ಭಾಗ 128
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೨೯ ಮಹಾಭಾರತ
ಒಪ್ಪಂದವಾದ ನಿಯಮದಂತೆ ದ್ರೌಪದಿಯ ಜೊತೆ ಪತಿಯಾಗಿ ಜೊತೆಗಿರುವ ಅಂದರೆ ಸತಿಪತಿಗಳ ಏಕಾಂತಕ್ಕೆ ಧಕ್ಕೆ ಉಂಟು ಮಾಡುವ ಯಾವ ಸಹೋದರನೇ ಆಗಲಿ ಹನ್ನೆರಡು ವರ್ಷ ತೀರ್ಥಯಾತ್ರೆ ಮಾಡಬೇಕು. ಆದರೆ ಇಂದು ಅರ್ಜುನ ರಾಜಧರ್ಮವಾದ ಕಳ್ಳರ ಬಂಧನ, ಗೋವು ಮತ್ತು ಬ್ರಾಹ್ಮಣರಿಗೆ ರಕ್ಷಣೆ ನೀಡುವ ಮಹತ್ಕಾರ್ಯದ ಸಾಧನೆಗಾಗಿ ನಿಯಮ ಮೀರುವಂತಾಗಿದೆ. ಅಂದರೆ ಯಾವ ವಿಧಾನದಿಂದಲೂ ಇದು ಅಪರಾಧವಾಗದ ಕಾರಣ ಗಹನವಾಗಿ ತರ್ಕಿಸಿ ಗುರುಗಳಾದ ಧೌಮ್ಯರು ಆಸ್ಥಾನ ಪ್ರಾಜ್ಞರು ಜಿಜ್ಞಾಸೆಗೊಡ್ಡಿದ ಅಭಿಮತದಂತೆ ಅರ್ಜುನನ ಶಿಕ್ಷೆಯ ಪ್ರಮಾಣವನ್ನು ಹನ್ನೆರಡು ಸಂವತ್ಸರದ ಬದಲಾಗಿ ಹನ್ನೆರಡು ಮಾಸಗಳಾಗಿ ಪರಿವರ್ತಿಸಿ ಧರ್ಮರಾಯ ಹಾಗೂ ಪಾಂಡವ ಸಹೋದರರು, ಗುರುಗಳು ಸರ್ವಾನುಮತದಿಂದ ಒಪ್ಪಿ ಅಂಗೀಕರಿಸಿದರು. ಈ ನಿರ್ಧಾರದಂತೆ ಅರ್ಜುನ ತೀರ್ಥಯಾತ್ರೆಗೆ ಹೊರಡಲು ಸಿದ್ಧನಾದನು. ನಮ್ಮಿಂದಾಗಿ ಅರ್ಜುನನಿಗೆ ಶಿಕ್ಷೆಯಾಗುತ್ತಿದೆ ಎಂದು ಮರುಗಿದ ಅಗ್ರಹಾರದ ಬ್ರಾಹ್ಮಣರು ದುಃಖಿತರಾಗಿದ್ದರು.
ಸ್ನಾನಾದಿಗಳನ್ನು ಪೂರೈಸಿ ಸಿದ್ದನಾದ ಅರ್ಜುನನು ಬ್ರಾಹ್ಮಣರಿಗೆಲ್ಲಾ ನಮಸ್ಕರಿಸಿದನು. ತಾನು ತೀರ್ಥಯಾತ್ರೆಗೆ ಹೊರಟು ನಿಂತು ಅವರೆಲ್ಲರ ಆಶೀರ್ವಾದವನ್ನು ಬೇಡಿದನು. ಬ್ರಾಹ್ಮಣರಿಗೆ ಅರ್ಜುನನ್ನು ಕಳುಹಿಸಿಕೊಡಲು ದುಃಖವಾಯಿತು. ನಮ್ಮಿಂದಾಗಿ ಹೀಗಾಯಿತು ಎಂಬ ಕಾರಣದಿಂದ ಕೆಲವು ಮಂದಿ ಬ್ರಾಹ್ಮಣರು ತೀರ್ಥಯಾತ್ರೆಗೆ ತಯಾರಾಗಿ ‘ಆಗಲಿ ನಡೆಯೋಣ- ನಾವೂ ನಿನ್ನೊಂದಿಗೆ ಯಾತ್ರೆ ಮಾಡುತ್ತೇವೆ’ ಎಂದು ಹೊರಟೇಬಿಟ್ಟರು. ಬ್ರಾಹ್ಮಣರಿಗೆ ಎಲ್ಲಿಗೆ ಆದರೂ ಹೊರಡುವುದಕ್ಕೆ ಎಷ್ಟು ಹೊತ್ತು ಬೇಕು? ಮಡಿಯ ಚೀಲವನ್ನೂ, ಕೃಷ್ಣಾಜಿನದ ಸುರುಳಿಯನ್ನೂ ತೆಗೆದುಕೊಂಡು, ಧೋತ್ರವನ್ನು ಹೊದೆದು, ತಂಬಿಗೆಯನ್ನು ಹಿಡಿದು ಹೊರಟೇ ಬಿಟ್ಟರು. ಅರ್ಜುನನು ಅವರನ್ನು ಕೂಡಿಕೊಂಡು ಮುಂದೆ ಹೊರಟನು.
ಅರ್ಜುನನು ಪೂರ್ವ ದಿಕ್ಕಿಗೆ ಮುಖಮಾಡಿ ಉತ್ತರಕ್ಕೆ ತಿರುಗಿ ಮುಂದೆ ಹೋದನು – ವೇದಜ್ಞರೂ, ತತ್ವವೇತ್ತರೂ, ಪೌರಾಣಿಕರೂ, ಕಥನ ಕೌಶಲ ನಿಪುಣರೂ, ಹಾಗೆಯೇ ಉಪದೇಶಕರೂ, ಪ್ರಿಯವಚನ ಭಾಷಿಕರೂ, ಮುಂತಾಗಿ ಸೇರಿದ್ದ ಆ ಬ್ರಾಹ್ಮಣರ ವೃಂದದೊಂದಿಗೆ ನಡೆದು ಹೋಗುತ್ತಿರುವುದು ಅರ್ಜುನನಿಗೆ ಅತ್ಯಂತ ಹಿತಕರವೂ, ಸುಖದಾಯಕವೂ ಆಗಿ ಕಂಡಿತು. ಅದರಂತೆ ಅಲ್ಲಲ್ಲಿನ ಮನೋಹರವಾದ ವಿಚಿತ್ರ ರೀತಿಯ ವನಗಳನ್ನೂ ಸರೋವರಗಳನ್ನೂ, ಪುಣ್ಯನದಿಗಳನ್ನೂ ಗಿರಿತೊರೆಗಳನ್ನೂ, ನೋಡುತ್ತಾ ನೋಡುತ್ತಾ, ಅಲ್ಲಲ್ಲಿ ನಿಂತು ಕುಳಿತು, ದಣಿವಿಲ್ಲದೇ ನಡೆದು ನಡೆದು ಅವರೆಲ್ಲರೂ ಗಂಗಾದ್ವಾರವನ್ನು ಬಂದು ಸೇರಿಕೊಂಡರು.
ಮುಂದುವರಿಯುವುದು…



















