
ಅಮರಾವತಿ: ತಿರುಪತಿಗೆ ಬರುವ ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ದಕ್ಷಿಣ ಭಾರತದ ಖಾದ್ಯವಾದ ಮಸಾಲೆ ವಡೆ ಸೇರ್ಪಡೆಗೊಳಿಸಲಾಗಿದೆ.
ಗುರುವಾರ ಬೆಳಗ್ಗೆ ಹೊಸ ಖಾದ್ಯವಾದ ಮಸಾಲ ವಡೆಯನ್ನು ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ಭಕ್ತರಿಗೆ ಅನ್ನ ಪ್ರಸಾದದಲ್ಲಿ ಬಡಿಸುವ ಮೂಲಕ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಚಾಲನೆ ಕೊಟ್ಟರು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್. ವೆಂಕಯ್ಯ ಚೌಧರಿ ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಟಿಟಿಡಿ ಅಧ್ಯಕ್ಷ ನಾಯ್ಡು ಅವರು ಅನ್ನ ಪ್ರಸಾದ ಮೆನುವಿನಲ್ಲಿ ದಕ್ಷಿಣ ಭಾರತದ ಖಾದ್ಯವನ್ನು ಸೇರಿಸುವ ಆಲೋಚನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಸ್ತಾಪಿಸಿದಾಗ, ತಕ್ಷಣವೇ ಯೋಜನೆಗೆ ಅನುಮೋದನೆ ನೀಡಿದ್ದು ನಮ್ಮ ಪ್ರಸಾದ ಅರ್ಪಣೆಯ ಭಾಗವಾಗಿ ಮಸಾಲೆ ವಡೆಯನ್ನು ಪರಿಚಯಿಸುತ್ತಿರುವುದು ಸಂತಸ ತಂದಿದೆ. ದೇವಾಲಯವು ಭಕ್ತರಿಗೆ ಪೌಷ್ಟಿಕ, ರುಚಿಕರವಾದ ಮತ್ತು ವೈವಿಧ್ಯಮಯ ಆಹಾರ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.



















