27.3 C
Udupi
Friday, July 11, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 131

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೧೩೨ ಮಹಾಭಾರತ

ಹೀಗೆ ಅರ್ಜುನ ಮಣಿಪುರ ರಾಜ್ಯದ ಯುವರಾಣಿಯನ್ನು ಮದುವೆಯಾಗಿದ್ದರೂ, ಅವರ ಮದುವೆ ಗೌಪ್ಯವಾಗಿ ಅರಮನೆಯೊಳಗೆ ನಡೆದಿದ್ದ ಕಾರಣ ಪ್ರಜಾ ಜನರಿಗೆ ಈತನ ಪರಿಚಯವೇ ಇರಲಿಲ್ಲ. ಮೇಲಾಗಿ ಆತನೋರ್ವ ಯಾತ್ರಿಕನೆಂದಷ್ಟೇ ಪರಿಗಣಿತನಾಗಿದ್ದು, ಅಲ್ಲಿನ ಜನ ಅರ್ಜುನನ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡುತ್ತಿರಲಿಲ್ಲ.

ಅರ್ಜುನ ಚಿತ್ರವಾಹನನ ಅರಮನೆಯೊಳಗೆ ಮನೆ ಅಳಿಯನಾಗಿದ್ದರೂ, ಹೊರ ಪ್ರಪಂಚಕ್ಕೆ ಯಾತ್ರಿಕನಾಗಿಯೇ ಕಾಣಿಸಿಕೊಂಡು ಪರಕೀಯನಂತೆಯೇ ವ್ಯವಹರಿಸುತ್ತಿದ್ದನು. ದಿನಂಪ್ರತಿ ಸುತ್ತಮುತ್ತಲ ಯಾತ್ರಾ ಸ್ಥಳಗಳನ್ನು ಸಂದರ್ಶಿಸಿ ರಾತ್ರಿಯಾಗುತ್ತಿದ್ದಂತೆ ಮರಳಿ ಅರಮನೆ ಸೇರುತ್ತಿದ್ದ.

ಹೀಗಿರಲು ಒಂದು ದಿನ ಸಂಚರಿಸುತ್ತಾ, ಪಂಚ ಸರೋವರ ಕ್ಷೇತ್ರ ಕ್ಕೆ ಬಂದನು. ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ, ನೀರವ, ತನ್ಮಯ ಪ್ರದೇಶ ತಪೋಭೂಮಿಯಂತಿದ್ದು, ಋಷ್ಯಾಶ್ರಮಗಳಿಗೆ ಸೂಕ್ತವಾದ ಪ್ರದೇಶವಾಗಿದ್ದರೂ, ನಿರ್ಜನವಾಗಿರುವುದು ಏಕೆ? ಏನೋ ಕೌತುಕ! ಇಲ್ಲೇನೊ ವಿಶೇಷವಿದೆಯೆಂಬಂತೆ ಅರ್ಜುನನಿಗೆ ಶಂಕೆಯುಂಟಾಯಿತು. ಏನಿರಬಹುದು ಕ್ಷೇತ್ರ ವಿಶೇಷ? ತಿಳಿಯೋಣವೆಂದು ಮುಂದೆ ಮುಂದೆ ಸಾಗಿ ನೋಡಿದರೆ, ಸುಂದರ ಸರೋವರಗಳಿವೆ. ನಿರ್ಮಲ ಜಲ, ಪ್ರಶಾಂತ ವಾತಾವರಣವಿದ್ದರೂ ಅಲ್ಲಿ ಯಾರೂ ವಾಸವಾಗಿಲ್ಲ. ಸಂದೇಹ ಬಲವಾಯಿತು. ನಿವಾರಣೆಗಾಗಿ ಹುಡುಕುತ್ತಾ ಅರ್ಜುನ ಅನ್ವೇಷಿಯಾಗಿ ಸಾಗಿದ. ಅನತಿ ದೂರ ಸಾಗಿದಾಗ ಆಶ್ರಮವೊಂದು ಗೋಚರಿಸಿತು. ಅಲ್ಲಿ ಹೋಗಿ ಈ ಪ್ರದೇಶದ ಬಗ್ಗೆ ವಿಚಾರಿಸಿದಾಗ – ಅಲ್ಲಿರುವ ಪಂಚ ಸರೋವರಗಳಲ್ಲಿ ಭೀಕರ ಮೊಸಳೆಗಳಿದ್ದು, ನರಭಕ್ಷಕರಾಗಿವೆ. ಆ ಕಾರಣದಿಂದ ಜನ ವಾಸ್ತವ್ಯ ಅಸಾಧ್ಯವಾಗಿ, ಋಷಿಗಳಿಗೂ ಪರಿಹರಿಸಲಾಗದೆ ಈ ತಾಣ ನಿರ್ಜನವಾಗಿದೆ ಎಂಬ ವಿಚಾರ ತಿಳಿಯಿತು.

ಇಂತಹ ಸುರಮ್ಯ, ರಮಣೀಯ ತಾಣದಲ್ಲಿ ಋಷ್ಯಾಶ್ರಮ, ಯಾಗ ಯಜ್ಞ ಜಪ – ತಪಗಳು ನೆರವೇರುವಂತೆ ಮಾಡಬೇಕು. ಉಲೂಪಿಯ ಅನುಗ್ರಹ ವಿಶೇಷದಿಂದ ಯಾವ ಉಗ್ರ ಜಲಚರವೂ ತನಗೇನೂ ಮಾಡಲಾಗದಂತಹ ರಕ್ಷೆಯಿದೆ. ಮಹಾದೇವ ಪರಶಿವನನ್ನೂ, ಆಪ್ತ ಶ್ರೀಕೃಷ್ಣನನ್ನೂ ಸ್ಮರಿಸಿ ಮೊದಲ ಸರೋವರಕ್ಕೆ ಇಳಿದು ಒಂದೆರಡು ಹೆಜ್ಜೆ ಸಾಗಿದಾಗ ಭೀಕರ ಮೊಸಳೆಯೊಂದು ಅರ್ಜುನನ ಮೇಲೆರಗಿ ಬಂತು. ತಕ್ಷಣ ಅದನ್ನು ಹಿಡಿದು ಸರೋವರದಿಂದ ಮೇಲಕ್ಕೆತ್ತಿ ಎಸೆದು ಬಿಟ್ಟ. ಏನಾಶ್ಚರ್ಯ! ಓರ್ವ ಸುಂದರ ಕನ್ಯೆಯಾಗಿ ಆ ಮೊಸಳೆ ಪರಿವರ್ತಿತವಾಯಿತು. ಪಾರ್ಥನಿಗೆ ಆಶ್ಚರ್ಯವಾಗಿ, ಆಕೆಯನ್ನು ಕುರಿತು – “ನೀನು ಯಾರು? ಹೀಗೇಕೆ ಮೊಸಳೆಯಾಗಿರುವೆ” ಎಂದು ಪ್ರಶ್ನಿಸಿದ.

ಆ ಸುಂದರಿ ಕನ್ಯೆ ಅರ್ಜುನನಿಗೆ ನಮಸ್ಕರಿಸಿ ತನ್ನ ವೃತ್ತಾಂತ ವಿವರಿಸತೊಡಗಿದಳು “ನನ್ನ ಹೆಸರು ‘ವರ್ಗೆ’ ಎಂಬುವುದಾಗಿ. ಕುಬೇರನ ಪ್ರೀತಿಪಾತ್ರಳಾದ ನಾನು ಮತ್ತು ನನ್ನ ನಾಲ್ವರು ಗೆಳತಿಯರಾದ ಸೌರಭೇಯಿ, ಸಮುಚಿ, ಬುದ್ಬುದೆ ಮತ್ತು ಲತೆ ಒಟ್ಟಾಗಿ ಕಾಮಾಚಾರಿಗಳಾಗಿ ಕುಬೇರನನ್ನು ಸೇರಲು ವಿಲಾಸಿನಿಯರಾಗಿ ಅವನ ಅರಮನೆಗೆ ಹೋಗುತ್ತಿದ್ದೆವು. ಆ ಸಂದರ್ಭ ಪಂಚ ಸರೋವರದ ಈ ಕ್ಷೇತ್ರ ವಿಶೇಷ ಆಕರ್ಷಣೀಯವಾಗಿ ಗಗನ ಮಾರ್ಗದಲ್ಲಿದ್ದ ನಮ್ಮನ್ನು ಸೆಳೆಯಿತು. ಕುತೂಹಲದಿಂದ ನಾವೈದು ಮಂದಿಯೂ ಕೆಳಗಿಳಿದೆವು. ಇಲ್ಲಿ ಬಂದು ನೋಡಿದರೆ, ಅತ್ಯಂತ ತೇಜಃಶಾಲಿಯಾಗಿ, ರೂಪ ಲಾವಣ್ಯಗಳಿಂದ ಶೋಭಿಸುವ ಬ್ರಾಹ್ಮಣೊಬ್ಬನು ವೇದಾಧ್ಯಯನದಲ್ಲಿ ನಿರತನಾಗಿದ್ದನು. ಮೊದಲೇ ತನುವನ್ನು ಶೃಂಗರಿಸಿ, ಮನವನ್ನು ಕಾಮಪೂರಿತಗೊಳಿಸಿ ಹೊರಟಿದ್ದ ನಾವೈವರೂ ಈ ಸುರಸುಂದರನಿಗೆ ಮನಸೋತೆವು. ಆದರೂ ಪರಸ್ಪರ ಅಹಂಕಾರ ತಳೆದು ಅಂತರ್ಯದ ಭಾವವನ್ನು ತೋರಗೊಡದೆ, ಮನದ ತುಮುಲವನ್ನು ಹುದುಗಿಟ್ಟು ಬಹಿರಂಗದಲ್ಲಿ ವ್ಯತಿರಿಕ್ತವಾಗಿ ವರ್ತಿಸಿದೆವು. ನಮ್ಮ ಅತಿರೇಕದ ಚೇಷ್ಟೆ ಬ್ರಾಹ್ಮಣೋತ್ತಮನನ್ನು ಕೆಣಕಿತು. ಅಂತರಂಗದಲ್ಲಿ ಆತನಿಗಾಗಿ ಹಾತೊರೆಯುವ ಉತ್ಕಟ ಕಾಮ, ವರ್ತನೆಯಲ್ಲಿ ಹುಲು ಮಾನವ ಎಂಬ ತಾತ್ಸಾರ ಭಾವ ನಮ್ಮಿಂದ ಪ್ರಕಟವಾಗುತ್ತಿತ್ತು. ಅಕಾರಣವಾಗಿ ಅಪಮಾನಿತನಾದ ಆ ಪುಣ್ಯಾತ್ಮನಿಗೆ ನಮ್ಮ ನೀಚ ಕೃತ್ಯದಿಂದ ಅಧ್ಯಯನಕ್ಕೂ ತೊಡಕಾಯಿತು. ಪರಿಣಾಮದಲ್ಲಿ ಕುಪಿತನಾಗಿ ನಮಗೆ ವಿಕಾರ ಮೊಸಳೆಗಳಾಗಿ ಹೋಗಿ ಎಂದು ಶಪಿಸಿದನು. ನಾವೈವರೂ ನಮ್ಮ ಚಂಚಲತೆಯ ಮದವಿಳಿಸಿ ಆತನ ಪಾದಮೂಲಕ್ಕೆರಗಿ ಪರಿ ಪರಿಯಾಗಿ ಬೇಡಿ ಕ್ಷಮೆ ಯಾಚಿಸಿದೆವು. ಕೃಪೆದೋರಿದ ಆ ಪುಣ್ಯಾತ್ಮ, ನೀವೈವರೂ ನಾನಿತ್ತ ಶಾಪವಾಕ್ಯದಂತೆ ಐದು ಸರೋವರಗಳಲ್ಲಿ ಮೊಸಳೆಗಳಾಗಿ ಇರಬೇಕು. ಆದರೆ ಯಾವಾಗ ಮಹಾತ್ಮನೊಬ್ಬ ಬಂದು ನಿಮ್ಮನ್ನು ಸೆಳೆದು ಮೇಲಕ್ಕೆಸೆಯುತ್ತಾನೋ, ಆ ಕ್ಷಣ ನಿಮಗೆ ಶಾಪ ವಿಮೋಚನೆ ಎಂಬ ಪರಿಮಾರ್ಜನಾ ದಾರಿ ತೋರಿದ್ದನು. ಅಂದಿನಿಂದ ಇಲ್ಲಿಯವರೆಗೆ ಯಾರೇ ಈ ಸರೋವರದ ಬಳಿ ಬಂದರೆ ನಮ್ಮನ್ನೆತ್ತಿ ಶಾಪ ಮುಕ್ತಗೊಳಿಸಲಿ ಎಂದು ಹಿಡಿದೆಳೆಯುತ್ತಿದ್ದೆವು. ಅವರಿಂದ ಆ ಕೆಲಸವಾಗದಿದ್ದಾಗ ನುಂಗಿ ಹಸಿವು ನೀಗಿಸುತ್ತಿದ್ದೆವು. ಹೀಗಾಗುತ್ತಿದ್ದಾಗ ಪ್ರಾಣಭಯದಿಂದ ಸರೋವರಗಳ ಬಳಿ ಮಾನವ ಸಂಚಾರವೇ ನಿಂತು ಹೋಯಿತು. ಬಹುಕಾಲದಿಂದ ಯಾರೂ ಇತ್ತ ಬಂದಿರಲೇ ಇಲ್ಲ. ಮಹಾನುಭಾವನೂ, ತೇಜಸ್ವಿಯೂ, ಮಹಾತ್ಮನೂ ಆಗಿರುವ ನೀನು ನನ್ನನ್ನು ಉದ್ಧರಿಸಿದೆ. ಹಾಗೆಯೇ ಉಳಿದ ನಾಲ್ಕು ಕೆರೆಗಳಲ್ಲಿರುವ ನನ್ನ ಸ್ನೇಹಿತೆಯರನ್ನೂ ರಕ್ಷಿಸಬೇಕು” ಎಂದು ಬೇಡಿಕೊಂಡಳು. ಅರ್ಜುನ “ಆಗಲಿ” ಎಂದು ಒಪ್ಪಿ, ಒಂದೊಂದೇ ಕೆರೆಗಿಳಿದು ಮೊಸಳೆಗಳನ್ನು ಎತ್ತಿ ಮೇಲಕ್ಕೆಸೆದು ನಾಲ್ವರನ್ನೂ ಶಾಪ ಮುಕ್ತಿಗೊಳಿಸಿದನಿ. ಐವರೂ ಅರ್ಜುನನಿಗೆ ನಮಿಸಿ, ಕೃತಜ್ಞತೆ ಸಲ್ಲಿಸಿ ತಮ್ಮ ಲೋಕವನ್ನೈದಿದರು. ನರಭಕ್ಷಕ ಮೊಸಳೆಗಳಿಂದ ಮುಕ್ತವಾಗಿ ಶುದ್ಧ ಪುಷ್ಕರಣಿಗಳಾದ ಅಗಸ್ತ್ಯ, ಪೌಲೋಮ, ಸುಭದ್ರ, ಕಾರಂಡವ, ಭರದ್ವಾಜ ಗಳೆಂಬ ಪಂಚ ತೀರ್ಥ ಕ್ಷೇತ್ರ ಮತ್ತೆ ಮೊದಲಿನಂತೆ ಪುಣ್ಯಕ್ಷೇತ್ರವಾಯಿತು. ಋಷಿ, ಮುನಿಗಳು, ತಪಸ್ವಿಗಳು ಆ ಪ್ರದೇಶವನ್ನಾಶ್ರಯಿಸಿದರು. ಅರ್ಜುನ ತನ್ನಿಂದಾದ ಮಹತ್ಕಾರ್ಯಕ್ಕೆ ಉಲೂಪಿಯ ಅನುಗ್ರಹ ಸೇತುವಾದದ್ದಕ್ಕೆ ಆಕೆಗೂ ಮನದಲ್ಲೇ ಕೃತಜ್ಞತೆ ಸಲ್ಲಿಸಿದನು. ಭಗವಂತನಿಗೂ ನಮಿಸಿ ಮರಳಿ ಮಣಿಪುರದತ್ತ ಹೊರಟನು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page