
ನವದೆಹಲಿ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದು ಅದೇನೆಂದರೆ ಇನ್ನು ಮುಂದೆ ಹೋಟೆಲ್‌ಗಳಲ್ಲಿ, ಅಂಗಡಿ ಹಾಗೂ ಪ್ರಯಾಣದ ಸಮಯದಲ್ಲಿ ಆಧಾರ್ ಫೋಟೋ ಪ್ರತಿಯನ್ನು ಹಸ್ತಾಂತರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಡಿಜಿಟಲ್ ಪರಿಶೀಲನೆಗಾಗಿ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಆರಂಭಿಸಿದ್ದು ಬಳಕೆದಾರರ ನಿಯಂತ್ರಣ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ ಎಂದು ಅಶ್ವಿನಿ ವೈಷ್ಣವ್ ಎಕ್ಸ್ ಖಾತೆಯಲ್ಲಿ ವೀಡಿಯೋ ಮೂಲಕ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು.
ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಫೇಸ್ ಐಡಿ ದೃಢೀಕರಣವನ್ನು ಪರಿಚಯಿಸುತ್ತದೆ. ಬಳಕೆದಾರರ ಆಧಾರ್ ಪರಿಶೀಲನೆ ಭೌತಿಕವಾಗಿ ಇರದೇ ಡಿಜಿಟಲ್ ರೂಪದಲ್ಲಿ ಪರಿಶೀಲನೆ ಆಗಲಿದೆ.
ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಬಳಕೆದಾರರ ಫೇಸ್ ಐಡಿ ದೃಢೀಕರಣ ಮಾಡುವುದು ಈ ಆಪ್‌ನ ಪ್ರಮುಖ ಅಂಶವಾಗಿದ್ದು ಇದರಿಂದ ಗುರುತಿನ ಚೀಟಿ ಹಾಗೂ ಮಾಹಿತಿ ಪರಿಶೀಲನೆ ಹೆಚ್ಚು ಸರಳವಾಗಿರುತ್ತದೆ. ಇದರೊಂದಿಗೆ ಯುಪಿಐ ರೀತಿಯಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸಬಹುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.