವಿತ್ರತೆಯ ಅವಮಾನವೂ ಆಗಿದೆ. ಜಾತಿ ಹೆಸರಿನಲ್ಲಿ ರಾಜಕೀಯದ ತೀಟೆ ತೀರಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಈಗ ಧರ್ಮದ ಗೌರವದ ಮೇಲೆ ಧುಮುಕಲು ಮುಂದಾಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಇದೊಂದು ಪರೀಕ್ಷಾ ದಿನವಲ್ಲ, ಶೋಕದ ದಿನವಾಗಿದೆ.ವಿದ್ಯಾರ್ಥಿಗಳ ಆಂತರಿಕ ಶ್ರದ್ಧೆಗಳಿಗೆ ಘಾಸಿಯಾಗಿರುವ ಈ ವರ್ತನೆ ಮಾನವೀಯ ಮೌಲ್ಯಗಳ ಧಿಕ್ಕಾರವಾಗಿದೆ ಎಂದು ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ