
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯು ಹೊಸ ಸೌಲಭ್ಯವನ್ನು ಭಕ್ತರಿಗೆ ಒದಗಿಸಿದ್ದು ಅದೇನೆಂದರೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ಸೇರಿದಂತೆ ರಾಜ್ಯದ ಒಟ್ಟು 14 ದೇವಾಲಯಗಳಲ್ಲಿ ಇ-ಪ್ರಸಾದ ಸೇವೆ ಆರಂಭಿಸಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಗುರುವಾರ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇ-ಪ್ರಸಾದ ಸೇವೆಗೆ ಚಾಲನೆ ನೀಡಿದ್ದು ದೇವಸ್ಥಾನಗಳಿಗೆ ತೆರಳಲು ಸಾಧ್ಯವಾಗದ ಭಕ್ತರು http://www.csc.devalaya.com ವೆಬ್ಸೈಟ್ ಮೂಲಕ ಪ್ರಸಾದವನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.
ಈ ಕುರಿತು ಮಾತನಾಡಿದ ಸಚಿವರು ವಯಸ್ಸಾದವರು, ಅಂಗವಿಕಲರು,
ಒಬ್ಬಂಟಿಯಾಗಿರುವವರು ಸೇರಿದಂತೆ ಹಲವರಿಗೆ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದಿದ್ದರೆ ಅಂತಹ ಸಂದರ್ಭದಲ್ಲಿ ಇ-ಪ್ರಸಾದವನ್ನು ಪಡೆಯಬಹುದು. “ನೋ ಲಾಸ್ ನೋ ಪ್ರಾಫಿಟ್” ನಲ್ಲಿ 100 ರಿಂದ 200 ರೂಗಳಲ್ಲಿ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಇಲಾಖೆಯ ಆಯುಕ್ತ ಡಾ| ಎಮ್. ವಿ ವೆಂಕಟೇಶ್ ಮಾತನಾಡಿ csc e- governance services india limited ಸಂಸ್ಥೆಯ ಸಹಯೋಗದಲ್ಲಿ ಈಗಾಗಲೇ ರಾಜ್ಯದ 14 ದೇವಾಲಯಗಳ ಪ್ರಸಾದ, ದೇವರ ಚಿತ್ರ ಮತ್ತು ದಾರ, ದೇವಾಲಯದ ಮಹಿಮೆ ಹಾಗೂ ಸ್ತೋತ್ರವನ್ನು ಮುದ್ರಿಸಿ 241 ಪ್ಯಾಕೆಟ್ ಗಳನ್ನು ಭಕ್ತರಿಗೆ ತಲುಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿನಲ್ಲೂ ಸಿಎಸ್‌ಸಿ ಸೇವೆ ಇದ್ದು ಭಕ್ತರು ಅಲ್ಲಿಗೆ ತೆರಳಿಯೂ ತಮಗೆ ಬೇಕಾದ ದೇವಾಲಯದ ಪ್ರಸಾದವನ್ನು ಪಡೆಯಬಹುದಾಗಿದೆ. ಆರ್ಡರ್ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ಪ್ರಸಾದ ಮನೆಬಾಗಿಲಿಗೆ ತಲುಪಲಿದೆ ಎಂದು ತಿಳಿಸಿದರು.



















