ಭಾಗ 161
ಭರತೇಶ್ ಶೆಟ್ಟಿ ಎಕ್ಕಾರ್

ಶಕುನಿ ಮುಂದೆ ಬಂದು ಧೃತರಾಷ್ಟ್ರನಿಗೆ ಪ್ರಣಾಮಗಳನ್ನು ಸಲ್ಲಿಸಿ ಮಾತಿಗಾರಂಭಿಸಿದ. “ಮಹಾರಾಜಾ, ನಮ್ಮ ಹಸ್ತಿನಾವತಿ ವರ್ತಮಾನ ಕಾಲದಲ್ಲಿ ಪ್ರಖ್ಯಾತವಾಗಿದೆ. ಚಕ್ರವರ್ತಿಗಳು ಈ ವಂಶದಲ್ಲಿ ಆಳಿ ಅಳಿದಿದ್ದಾರೆ. ಈಗ ಪಾಂಡು ಪುತ್ರರು ರಾಜಸೂಯ ಯಾಗ ಮುಖೇನ ಸಾಧಿಸಿ ಚಕ್ರವರ್ತಿಗಳಾಗಿದ್ದಾರೆ. ನಮ್ಮವರು ಅವರೆಂದು ಇಂದ್ರಪ್ರಸ್ಥಕ್ಕೆ ಪ್ರೀತಿಯಿಂದ ಹೋದವರು ನಾವು. ದುರ್ಯೋಧನ ನಿಮ್ಮ ಮಗ, ಮಹಾರಾಜನ ಮಗ. ಈಗ ಯುವರಾಜನೂ ಹೌದು. ಹಾಗಿದ್ದೂ ಮರ್ಯಾದೆಯ ವಿಚಾರ ಬಿಡೋಣ ಅಪಮಾನಿತನಾಗಿ ನೋವುಂಡು ದಿನಕಳೆದಂತೆ ಕೊರಗಿ ಸೊರಗುತ್ತಿದ್ದಾನೆ. ಆಕ್ರೋಶಿತನಾಗಿ ಪ್ರತಿಕಾರದ ಯುದ್ದಕ್ಕೆ ಮನ ಮಾಡುತ್ತಿದ್ದ ಅವನನ್ನು ಸಂತೈಸಿ ಪಾಂಡವರ ಎದುರು ಗೆಲುವು ಅಸಾಧ್ಯ. ಭೀಮಾರ್ಜುನರು, ಕೃಷ್ಣ ಬಲರಾಮರು, ದ್ರುಪದ, ದೃಷ್ಟದ್ಯುಮ್ನರೆಲ್ಲಾ ಸೇರಿ ಬಲಿಷ್ಟರಾಗಿಯೂ, ಅಜೇಯರಾಗಿಯೂ ಇರುವ ಪಾಂಡವ ಪಕ್ಷವನ್ನು ನೇರ ಯುದ್ದದಿಂದ ಮಣಿಸಲಾಗದು. ಇಂತಿರುವಾಗ ದ್ಯೂತ ಮುಖೇನ ಸೋಲಿಸಿ ನಮ್ಮ ಅಧೀನರನ್ನಾಗಿಸುವ ಯೋಚನೆಯಿಂದ ಯೋಜನೆ ರೂಪಿಸಿದ್ದೇವೆ. ಮಹಾರಾಜಾ, ದ್ಯೂತದಲ್ಲಿ ಪಾಂಡವರನ್ನು ಗೆದ್ದು ನಿಮ್ಮ ಮಗನಿಗಾದ ಮಾನ ಹಾನಿಗೆ ಪ್ರಾಯಶ್ಚಿತ್ತವನ್ನೂ, ಆತನ ಮನದ ವೇದನೆಗೆ ಸುಖವನ್ನೂ ನಾನು ಒದಗಿಸಿಕೊಡಬಲ್ಲೆ. ಈ ಕಾರ್ಯಕ್ಕೆ ಬೇಕಾಗಿರುವುದು ನಿಮ್ಮ ಅಪ್ಪಣೆ ಮತ್ತು ಸಹಕಾರ ಮಾತ್ರ. ವಿಶಾಲ ಮನಸ್ಸಿನಿಂದ ನಿಮ್ಮ ಮಗನ ವೇದನೆ ಅರಿತು ಸಹಕಾರಿಯಾಗಬೇಕೆಂಬ ಅಪೇಕ್ಷೆಯಿದೆ” ಎಂದನು. ಆದರೆ ಧೃತರಾಷ್ಟ್ರ ಶಕುನಿಯ ಕುಟಿಲ ತಂತ್ರವನ್ನು ಅರಿತು, ಅದು ಸನ್ಮಾರ್ಗವಲ್ಲ ಎಂದು ತಿಳಿದು ಒಪ್ಪಿಗೆ ನೀಡಲಿಲ್ಲ. “ದ್ಯೂತ ಒಳಿತಲ್ಲ. ಪಾಂಡವರು ನನ್ನ ತಮ್ಮನ ಮಕ್ಕಳಾದರೂ ನನಗೂ ಮಕ್ಕಳ ಸಮಾನರೆ ಆಗಿದ್ದಾರೆ. ಅವರ ಶ್ರೇಯಸ್ಸು ಚಂದ್ರವಂಶದ ಕೀರ್ತಿಗೆ ಎಂದೆಂದಿಗೂ ಪೂರಕವೇ ಹೊರತು ಮಾರಕವಾಗದು. ನಿಮ್ಮ ಯೋಜನೆ ಕೈಬಿಟ್ಟು ಬಿಡುವುದು ಒಳಿತು” ಎಂದನು.
ಇದನ್ನು ಕೇಳಿ ದುರ್ಯೋಧನ ಆಕ್ರೋಶಭರಿತನಾದ. “ಅಪ್ಪಾ, ನಿಮಗೆ ಪಾಂಡವರ ಬೆಳವಣಿಗೆಯೆ ಸಂತೋಷ ನೀಡುವುದಾದರೆ ಹಾಗೆಯೇ ಆಗಲಿ. ನಾನು ಮಾನವಂತನಾಗಿ ಹೋಗಿ, ಅತಿ ನಿಕೃಷ್ಟ ರೀತಿಯಲ್ಲಿ ಅವರಿಂದ ಅಪಮಾನಕ್ಕೆ ಒಳಗಾಗಿ ಕೊರಗುತ್ತಿದ್ದೇನೆ. ನನಗೆ ತೇಜೋವಧೆ ಮತ್ತುಸಾವು ಸರಿ ಸಮಾನ. ಇನ್ನು ನಾನು ಬದುಕಿ ಉಳಿಯುವುದಕ್ಕಿಂತ ಸಾಯುವುದೇ ಒಳಿತು. ಅಪ್ಪನಾಗಿ ನಿಮ್ಮ ಮಕ್ಕಳ ಬಗ್ಗೆ ಮಮಕಾರ ಇಲ್ಲ ಎಂದು ಗೊತ್ತಾದ ಮೇಲೆ ಇನ್ನು ನಾನು ಬದುಕುವ ಅಕಾಂಕ್ಷೆ ಹೊಂದಿಲ್ಲ. ಈ ಕೀಳು ಮಟ್ಟದ ನರಕ ಜೀವನಕ್ಕಿಂತ ಮರಣವೇ ನನಗೆ ಶ್ರೇಯಸ್ಕರ. ಪ್ರಾಣತ್ಯಾಗವಷ್ಟೆ ನನಗಿರುವ ಏಕಮಾತ್ರ ದಾರಿ. ನಾನು ಅದರಲ್ಲೇ ಸಂತಪ್ತನಾಗಿ ಸಂತೃಪ್ತಿಯನ್ನು ಕಾಣುತ್ತೇನೆ” ಎಂಬುವುದಾಗಿ ಹಠಭರಿತ ಬೆದರಿಕೆಯ ಮಾತುಗಳನ್ನಾಡಿದನು.
ಎಷ್ಟಾದರೂ ಕಣ್ಣು ಕಾಣದ ಅಂಧರಾಜನಲ್ಲವೇ ಧೃತರಾಷ್ಟ್ರ. ದೃಷ್ಟಿಯಿಂದ ದೈಹಿಕವಾಗಿದ್ದ ಕತ್ತಲೆ ಈಗ ಮಾನಸಿಕವಾಗಿಯೂ ಅಂಧಕಾರ ಕವಿಯುವಂತೆ ಮಾಡಿ, ಮಗನ ಮಾತು ಹೌದೇನೋ ಅನಿಸಿತು. ಪುತ್ರ ವ್ಯಾಮೋಹದ ಬಲೆಯಲ್ಲಿ ಬಂಧಿಯಾಗಿ ಒಪ್ಪಿಗೆ ಸೂಚಿಸಿಯೆ ಬಿಟ್ಟನು.
ಮಯ ಮಂಟಪ, ಇಂದ್ರಪ್ರಸ್ಥದ ವಿಶ್ವಕರ್ಮ ನಿರ್ಮಿತ ಭವನದ ವೈಭವಕ್ಕೆ ಪ್ರತಿಯಾಗಿ ಹಸ್ತಿನಾವತಿಯಲ್ಲಿ ಮಹತ್ತರವಾದ ಭವನವೊಂದರ ನಿರ್ಮಾಣ ಆರಂಭವಾಯಿತು. ರಾಜ ವೈಭವ – ವೈಭೋಗಗಳಿಗೆ ದರ್ಪಣ ರೂಪದಲ್ಲಿ ಏನೇನು ಮನುಷ್ಯ ಪ್ರಯತ್ನದಲ್ಲಿ ಸಾಧ್ಯವೋ ಅದೆಲ್ಲವನ್ನೂ ಮಾಡಿಸಿ ದ್ಯೂತಕ್ಕಾಗಿ ಭವನ ನಿರ್ಮಾಣಗೊಂಡಿತು. ಸಕಲ ವ್ಯವಸ್ಥೆಗಳೂ, ಅಲಂಕಾರ, ಆಡಂಬರಗಳು ಎದ್ದು ಕಾಣುತ್ತಿದ್ದವು.
ಈ ಎಲ್ಲಾ ಬೆಳವಣಿಗೆಗಳನ್ನೂ ಕಂಡು ವಿದುರ ವಿಚಾರ ಸಂಗ್ರಹಿಸಿ ತಳಿದುಕೊಂಡ. ಧೃತರಾಷ್ಟ್ರನಲ್ಲಿಗೆ ಬಂದು, “ಮಹಾರಾಜ, ನಮ್ಮದಾದ ಚಂದ್ರವಂಶೀಯರ ಸಾಮ್ರಾಜ್ಯ ಉತ್ತುಂಗದ ಕೀರ್ತಿ ಶಿಖರವೇರಿದೆ. ಈಗಿನ ವಾಸ್ತವ ಸಂಗತಿಗಳನ್ನು ಅವಲೋಕಿಸಿದರೆ ವಂಶ ನಿರ್ವಂಶವಾಗುವ ಹೆಜ್ಜೆಗಳು ಗೋಚರಿಸುತ್ತಿವೆ. ಸಾಮ್ರಾಜ್ಯದ ಉಳಿವು, ವಂಶದ ರಕ್ಷಣೆ ರಾಜನಾಗಿ ನಿಮ್ಮ ಕರ್ತವ್ಯ. ಈ ದ್ಯೂತವೇಕೋ ನನ್ನ ಮನಸ್ಸಿಗೆ ಆತಂಕದ ಕರಿ ಛಾಯೆ ಕವಿಯುವಂತೆ ಮಾಡಿದೆ. ವಿನಾಶಕಾರಿಯಾದ ಈ ಪ್ರಕ್ರಿಯೆಯನ್ನು ತಡೆಯುವ ಪೂರ್ಣಾಧಿಕಾರವೂ, ಹೊಣೆಗಾರಿಕೆಯ ಜವಾಬ್ದಾರಿಯೂ ನಿಮ್ಮದಾಗಿದೆ. ಯೋಚನೆ ಮಾಡಿ ಸರಿಯಾದ ನಿರ್ಧಾರ ನಿಮ್ಮಿಂದ ಪ್ರಕಟವಾದರೆ ಉತ್ತಮ” ಎಂದನು. ಆಗ ಧೃತರಾಷ್ಟ್ರ, “ವಿದುರಾ, ನೀನೇಕೋ ಗೊಂದಲಕ್ಕೊಳಗಾಗಿದ್ದೀಯಾ. ಇಲ್ಲಿ ನಡೆಯಲಿರುವುದು ಸುಖ ಸುಹೃದ್ಯೂತ. ಅಣ್ಣ ತಮ್ಮಂದಿರಾದ ಪಾಂಡವ – ಕೌರವರು ಆತ್ಮೀಯತೆಯಿಂದ ಆಡಲಿದ್ದಾರೆ. ಸಂಬಂಧದೊಳಗಿನ ಈ ಆಟದಿಂದ ಏನೂ ತೊಂದರೆಯಾಗದು. ನಿನಗೊಂದು ಜವಾಬ್ದಾರಿ ವಹಿಸುತ್ತೇನೆ. ನನ್ನ ಅಪ್ಪಣೆಯಂತೆ ನೀನೇ ಇಂದ್ರಪ್ರಸ್ಥಕ್ಕೆ ತೆರಳಿ, ನನ್ನ ಮುಖವಾಣಿಯಾಗಿ ಪಾಂಡವರನ್ನು ದ್ಯೂತಕ್ಕೆ ಆಹ್ವಾನಿಸಬೇಕು. ಧೃತರಾಷ್ಟ್ರನಾದ ನಾನು ಪ್ರೀತಿಯಿಂದ ನಿಮಂತ್ರಿಸಿ ಕರೆಸುತ್ತಿದ್ದೇನೆ ಎಂದು ಅಗ್ರ ಪಾಂಡವ ಧರ್ಮರಾಯನಿಗೆ ತಿಳಿಸಬೇಕು. ಕಾಲಹರಣ ಮಾಡದೆ ಶೀಘ್ರವಾಗಿ ರಾಜನಾದ ನನ್ನ ರಾಜಾಜ್ಞೆಯನ್ನು ಪಾಲಿಸಬೇಕಾದ ಜವಾಬ್ದಾರಿ ನಿನ್ನದ್ದು” ಎಂದು ಆಜ್ಞಾಪಿಸಿದನು.
ನಿರುಪಾಯನಾದ ವಿದುರ ಇಂದ್ರಪ್ರಸ್ಥಕ್ಕೆ ನಿರ್ಗಮಿಸಿದನು. ಧರ್ಮರಾಯನಿಂದ ಸತ್ಕರಿಸಿ ಉಪಚರಿಸಲ್ಪಟ್ಟು ವಿಶೇಷ ಅತಿಥಿಯಾದನು. ಹಸ್ತಿನೆಯ ಸುಖ ಸಮಾಚಾರ ಗಳನ್ನೆಲ್ಲ ಧರ್ಮರಾಯ ಎಳೆ ಎಳೆಯಾಗಿ ಪ್ರಶ್ನಿಸುತ್ತಾ ಕೇಳಿ ತಿಳಿದುಕೊಂಡನು. ಆ ಬಳಿಕ ತಾನು ಬಂದ ಕಾರ್ಯ ಕಾರಣವನ್ನು ಧರ್ಮರಾಯನಲ್ಲಿ ವಿದುರ ವಿವರಿಸಿ ಹೇಳ ತೊಡಗಿದನು. “ಧೃತರಾಷ್ಟ್ರನ ಆಜ್ಞಾನುವರ್ತಿಯಾಗಿ ಇಂದ್ರಪ್ರಸ್ಥಕ್ಕೆ ಬಂದಿರುವೆನು. ಹಸ್ತಿನಾವತಿಗೆ ಕೆಲ ದಿನದ ಮಟ್ಟಿಗೆ ಸಪತ್ನೀಕನಾಗಿ, ಸಹೋದರೆಲ್ಲರ ಜೊತೆಯಾಗಿ ಬರಬೇಕಂತೆ. ಅಲ್ಲಿ ಪಾಂಡವ -ಕೌರವರ ಮಧ್ಯೆ ಮೋಜಿನ ದ್ಯೂತ ಆಡಲಿಕ್ಕಿದೆಯಂತೆ” ಎಂದು ಅಸಮಾಧಾನದ ಧ್ವನಿಯಲ್ಲಿ ವಿನಂತಿಸಿದನು. ಕೇಳಿಸಿಕೊಂಡ ಯುಧಿಷ್ಟಿರ, “ಹೌದೇ? ಬಹಳ ಸಂತೋಷ. ದೊಡ್ಡಪ್ಪ ನಮ್ಮ ಹಿರಿಯರು. ಅವರು ಕರೆಸಿದ್ದಾರೆ ಎಂದಾದರೆ ಸಂತೋಷದಿಂದ ಬರುತ್ತೇವೆ” ಎಂದನು.
ಧರ್ಮರಾಯನ ಉತ್ಸಾಹ ಕಂಡು ವಿದುರ ಎಚ್ಚರಿಕೆಯ ಮಾತುಗಳಿಂದ ತಡೆಯುವ ಪ್ರಯತ್ನ ಮಾಡಿದನು. “ಧರ್ಮರಾಯ, ನೀನು ಯಾಕೋ ಅವಸರ ತೋರುತ್ತಿರುವೆ. ನಾಳೆ ಅದು ಅಪಾಯಕ್ಕೆ ಕಾರವಾದೀತು. ಜಾಣನಾಗಿ ಉಪಾಯದಿಂದ ಈ ಆಹ್ವಾನ ನಿರಾಕರಿಸಿದರೆ ಕ್ಷೇಮವಾದೀತು. ನನಗೆ ಈ ಕರೆಯ ಹಿಂದೆ ಷಡ್ಯಂತ್ರದ ವಾಸನೆ ಬಡಿಯುತ್ತಿದೆ”. ಎಂದನು.
ಧರ್ಮರಾಯ ಅರೆಕ್ಷಣ ಯೋಚಿಸಿ ಉತ್ತರಿಸತೊಡಗಿದ, “ಅಯ್ಯಾ ಮಂತ್ರೀಶ, ನೀವು ನಮ್ಮ ಹಿತೈಷಿಗಳೇ ಹೌದು, ನಮಗದರಲ್ಲಿ ಸಂದೇಹವೇ ಇಲ್ಲ. ನಿಮಗೆ ನಮ್ಮ ಮೇಲಿರುವ ಕಾಳಜಿ ಪಾಂಡವರಾದ ನಮಗೈವರಿಗೆ ಅತಿ ಸಂತೋಷದ ವಿಚಾರ. ಹಾಗೆಂದು ಕ್ಷತ್ರಿಯರಾಗಿ ಯುದ್ಧ ಮತ್ತು ದ್ಯೂತದ ಆಹ್ವಾನವನ್ನು ತಿರಸ್ಕರಿಸುವುದು ಧರ್ಮವಾಗದು. ನೀವು ತರ್ಕಿಸಿದಂತೆ ಅಲ್ಲಿ ಕುಟಿಲತೆ ಇರುವುದು ಹೌದೇ ಆದರೂ ನಮಗೆ ಸ್ವೀಕಾರವೇ. ವಾರಣಾವತದಲ್ಲಿ ನಡೆದ ಮಾರಣ ಹೋಮಕ್ಕೆ ನಾವು ಬಲಿಯಾಗಬೇಕಿತ್ತು. ಆದರೆ ಧರ್ಮವೇ ನಮ್ಮ ಸಂರಕ್ಷಣೆ ಮಾಡಿರುವುದು ನಿಮಗೆ ತಿಳಿದ ವಿಚಾರ. ಹಾಗೆಂದು ನಮಗೇನೂ ತೊಂದರೆ ಆಗಲಿಲ್ಲ. ಬದಲಾಗಿ ಸಂಪ್ರಾಪ್ತಿ ಆಗುತ್ತಲೆ ಸಾಗಿ, ರಾಜಸೂಯ ಯಾಗ ಪೂರೈಕೆಯವರೆಗೆ ನಮ್ಮ ಪಾಲಿಗೆ ಲಾಭಪ್ರದವಾಗಿ ಪರಿಣಮಿಸಿತು. ಈಗಲೂ ಅದೇ ವಿಶ್ವಾಸ ನನಗಿದೆ. ಒಂದೊಮ್ಮೆಗೆ ಕಪಟದ ಯೋಜನೆ ರೂಪಿಸಿ ಕರೆದಿರುವುದೇ ಹೌದಾದರೂ ತಾತ್ಕಾಲಿಕ ಸಂಕಷ್ಟ ನಮಗೊದಗಿ ಬಂದರೂ ಬರಬಹುದು. ಆದರೆ ಭವಿಷ್ಯದಲ್ಲಿ ಶಾಶ್ವತ ಸುಖ ಸಮೃದ್ಧಿ ಪ್ರಾಪ್ತವಾದೀತು ಎಂದು ನನ್ನ ಅಂತರಂಗ ಸೂಚಿಸುತ್ತಿದೆ.” ಎಂದು ತನ್ನ ಮನದ ಅಭಿಪ್ರಾಯ ಪ್ರಕಟಿಸಿದನು. ವಿದುರ ಏನೂ ಮಾಡಲಾಗದೆ,” ಅಯ್ಯಾ, ಧರ್ಮರಾಯ ಸೂಕ್ಷಾತಿಸೂಕ್ಷ್ಮ ಎಚ್ಚರಿಕೆ ನಿನ್ನ ಹೆಜ್ಜೆಹೆಜ್ಜೆಯಲ್ಲೂ ಅತೀ ಅಗತ್ಯ. ಮೋಸಕ್ಕೆ ಬಲಿಯಾಗದೆ ನೀನು ಜಾಗೃತನಾಗಿರು. ದ್ಯೂತ ಕ್ಷತ್ರಿಯರಿಗೆ ಧರ್ಮವೇ ಆಗಿದ್ದರೂ ಆಡಲೇಬೇಕೆಂಬ ಕಡ್ಡಾಯವೇನೂ ಇಲ್ಲವಲ್ಲ. ಆಡದೇ ಉಳಿದರೆ ಅಧರ್ಮವಾಗದು.” ಎಂದು ಪರ್ಯಾಯ ವಿಧಿ ತರ್ಕಿಸಿದನು.
ಧರ್ಮರಾಯ ಮಾತ್ರ ಧರ್ಮದಲ್ಲೇ ವಿಶ್ವಾಸವಿರಿಸಿ ಹೇಳತೊಡಗಿದ “ನಾವೇನೇ ಮಾಡಿದ್ದರೂ, ಮಾಡುವುದಿದ್ದರೂ ಧರ್ಮವನ್ನು ಅನುಸರಿಸಿಯೇ ಹೊರತು ಅನ್ಯತಾ ಏನೂ ಯೋಚಿಸಲಾರೆವು. ಹಿರಿಯರಾದ ದೊಡ್ಡಪ್ಪನ ಕರೆಯನ್ನು ಮನ್ನಿಸಿ ಹೋಗದೆ ಉಳಿಯುವುದು ನಮಗೆ ಸಾಧ್ಯವಾಗದ ವಿಚಾರ. ಹಾಗಾಗಿ ನಿಸ್ಸಂದೇಹವಾಗಿ ನಾವು ಮುಂದುವರಿಯೋಣ. ಧರ್ಮವೇ ನಮಗೆ ರಕ್ಷೆಯಾಗಿ ಕಾಪಾಡಲಿದೆ. ನಾಳೆಯೆ ಹೊರಡುವ ಸಿದ್ಧತೆಯಾಗಲಿ” ಎಂದು ತೀರ್ಮಾನಿಸಿ ಹೇಳಿದನು.
ಮುಂದುವರಿಯುವುದು…














































