ಎಂಟು ತಿಂಗಳ ಗರ್ಭಿಣಿಯನ್ನು, ಕತ್ತು ಹಿಸುಕಿ ಕೊಂದ ಪತಿ

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಿಎಂ ಪಾಲೆಮನ ಉಡಾ ಕಾಲೋನಿಯಲ್ಲಿ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತುಹಿಸುಕಿ ಪತಿಯೇ ಕೊಂದ ಘಟನೆ ವರದಿಯಾಗಿದೆ.
ಜ್ಞಾನೇಶ್ವರ್ ಮತ್ತು ಅನುಷಾ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದು, ಇದೀಗ ಸಣ್ಣ ಜಗಳದ ಕಾರಣಕ್ಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದ 27 ವರ್ಷದ ಪತ್ನಿ ಅನುಷಾಳನ್ನು ಪತಿ ಜ್ಞಾನೇಶ್ವರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಜ್ಞಾನೇಶ್ವರ್ ಸ್ವಲ್ಪ ಸಮಯದಿಂದ ನನಗೆ ಕ್ಯಾನ್ಸರ್ ಇದೆ, ಒಂದು ವರ್ಷದಲ್ಲಿ ಸಾಯುತ್ತೇನೆ. ನೀನು ಅಪ್ಪ ಅಮ್ಮನ ಮನೆಗೆ ಹೋಗು ಎಂದು ನಾಟಕ ಶುರು ಮಾಡಿಕೊಂಡಿದ್ದಾನೆ. ಆದರೆ ಅನುಷಾ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿದ್ದಾಳೆ. ನಂತರ ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ. ಅವರು ನಿನ್ನನ್ನು ಮತ್ತು ನನ್ನನ್ನು ಬದುಕಲು ಬಿಡುವುದಿಲ್ಲ. ಆದ್ದರಿಂದ ವಿಚ್ಛೇದನ ಪಡೆದುಕೊಳ್ಳೋಣ ಎಂದು ಹಠ ಹಿಡಿದಿದ್ದಾನೆ. ಆದರೆ ಅನುಷಾ ಆ ಮಾತನ್ನು ಕೇಳಿರಲಿಲ್ಲ. ಈ ಕಾರಣಕ್ಕಾಗಿ ಪತ್ನಿ ಅನುಷಾಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಸಣ್ಣ ವಿಷಯಕ್ಕೆ ಜಗಳ ಆರಂಭಗೊಂಡಿದ್ದು ,ಅನುಷಾಳ ಕತ್ತು ಹಿಸುಕಿದ್ದಾನೆ. ನಂತರ ಮನೆಯವರಿಗೆ ಕರೆ ಮಾಡಿ ನಿಮ್ಮ ಮಗಳು ಪ್ರಜ್ಞೆ ತಪ್ಪಿದ್ದಾಳೆ ಎಂದು ತಿಳಿಸಿದ್ದಾನೆ. ಪೋಷಕರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಜ್ಞಾನೇಶ್ವರ್ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.