
ಕಾರ್ಕಳ: ಸೋಮವಾರ ಬೆಳುವಾಯಿ ಕರಿಯನಂಗಡಿ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ “ಬೆಳುವಾಯಿಗೆ ದಾರಿ ಯಾವುದು” ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ತಮ್ಮ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಕರಿಮಣಿ ಸರಕ್ಕೆ ಕೈ ಹಾಕುವಾಗ ಎಳೆದಾಡಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ.
ದೂಡಿದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ವಿಚಾರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಯು ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.




