ಭಾಗ 159
ಭರತೇಶ್ ಶೆಟ್ಟಿ,ಎಕ್ಕಾರ್

ಶಿಶುಪಾಲ ಮತ್ತವನ ಜೊತೆಗಿದ್ದ ದಂತವಕ್ತ್ರಾದಿಗಳ ವಧೆಗೆ ಪ್ರಾಯಶ್ಚಿತ್ತ ವಿಧಿಗಳು ನಡೆದವು. ಆ ಬಳಿಕ ಸಾಂಗವಾಗಿ ರಾಜಸೂಯ ಯಾಗ ಪುನರಾರಂಭಗೊಂಡು ವಿದ್ಯುಕ್ತವಾಗಿ ನಡೆದು ಸಂಪನ್ನಗೊಂಡಿತು. ದಾನ ಧರ್ಮಗಳು, ದಕ್ಷಿಣೆಯಾದಿಗಳು ಅಮಿತವಾಗಿ ಸತ್ಪಾತ್ರರಿಗೆಲ್ಲಾ ನೀಡಲ್ಪಟ್ಟು, ಮೃಷ್ಟಾನ್ನ ಭೋಜನ, ಬಗೆ ಬಗೆಯ ಭಕ್ಷ್ಯ, ಭೋಜ್ಯ, ಪೇಯಗಳಿಂದ ಸಂತರ್ಪಣೆಯೂ ನೆರವೇರಿತು. ಕೊನೆಗೆ ಯಾಗದ ಯಜಮಾನ ಧರ್ಮರಾಯನಿಗೆ – ಸಪತ್ನೀಕನಾಗಿ ದ್ರೌಪದಿಯೊಂದಿಗೆ ಅವಭೃತ ಸ್ನಾನವೂ ಆಯಿತು. ಧರ್ಮರಾಯ ಸಾಧನೆಯಿಂದ ಸಾಧಿಸಿ, ಅಭಿಷಿಕ್ತ ಚಕ್ರವರ್ತಿಯಾದನು. ಎಲ್ಲಾ ರಾಜ ಮಹಾರಾಜರಿಂದ ಚಕ್ರವರ್ತಿ ಅಭಿನಂದಿತನಾಗಿ, ಹಿರಿಯರ ಆಶೀರ್ವಾದಕ್ಕೆ ಪಾತ್ರನಾದನು. ಹೀಗೆ ಪಾಂಡು ಚಕ್ರವರ್ತಿಯ ಸದ್ಗತಿಗಾಗಿ ನಾರದರಿಂದ ಸೂಚಿಸಲ್ಪಟ್ಟ ಪುಣ್ಯಾಧ್ವರ ಸಂಪನ್ನಗೊಂಡಿತು. ಶ್ರೀಕೃಷ್ಣನು ಸೂಕ್ತ ಸಲಹೆ ಸೂಚನೆಗಳನ್ನು ಹೇಳಿ ದ್ವಾರಕೆಗೆ ನಿರ್ಗಮಿಸಿದನು. ಹಸ್ತಿನಾವತಿಯಿಂದ ಆಗಮಿಸಿದ್ದ ಭೀಷ್ಮ, ದ್ರೋಣ, ಕೃಪ, ವಿದುರಾದಿಗಳೂ ಹರಸಿ ಹಿಂದಿರುಗಿದರು. ಬಂದವರೆಲ್ಲಾ ಅವರವರ ರಾಜ್ಯಗಳಿಗೆ ಹಿಂದಿರುಗಿದರು.
ಶಕುನಿ, ದುರ್ಯೋಧನ ಮತ್ತು ಆತನ ಸಹೋದರರು ಕೆಲ ದಿನಗಳ ಕಾಲ ಅತಿಥಿಗಳಾಗಿ ಇಂದ್ರಪ್ರಸ್ಥದಲ್ಲಿ ಉಳಿದರು. ಒಂದು ದಿನ ಮಯನಿಂದ ನಿರ್ಮಿತವಾದ ಕೌತುಕ ಸ್ವಾರಸ್ಯಗಳ ಭವನ ‘ಮಯ ಮಂಟಪ’ ನೋಡಲು ದುರ್ಯೋಧನ, ಶಕುನಿಯ ಜೊತೆ ಹೊರಟನು. ಭೀಮನೇ ಮಾರ್ಗದರ್ಶಕನಾಗಿ ಕರೆದೊಯ್ದನು. ಸಂತೋಷದಿಂದ ಜೊತೆಯಾಗಿ ದ್ರೌಪದಿಯೂ ತನ್ನ ಸಖಿಯ ಜೊತೆ ಬಂದಳು. ಮಯ ಮಂಟಪದ ಅದ್ವಿತೀಯ ಸೊಬಗು ನೋಡಿ ಬೆರಗಾದ ಕೌರವನಿಗೆ ಮತ್ಸರ ಮನದಲ್ಲಿ ಮಡುಗಟ್ಟಿತು. ಧರ್ಮರಾಯ ಚಕ್ರವರ್ತಿಯಾಗಿ ಮೆರೆಯುತ್ತಿರುವ ದೃಶ್ಯದಿಂದ ಹತ್ತಿಸಿಕೊಂಡಿದ್ದ ಅಸೂಯೆಯ ಉರಿ ಈಗಾಗಲೇ ಮನಸ್ಸಿನೊಳಗೆ ಜ್ವಾಲೆಯಾಗಿ ವ್ಯಾಪಿಸಿ ಸುಡುತ್ತಿತ್ತು. ಈಗ ಮಯ ನಿರ್ಮಿತ ಭವನದ ಸೊಬಗು ಆ ಉರಿಯ ಕೆನ್ನಾಲಿಗೆ ತುಪ್ಪ ಸುರಿದಂತಾಗಿದೆ. ದುರ್ಯೋಧನನ ವಿಚಲಿತ ಮನಸ್ಸೂ, ಮಯ ಮಂಟಪದ ಕೌತುಕದ ಸೂಕ್ಷ್ಮಗಳೂ ಒಂದಕ್ಕೊಂದು ಪೂರಕವಾಗಿ ಮತ್ತಷ್ಟು ಗೊಂದಲ – ಗಲಿಬಿಲಿಗೊಳಿಸಿ ಮನಸ್ಸನ್ನು ವಿಚಲಿತಗೊಳಿಸಿದೆ. ನೀಲಿ ಕಲ್ಲಿನ ನೆಲದ ಹೊಳಪು ಬೆಳಕಿನ ಸಂವಹನದಿಂದ ನೀರಿನಂತೆ ಭ್ರಾಂತಿಗೊಳಿಸುತ್ತಿತ್ತು. ಸುತ್ತು ಕಟ್ಟೆಯಂತಿದ್ದು, ಮಧ್ಯ ನೀರು ತುಂಬಿರುವಂತೆಯೇ ಭಾಸವಾಗಿ, ಕೌರವ ತನ್ನ ವಸ್ತ್ರಗಳನ್ನೆತ್ತಿ ನಡೆದರೆ ಅದು ಬರೀ ನೆಲವೇ ಆಗಿತ್ತು. ಹಾಗೆಂದು ಮುಂದೆ ಬಂದಾಗ ಮತ್ತೆ ಅಂತಹುದೇ ರಚನೆಯಿದ್ದು ಬರಿಯ ನೆಲವೆಂದು ಹೆಜ್ಜೆ ಹಾಕಿದರೆ ಅಲ್ಲಿ ನಿಜ ನೀರು ಇದ್ದು, ಜಾರಿದ ಕೌರವ ಬಟ್ಟೆ ತೋಯಿಸಿಕೊಂಡನು. ಈ ಕ್ಷಣವನ್ನು ಕಂಡ ದ್ರೌಪದಿ ಮುಸು ಮುಸು ನಕ್ಕು ಬಿಟ್ಟಳು. ಭೀಮನು ಇವರ ಜೊತೆಯಿದ್ದರೂ ಮಯನ ಶಿಲ್ಪ ಚಾತುರ್ಯದ ಕೈಚಳಕವನ್ನು ನಿಜವಾಗಿ ಅನುಭವಿಸಿ ಆನಂದಿಸಲಿ ಎಂದು ಸುಮ್ಮನಿದ್ದು ಹಿಂಬಾಲಿಸುತ್ತಿದ್ದನು. ಮತ್ತೆ ಮುಂದೆ ಸಾಗುತ್ತಾ ಬಂದಾಗ ತೆರೆದ ಬಾಗಿಲಿನಂತೆ ಕಂಡು ಮುಂದೆ ನಡೆದು ಗೋಡೆಗೆ ಢಿಕ್ಕಿ ಹೊಡೆದು ಹಿಂದಿರುಗಿದ ಕೌರವ, ನಿಜವಾಗಿಯೂ ಮುಕ್ತ ದ್ವಾರ ಇದ್ದ ಕಡೆ ಕೈ ಚಾಚಿ ದೂರದಿಂದಲೇ ಪರಾಂಬರಿಸಿ ನೋಡಿ ಖಚಿತ ಪಡಿಸಿ ಮುನ್ನಡೆದನು. ಹಿಂಬಾಲಿಸಿ ಬರುತ್ತಿದ್ದ ದ್ರೌಪದಿ ಈ ದೃಶ್ಯ ಕಂಡು ಮತ್ತೆ ಭೀಮನನ್ನು ನೋಡಿ ಕಿರುನಗೆ ಬೀರಿದಳು. ಹೀಗೆ ಮಯ ನಿರ್ಮಿತವಾದ ಭವನ, ಮಂಟಪನ್ನೆಲ್ಲಾ ನೋಡುತ್ತಾ ಎಲ್ಲಿಂದ ಬಂದಿದ್ದೇವೆ, ಎಲ್ಲಿಂದ ಹೊರ ಹೋಗಬೇಕು ಎಂದು ತಿಳಿಯದಾಗದಷ್ಟು ಮಾಯಾಜಾಲದಂತಿದ್ದು, ಮತ್ತೆ ಇರಿಸು ಮುರಿಸಾಗದಿರಲಿ ಎಂದು ಭೀಮನೇ ಮುನ್ನಡೆದು ಕರೆದುಕೊಂಡು ಹೋಗಿ ಎಲ್ಲವನ್ನೂ ತೋರಿಸಿ ವಿವರಿಸಿ ಹೇಳಿ ಕರೆತಂದನು.
ಈ ಮಯ ಮಂಟಪ ವೀಕ್ಷಣೆಯ ಸಮಯ ದುರ್ಯೋಧನ ಮಾತ್ರ ತಾನು ಸಹಿಸಲಾಗದ ಮಟ್ಟಕ್ಕೆ ಅಪಮಾನಿತನಾದೆ ಎಂದು ಭಾವಿಸಿ ನೊಂದುಕೊಂಡನು. ಮಾವ ಶಕುನಿಯಲ್ಲಿ ಅತ್ತು ಗೋಗರೆದು “ಬೇಕು ಬೇಕೆಂದು ನನ್ನನ್ನು ಭೀಮ ಮತ್ತು ದ್ರೌಪದಿ ಅಪಹಾಸ್ಯ ಮಾಡಿದ್ದಾರೆ. ನಾನು ಭೀಮನ ದೊಡ್ಡಪ್ಪನ ಮಗ, ಹಸ್ತಿನೆಯ ಯುವರಾಜ, ರಾಜಧರ್ಮದಂತೆ ಗೌರವದಿಂದ ನಡೆಸಿಕೊಳ್ಳದೆ ಈ ರೀತಿ ಅವಮರ್ಯಾದೆ ಮಾಡಲು ನಾನೇನು ಹುಡುಗನೇ? ಚಕ್ರವರ್ತಿಯಾದ ಧರ್ಮರಾಯನ ಮಹಾರಾಜ್ಞಿಯಾದ ದ್ರೌಪದಿಗೆ ಅವಳದ್ದೆ ಆದ ಗೌರವದಿಂದ ನಡವಳಿಕೆ ತೋರುವ ಹೊಣೆಗಾರಿಕೆ ಇದೆ.ಆದರೆ ಭೀಮನ ಜೊತೆ ಸೇರಿ ತೀರಾ ನೀಚ ಸ್ವಭಾವದ ವರ್ತನೆ ಪ್ರದರ್ಶಿಸಿದ್ದಾಳೆ. ಇದು ಖಂಡಿತವಾಗಿಯೂ ಪೂರ್ವ ನಿರ್ಧಾರಿತ ಯೋಜನೆ. ನನಗೆ ಮಾನಸಿಕ ಹಿಂಸೆ ನೀಡಲೆಂದು ಆಕೆ ಭೀಮನ ಜೊತೆ ಬಂದು ಹೀಗೆ ಮಾಡಿದ್ದಾಳೆ. ಅಸಹನೀಯ ವೇದನೆಗೆ ಕಾರಣವಾದ ಅಪಮಾನಕ್ಕೆ ಪ್ರತಿಕಾರ ತೀರಿಸದೆ ನನ್ನ ಮನ ಶಾಂತವಾಗದು ಮಾವಾ” ಎಂದು ದುರ್ಯೋಧನ ಅಳಲು ತೋಡಿಕೊಂಡನು. ಶಕುನಿ ಇದೇ ಸಮಯವೆಂದು ಮತ್ತಷ್ಟು ಸೇರಿಸಿ ಹೇಳುತ್ತಾ, “ಬೇಕೆಂದೇ ಹೀಗೆ ಮಾಡಿ ನಿನ್ನನ್ನು ಗೋಳು ಹೊಯ್ದುಕೊಳ್ಳುವಂತೆ ನಡೆದುಕೊಂಡಿದ್ದಾರೆ. ಇಲ್ಲವಾದಲ್ಲಿ ದ್ರೌಪದಿ ಬರುವ ಅಗತ್ಯವೇ ಇರಲಿಲ್ಲ. ನೀನೇನಾದರು ನಿನ್ನ ಪತ್ನಿ ಭಾನುಮತಿಯ ಜೊತೆ ಇಲ್ಲಿ ಬಂದಿದ್ದರೆ ಸರಿ, ಆಕೆ ಬರುವುದಕ್ಕೊಂದು ಅರ್ಥ ಬರುತ್ತಿತ್ತು. ನಿಸ್ಸಂದೇಹವಾಗಿ ಅವರು ನಿನ್ನ ಮಾನಹರಣಕ್ಕಾಗಿ ಈ ರೀತಿ ವ್ಯವಹರಿಸಿ ಆನಂದ ಪಟ್ಟಿದ್ದಾರೆ” ಎಂದು ಹೇಳುತ್ತಾ ಕೌರವನನ್ನು ಕೆರಳಿಸಿದನು. ಆಗ ದುರ್ಯೋಧನನಿಗೆ ಮತ್ತಷ್ಟು ಕೋಪ ನೆತ್ತಿಗೇರಿತು. ಪಾಂಡವರ ಸಾಧನೆ, ಸಂಪಾದನೆ, ವೈಭವ ಮೇಲಾಗಿ ಚಕ್ರವರ್ತಿ ಪೀಠ ಪ್ರಾಪ್ತವಾದದ್ದು ಜೀರ್ಣವಾಗದ ಮತ್ಸರವಾಗಿ ಹೊಟ್ಟೆಯೊಳಗಿತ್ತು. ಈಗ ಈ ಪ್ರಕರಣ ಕ್ರೋಧ ರೂಪ ತಳೆದು ಪ್ರತಿಕಾರದ ಜ್ವಾಲೆಯಾಗಿ ಹೊತ್ತಿ ಉರಿಯುವಂತಾಯಿತು. ತನ್ನ ಮಾವನಲ್ಲಿ, “ನಾನು ಮುಯ್ಯಿಗೆ ಮುಯ್ಯಿ ತೀರಿಸಲೇ ಬೇಕು. ಆ ದ್ರೌಪದಿಯ ಮಾನ ಕಳೆಯಲೇ ಬೇಕು” ಎಂದು ಹೇಳಿಕೊಳ್ಳ ತೊಡಗಿದ. ಶಕುನಿ ತನ್ನ ಅಳಿಯನನ್ನು ಸಂತೈಸುತ್ತಾ, ಚಿಂತಿಸಬೇಡ, ಸಮಯಸಾಧಿಸಿ ಇದಕ್ಕಿಂತಲೂ ಮಹತ್ತರವಾದ ಯೋಜನೆ ರೂಪಿಸಿ ನಾವು ಅವರ ಮಾನ ಕಳೆಯುವ ಯೋಜನೆ ರೂಪಿಸೋಣ. ಈಗ ಸಮಾಧಾನ ತಾಳು. ಆವೇಶಕ್ಕೊಳಗಾಗಿ ವಿವೇಕಶೂನ್ಯನಾಗಬೇಡ ಎಂದು ನಿಯಂತ್ರಿಸಿದನು. ಆ ಬಳಿಕ ಇಂದ್ರಪ್ರಸ್ಥದಲ್ಲಿ ನಿಲ್ಲಲು ಮನಸ್ಸಿಲ್ಲದೆ ಧರ್ಮರಾಯನಲ್ಲಿ ನಾವು ಹೊರಡುತ್ತಿದ್ದೇವೆ ಎಂದು ತಿಳಿಸಿ ಕೌರವಾದಿಗಳು ಹಸ್ತಿನಾವತಿಗೆ ನಿರ್ಗಮಿಸಿದರು.
ಮುಂದುವರಿಯುವುದು…