
ಉಡುಪಿ: ಕಳೆದ ಕೆಲ ದಿನಗಳ ಹಿಂದೆ ಮಲ್ಪೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಮೀನುಗಾರರ ಮೇಲೆ ಹಾಕಿರುವ ಜಾತಿನಿಂದನೆ ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆದು ಎರಡು ದಿನಗಳಲ್ಲಿ ಜಾಮೀನು ಸಿಗುವಂತೆ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಛೇರಿ ಅಥವಾ ಎಸ್ ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಮೀನುಗಾರರ ಸಂಘಟನೆ ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 22ರಂದು ಮಲ್ಪೆ ಮೀನುಗಾರರ ಸಂಘದ ವತಿಯಿಂದ ಮಲ್ಪೆ ಬಂದರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಮಾಜಿ ಶಾಸಕ ಕೆ ರಘುಪತಿ ಭಟ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಮೊದಲಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಅಡಿ ದೂರು ದಾಖಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ ಬಂದರಿನಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದು ಕೂಡಲೇ ಜಾತಿ ನಿಂದನೆ ಪ್ರಕರಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು:
- ಬಂಧಿತರಾಗಿರುವ ಮೀನುಗಾರ ಮಹಿಳೆಯರ ಮೇಲೆ ಹಾಕಿರುವ ಜಾತಿ ನಿಂದನೆ ಪ್ರಕರಣ ವಾಪಸ್ ಪಡೆದು ಬಿಡುಗಡೆ ಮಾಡಬೇಕು.
- ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
- ಮಲ್ಪೆಯಲ್ಲಿ ಕಳ್ಳತನ ಮಾಡುವವರ ವಿರುದ್ಧ ಪಿಟ್ಟಿ ಕೇಸ್ ಹಾಕದೆ ಎಫ್ಐಆರ್ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕು.
- ಬಂದರಿನ ಒಳಗೆ ಯಾವುದೇ ಸಮಸ್ಯೆಯಾದರೂ ಮೊದಲು ಮಲ್ಪೆ ಮೀನುಗಾರರ ಸಂಘದ ಗಮನಕ್ಕೆ ತಂದು ಪರಿಹಾರ ಕಂಡು ಹಿಡಿಯಬೇಕು.
- ಇಬ್ಬರು ಕಾನ್ಸ್ಟೇಬಲ್ ಗಳನ್ನು ತಕ್ಷಣವೇ ವಜಾ ಮಾಡಬೇಕು.