ಭಾಗ 127
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೨೮ ಮಹಾಭಾರತ
ಇದಾದ ಸ್ವಲ್ಪ ಸಮಯದ ಮೇಲೆ ಒಂದು ರಾತ್ರಿ ಇಂದ್ರಪ್ರಸ್ಥದ ಬ್ರಾಹ್ಮಣರ ಅಗ್ರಹಾರದಿಂದ ಕಳ್ಳರು ಗೋಧನವನ್ನು ಅಂದರೆ ದನಗಳನ್ನು ಅಪಹರಿಸಿಕೊಂಡು ಹೋದರು. ದುಃಖಿತರಾದ ಬ್ರಾಹ್ಮಣರು ಬೊಬ್ಬಿಡುತ್ತಾ ಅರಮನೆಯ ಕಡೆಗೆ ಓಡಿ ಬಂದರು. ಭೂಸುರರು ಅರ್ಥಾತ್ ಬ್ರಾಹ್ಮಣರು ಅಳುತ್ತಿರುವುದನ್ನು ಕೇಳಿಸಿಕೊಂಡ ಅರ್ಜುನನು ಕೂಡಲೇ ಎದ್ದು ಅವರ ವೇದನೆಗೆ ಕಾರಣ ವಿಚಾರಿಸಿದನು. ಅವರು ಎಲ್ಲ ವಿಷಯ ತಿಳಿಸಿ ದೂರು ನೀಡಿ ರಕ್ಷಿಸಬೇಕೆಂದು ಕೇಳಿಕೊಂಡರು. ಅರ್ಜುನನು ಬ್ರಾಹ್ಮಣರಿಗೆ ಅಭಯವನ್ನಿತ್ತು ಧೈರ್ಯ ಹೇಳಿದನು. ಕಳ್ಳರು ಬಹುಸಂಖ್ಯೆಯಲ್ಲಿ ಇರುವುದರಿಂದ, ಅವರು ಗೋವುಗಳನ್ನು ಸೆಳೆದೊಯ್ದುದರಿಂದಲೂ, ಇದು ಪಾಂಡವರ ಆಳ್ವಿಕೆಯನ್ನು ಶಿಥಿಲಗೊಳಿಸುವ ಸಲುವಾಗಿಯೇ ನಿಯೋಜಿತವಾದ ಅಪಹರಣ ಆಗಿರಬಹುದು! ಆದುದರಿಂದ ತಾನು ಶಸ್ತ್ರಧಾರಿಯಾಗಿಯೇ ಅವರನ್ನು ಎದುರಿಸುವುದು ಪ್ರಶಸ್ತ ವೆಂದು ಮನಗಂಡನು. ಪಾಂಡವರು ತಮ್ಮ ಹಿರಿಯಣ್ಣನೂ ಆಗಿರುವ ಧರ್ಮರಾಜನ ಸಮ್ಮತಿಯಿಲ್ಲದೆ ವಿಶೇಷವಾದ ಆಯುಧಗಳನ್ನು ಉಪಯೋಗಿಸುತ್ತಿರಲಿಲ್ಲ. ಅರಮನೆಯ ಶಸ್ತ್ರಾಲಯವು ಧರ್ಮರಾಜನ ಅರಮನೆಯ ಶಯನ ಮಂದಿರದ ಒತ್ತಿನಲ್ಲಿ ಇತ್ತು. ತುರ್ತು ಕಾರ್ಯವಾಗಿರುವ ಕಾರಣ ವಿಳಂಬಿಸದ ಅರ್ಜುನ ಅಣ್ಣ ಧರ್ಮಜನ ಬಳಿ ಸಾಗಿದಾಗ ಅದು ದ್ರೌಪದಿಯೊಂದಿಗೆ ಏಕಾಂತ ಸಮಯವಾಗಿತ್ತು. ಅರ್ಜುನನು ತಮ್ಮೊಳಗಿನ ಆ ಕಟ್ಟುಪಾಡನ್ನು ಮೀರಿದಂತಾಯಿತು ಎಂದು ಒಮ್ಮೆ ನೊಂದುಕೊಂಡನು. ಆದರೂ ಬ್ರಾಹ್ಮಣರ ರಕ್ಷಣೆಗೆ ಇದು ಅನಿವಾರ್ಯ. ಬಳಿಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡರಾಯಿತು. ನಿಯಮದ ಉಲ್ಲಂಘನೆಯ ದೋಷಕ್ಕೆ ಪರಿಹಾರವಿದೆ. ಆದರೆ ಬ್ರಾಹ್ಮಣರ ಕಷ್ಟವನ್ನು ಪರಿಹರಿಸದಿದ್ದರೆ ಆ ಪಾಪದಿಂದ ವಿಮೋಚನೆಯೇ ಇಲ್ಲ. ಆದುದರಿಂದ ಅದೇ ತನಗೆ ಕರ್ತವ್ಯವೆಂದು ಅರ್ಜುನನು ನಿರ್ಧರಿಸಿಕೊಂಡನು. ಬೇಕಾದ ಶಸ್ತ್ರಾಸ್ತ್ರಗಳನ್ನೆಲ್ಲಾ ಎತ್ತಿಕೊಂಡು ಧರ್ಮರಾಜನಿಗೆ ಅಲ್ಲಿಂದಲೇ ವಂದಿಸಿ ಹೊರಟನು. ಕಳ್ಳರನ್ನು ಬೆಂಬತ್ತಿ ಶರವರ್ಷಗೈದು ಬಾಣಗಳ ಕೋಟೆ ರಚಿಸಿ ಸುಲಲಿತವಾಗಿ ಗೋವುಗಳನ್ನು ವಶಪಡಿಸಿ, ಕಳ್ಳರನ್ನು ಬಂಧಿಸಿ ಮರಳಿ ಬಂದನು.
ನಡೆದ ವಿಚಾರವನ್ನೆಲ್ಲಾ ಸವಿಸ್ತಾರವಾಗಿ ಮತ್ತೆ ವಿವರಿಸಿ, “ಅಣ್ಣಾ ಅನಿವಾರ್ಯಕ್ಕಾದರೂ ನಮ್ಮ ಕಟ್ಟುಪಾಡು ಪಾಲಿಸದೆ ಮುಂದುವರಿದ ನಾನು ತೀರ್ಥಯಾತ್ರೆಗೆ ಹೋಗಬೇಕಾಗುತ್ತದೆ. ನಿಮ್ಮ ಅಪ್ಪಣೆಯಾಗಬೇಕು” ಎಂದು ಪ್ರಾರ್ಥಿಸಿಕೊಂಡನು. ಧರ್ಮರಾಜನಿಗೆ ಅತಿಯಾದ ದುಃಖವಾಯಿತು. ಅರ್ಜುನನನ್ನು ಕ್ಷಣ ಕಾಲಕ್ಕೂ ಬಿಟ್ಟಿರಲಾರದ ಧರ್ಮರಾಜನು “ಮನಸ್ಸಿನಲ್ಲಿ ಅನ್ಯಥಾ ಭಾವನೆಯಿಲ್ಲದೆ ಅನಿವಾರ್ಯವಾಗಿ ಹೀಗೆ ಬಂದುದಕ್ಕೆ ತೀರ್ಥಯಾತ್ರೆಯನ್ನು ಮಾಡಬೇಕಾಗಿ ಬರಲಾರದು. ಆಪದ್ಧರ್ಮವಾಗಿ ಸದುದ್ದೇಶದಿಂದ, ನಿಸ್ವಾರ್ಥ ಭಾವದಿಂದ ಧರ್ಮ ಪಾಲನೆಗಾಗಿ ನೀನು ಗೈದದ್ದು ಅಪರಾಧವಾಗದು, ರಾಜಧರ್ಮವೇ ಆಗುತ್ತದೆ.” ಎಂದು ನುಡಿದನು. “ನಾವು ನಿಯಮವನ್ನು ಪಾಲಿಸಬೇಕಾದುದು ಕೇವಲ ನಮಗಾಗಿ ಮಾತ್ರ ಅಲ್ಲ. ಅದು ಇತರರಿಗೆ ಮಾರ್ಗದರ್ಶನ ವಾಗಿರಬೇಕು. ಕಾರಣ ಏನೇ ಇರಲಿ, ನಿಯಮ ಪಾಲಿಸಲ್ಪಡದ ಕಾರಣ ಉಲ್ಲಂಘನೆಯೇ ಆದಂತಾಗಿದೆ. ಆದುದರಿಂದ ಆಶೀರ್ವದಿಸಿ ಸಂತೋಷದಿಂದ ಕಳುಹಿಸಿಕೊಡಬೇಕು. ನಾಳೆಯ ಭವಿಷ್ಯದಲ್ಲಿ ಇದು ಲೋಕದ ಕಣ್ಣಿಗೆ ಅಪಚಾರವಾಗಿ ಕಾಣಿಸಕೂಡದು” ಎಂದು ಅರ್ಜುನನು ಮತ್ತೊಮ್ಮೆ ಪ್ರಾರ್ಥಿಸಿಕೊಂಡನು. ನಿರ್ವಾಹವಿಲ್ಲದೆ ಧರ್ಮರಾಜನು ಒಪ್ಪಲೇಬೇಕಾಯಿತು ಆಶೀರ್ವಾದವನ್ನಿತ್ತು ಅರ್ಜುನನ್ನು ಕಳುಹಿಸುವಲ್ಲಿ ಯೋಚಿಸತೊಡಗಿದನು.
ಮುಂದುವರಿಯುವುದು..



















