
ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಕೆಲವೊಂದು ಭವಿಷ್ಯಗಳನ್ನು ನುಡಿದಿದ್ದಾರೆ.
ಕ್ರೋಧಿನಾಮ ಸಂವತ್ಸರದಲ್ಲಿ ಒಳ್ಳೆಯದ್ದಕ್ಕಿಂತ ಕೆಟ್ಟದ್ದೇ ಜಾಸ್ತಿ ಇದೆ. ಪ್ರಾಕೃತಿಯವಾಗಿ ದೋಷ ಕಾಣಿಸಿಕೊಳ್ಳಲಿದ್ದು ಡ್ಯಾಮುಗಳು ತುಂಬಿ ಜಲಕಂಟಕ ಮುಂದುವರೆಯಲಿದೆ ಎಂದರು.
ಬೀಯಿಂಗ್ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಕೋಡಿಶ್ರೀ, ರಾಷ್ಟ್ರ ರಾಜಕಾರಣದ ಬಗ್ಗೆ ಹೇಳುವುದಾದರೆ ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ಆದರೆ ಇಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ, ಭೀಮ ಸೋಲುತ್ತಾನೆ ಎಂದಿದ್ದು ಇದರ ಬಗ್ಗೆ ಯಾವ ರೀತಿಯ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ಜನರಿಗೆ ಬಿಟ್ಟಿದ್ದಾರೆ.
ಇನ್ನು, ರಾಜ್ಯ ರಾಜಕಾರಣದ ಬಗ್ಗೆ ಹೇಳಿ ಎಂದಾಗ, ಮಹಾಭಾರತದ ಉದಾಹರಣೆ ನೀಡಿದ ಅವರು ವೀರನಾಗಿರುವ ಅಭಿಮನ್ಯುವನ್ನು ಎಲ್ಲರೂ ಸೇರಿ ಮೋಸದಲ್ಲಿ ಕೊಲ್ಲುತ್ತಾರೆ. ಅಭಿಮನ್ಯುವನ್ನು ಮೋಸದಿಂದ ಸೋಲಿಸುತ್ತಾರಲ್ಲ, ಇಲ್ಲಿಯೂ ಹಾಗೆಯೇ ಆಗುತ್ತದೆ. ಸಿಎಂ ಬದಲಾವಣೆ ಸದ್ಯಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಹಾಗಿದ್ದರೆ ಅಭಿಮನ್ಯು ಯಾರು? ಯಾರಿಗೆ ಮೋಸ ಆಗುತ್ತದೆ ಎಂದು ಕೇಳಿದಾಗ ಸಿಎಂ ಬದಲಾವಣೆ ಇಲ್ಲ ಸರಿ, ಆದರೆ ಮುಂದೆ ಎಂದು ಹೇಳಿ ಜೋರಾಗಿ ನಕ್ಕಿರುವ ಕೋಡಿಶ್ರೀ ಅವರು, ನಿಜವನ್ನು ನಾವು ಹೇಳಿಬಿಟ್ಟರೆ ರಸ್ತೆಯ ಮೇಲೆ ಓಡಾಡಲು ಬಿಡುವುದಿಲ್ಲ. ಊರಿಗೆ ಹೋಗುವ ಹಾಗೆಯೂ ಇರುವುದಿಲ್ಲ. ಅದಕ್ಕೆ ಅದೆಲ್ಲಾ ಬೇಡ ಬಿಡಿ ಎಂದಿದ್ದಾರೆ.





