
ಕಲಬುರಗಿ: ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಆಗಿರೋದು ಸ್ಪಷ್ಟ. ಇದರ ವಿರುದ್ಧ ಬಿಜೆಪಿ ಸೋಮವಾರದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಲಾಲ್ ಬಜೆಟ್ ವಿರುದ್ಧದ ಬಿಜೆಪಿಯ ಈ ಹೋರಾಟಕ್ಕೆ ಜೆಡಿಎಸ್ನ ಬೆಂಬಲವೂ ಇದೆ. ಈಗಾಗಲೇ ಈ ಬಗ್ಗೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ ಜೊತೆ ಮಾತಾಡಿದ್ದು ಬೆಂಗಳೂರಿಗೆ ಹೋದ ನಂತರ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸುವೆ ಎಂದು ಹೇಳಿದರು.
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಅಲ್ಲ, ಹಾಗಂತ ನಾವು ಓಲೈಕೆ ರಾಜಕೀಯ ಮೆಚ್ಚೋದಿಲ್ಲ. ಮುಸ್ಲಿಂ ಓಲೈಕೆ ನೆಪದಲ್ಲಿ ಹಿಂದೂಗಳಿಗೆ ಅವಮಾನ ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಟ ರೂಪಿಸಿದ್ದೇವೆ. ಜೆಡಿಎಸ್ ಜೊತೆ ಸೇರಿ ಸೋಮವಾರದಿಂದ ರಾಜ್ಯದಲ್ಲಿ ಹೋರಾಟ ನಡೆಸುತ್ತೇವೆ. ಅಲ್ಪಸಂಖ್ಯಾತರ ಓಲೈಕೆ ಬಿಟ್ಟರೆ ಬಜೆಟ್ನಲ್ಲಿ ಬೇರೆನೂ ಇಲ್ಲ. ಸಿದ್ದರಾಮಯ್ಯ ಅವರಂತಹ ಅನುಭವಿ ಸಿಎಂರಿಂದ ಈ ರೀತಿಯ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.