ಭಾಗ 123
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೨೪ ಮಹಾಭಾರತ
ಮಹಾರಾಜ ಧೃತರಾಷ್ಟ್ರನನ್ನು ಕಂಡು ತನ್ನ ಬಳಗ ಸಹಿತ ದುರ್ಯೋಧನ ಮಾತನಾಡಿಸತೊಡಗಿದ. “ಪಿತಾಶ್ರೀ, ಪಾಂಡವರು ಈಗಾಗಲೇ ಬಹಳಷ್ಟು ಬೆಳವಣಿಗೆಯಾಗಿದ್ದಾರೆ. ಇನ್ನು ಕೈಗೆ ಸಿಗದೆ ನಿಯಂತ್ರಿಸಲಾಗದ ಮಟ್ಟಕ್ಕೆ ಬೆಳೆಯುತ್ತಾರೆ. ನಮ್ಮಿಂದ ಅವರನ್ನು ಹತೋಟಿಗೆ ತರುವ, ನಿಗ್ರಹಿಸುವ ಪ್ರಯತ್ನಗಳಾದರೂ ವಿಫಲವಾದವೇ ಹೊರತು ನಮ್ಮ ಯೋಜನೆಗಳಿಂದ ಇಚ್ಚಿಸಿದ ಕಾರ್ಯಗಳಾಗಲಿಲ್ಲ. ಬದಲಿಗೆ ಪಾಂಡವರಿಗೆ ಪರ್ಯಾಯ ರೂಪದಲ್ಲಿ ಲಾಭವೇ ಆಗುತ್ತಾ ಹೋಯಿತು. ಈಗ ಪಾಂಡವರು ಇನ್ನೂ ಪ್ರಬಲರಾಗಿದ್ದಾರೆ. ಪಾಂಚಾಲದ ಸಂಬಂಧ, ದ್ವಾರಕೆಯ ಕೃಷ್ಣನ ಸಖ್ಯದಿಂದಾಗಿ ಬಲಿಷ್ಟರೇ ಆದರು. ನಮ್ಮೊಳಗಿನ ಭೀಷ್ಮ, ವಿದುರ, ದ್ರೋಣ, ಕೃಪಾದಿಗಳೂ ಪಾಂಡವ ಪಕ್ಷಪಾತಿಗಳೆ ಆಗಿ ಕಾಣಿಸುತ್ತಿದ್ದಾರೆ. ಹಾಗಿದ್ದರೆ ನಮ್ಮನ್ನು ಕೇಳುವವರಿಲ್ಲವೇ ಅಪ್ಪಾ? ನಮ್ಮ ಆಶೆಗಳಿಗೆ ಬೆಲೆಯಿಲ್ಲವೇ? ನನ್ನ ಅಪ್ಪ ಮಹಾರಾಜನಾಗಿದ್ದರೂ ನಮಗೇನೇನೂ ಲಾಭವಿಲ್ಲವೇ?” ಎಂದು ದುರ್ಯೋಧನ ಮಗನಾಗಿ ಅಪ್ಪನಲ್ಲಿ ಅಳಲು ತೋಡಿಕೊಂಡ.
ಧೃತರಾಷ್ಟ್ರನ ಮನಸ್ಸು ಮಿಡಿದು ಕರಗಿತು. ಶಕುನಿ ಇದೇ ಸುಸಂದರ್ಭವೆಂದು ಅವಕಾಶವನ್ನು ವಿನಿಯೋಗಿಸಿ “ಮಹಾರಾಜಾ, ನನ್ನ ಮನದ ಅವಲೋಕನವನ್ನು ಅವಧರಿಸಬೇಕು. ನೀವೇನೋ ಮಹಾರಾಜರು ಹೌದು. ಅದೂ ಕಾರ್ಯಕಾರಿಣಿ ರಾಜಪ್ರತಿನಿಧಿ. ಪೂರ್ಣಾಧಿಕಾರ ನಿಮಗಿಲ್ಲವಲ್ಲ. ಇನ್ನು ವಯೋವೃದ್ಧರೂ ಆದ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿ, ಆ ಧರ್ಮರಾಯನನ್ನೇ ಪೂರ್ಣ ಪ್ರಮಾಣದ ಮಹಾರಾಜನನ್ನಾಗಿಸಿದರೆ ಮತ್ತೆ ನಿಮಗೆ ವಾನಪ್ರಸ್ಥವೇ ಗತಿ. ಅಷ್ಟು ಮಾತ್ರವಲ್ಲ ಆ ಬಳಿಕ ದಿಗ್ವಿಜಯಗೈದು ಆ ಧರ್ಮರಾಯ ಚಕ್ರವರ್ತಿಯಾಗುವುದಕ್ಕೂ ಸಮರ್ಥನಾಗಿದ್ದಾನೆ. ಅವನ ತಮ್ಮಂದಿರಾದ ಭೀಮಾರ್ಜುನರು ಆರ್ಯಾವರ್ತವನ್ನೇ ಗೆದ್ದು ಅಖಂಡ ಸಾಮ್ರಾಜ್ಯ ಸ್ಥಾಪನೆ ಮಾಡಬಲ್ಲವರು ಎಂಬುವುದು ನಿಸ್ಸಂದೇಹ. ಆಗ ನಿಮ್ಮ ಮಕ್ಕಳು ಅವರ ದಾಸರಾಗಿಯೂ, ನೀವು ಕಾಡಿನಲ್ಲಿ ಆಶ್ರಮದಲ್ಲಿ ವಾನಪ್ರಸ್ಥ ಜೀವನವನ್ನೂ ಕಳೆಯುವ ಸ್ಥಿತಿ ಬರುತ್ತದೆ. ಹಾಗಾಗಿ ಆ ದುರ್ಗತಿಯನ್ನು ತಡೆಯಲು ಈಗ ಸಕಾಲ. ಸಮಯೋಚಿತ ನಿರ್ಣಯ ಕೈಗೊಳ್ಳುವಲ್ಲಿ ತಡ ಮಾಡಿ, ನಂತರ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಅನುಭವ ವಾಕ್ಯದಂತಾಗುತ್ತದೆ ನಮ್ಮೆಲ್ಲರ ಭವಿಷ್ಯ. ಹಾಗಾಗಿ ನನ್ನ ಮನಸ್ಸಿಗೆ ಈ ಸಾಮ್ರಾಜ್ಯವನ್ನು ವಿಭಜನೆ ಮಾಡಿ ಕೆಲವು ಗ್ರಾಮಗಳನ್ನು ಪಾಂಡವರಿಗೆ ನೀಡಿ ನಮ್ಮ ಸಾಮಂತ ರಾಜರನ್ನಾಗಿಸಿ ಅವರನ್ನು ಅವರ ಪಾಡಿಗೆ ತಿಂದುಂಡು ಮಲಗಲು ಬಿಟ್ಟು ಬಿಟ್ಟರೆ ನಮಗೂ ಕ್ಷೇಮ ಅವರಿಗೂ ನೆಮ್ಮದಿ. ಧರ್ಮಾತ್ಮರಾಗಿರುವ ಕಾರಣ ಹಸ್ತಿನೆಯನ್ನೇ ಚಕ್ರವರ್ತಿ ಪೀಠವೆಂದು ಪೂಜಿಸುತ್ತಾ ನಮ್ಮ ಅಧಿರಾಜರಾಗಿ ಇರುತ್ತಾರೆ. ನಮ್ಮ ಸಾಮ್ರಾಜ್ಯದ ರಕ್ಷಣೆಗೂ ಆ ಪಾಂಡವರು ಲಭ್ಯರಾಗಿ ಇರುತ್ತಾರೆ. ಯೋಚನೆ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂಬ ಚಿಂತನೆ ನನ್ನದು” ಎಂದನು. ಶಕುನಿಯ ಮಂತ್ರಾಲೋಚನೆ ಧೃತರಾಷ್ಟ್ರನ ಪುತ್ರ ವ್ಯಾಮೋಹದ ಸೆಳೆತಕ್ಕೆ ಪೂರಕವಾಗಿ ಸೂಕ್ತ ಕ್ರಮವೆಂದೇ ಭಾವಿಸಲ್ಪಟ್ಟಿತು. ಯೋಚನಾಮಗ್ನನಾದ ಮಹಾರಾಜ ಕೆಲಹೊತ್ತು ಕಳೆದು ಶಕುನಿ ಮತ್ತು ದುರ್ಯೋಧನರನ್ನು ಕಳುಹಿಸಿ ಒಬ್ಬನೇ ಕುಳಿತು ತರ್ಕಿಸತೊಡಗಿದ. ಯಾವ ಮಗ್ಗುಲಲ್ಲಿ ಚಿಂತನೆ ನಡೆಸಿದರೂ ಶಕುನಿಯ ಯೋಜನೆ ಸಮರ್ಥ ರಾಜತಾಂತ್ರಿಕ ಉಪಾಯವೇ ಆಗಿ ಕಾಣಿಸಿತು. ಅವಸರ ಮಾಡದೆ ಒಂದೆರಡು ದಿನ ಮತ್ತೂ ಈ ಬಗ್ಗೆ ಆಲೋಚನೆ ಮಾಡುತ್ತಾ ಸಮಯ ಕಳೆದನು. ಕೆಲವೊಮ್ಮೆ ಚಂದ್ರವಂಶದ ಏಳಿಗೆಗೆ ಪಾಂಡವರೇ ಸಕ್ಷಮ ಉತ್ತರಾಧಿಕಾರಿಗಳೆಂದು ಕಂಡರೂ, ಪುತ್ರ ವ್ಯಾಮೋಹ, ರಾಜ್ಯಾಧಿಕಾರದ ಲೋಭ ಆವರಿಸಿ ಯೋಚನೆಯನ್ನು ಬುಡಮೇಲು ಮಾಡುತ್ತಿತ್ತು. ಸ್ವಾರ್ಥ ಸಾಧನೆಯ ಆಕಾಂಕ್ಷೆ ಮೇಲೆದ್ದು ಬರುತ್ತಿತ್ತು.
ಹೀಗಿರಲು ಭೀಷ್ಮಾಚಾರ್ಯರನ್ನು ಮತ್ತು ಮಂತ್ರಿ ವಿದುರನನ್ನು ಕರೆದು ಮಹತ್ವದ ತೀರ್ಮಾನ ಪ್ರಕಟಿಸಲು ಮಹಾರಾಜ ಧೃತರಾಷ್ಟ್ರ ತೀರ್ಮಾನಿಸಿ ಹಾಗೇ ಮುಂದುವರಿದನು. ಅವರಿಬ್ಬರನ್ನೂ ಕುಳ್ಳಿರಿಸಿ ಚಂದ್ರವಂಶದ ಮುಂದಿನ ಪೀಳಿಗೆಯ ಕುರಿತು ಚರ್ಚಿಸಿ ತನ್ನ ಅಭಿಮತ ತೀರ್ಮಾನ ಹೇಳತೊಡಗಿದನು. ” ನಮ್ಮ ನಂತರ ಈ ಚಂದ್ರವಂಶವನ್ನು ಬೆಳಗಬೇಕಾದ ಮಕ್ಕಳು ಕೌರವರು ಮತ್ತು ಪಾಂಡವರು. ದಾಯಾದಿ ಮತ್ಸರದಿಂದ ಮಾಡಬಾರದ ಘಟನೆಗಳು ನಮ್ಮ ಕಣ್ಮುಂದೆಯೇ ನಡೆದು ಹೋಗುತ್ತಿವೆ. ಇವೆಲ್ಲವನ್ನೂ ಸುಸೂತ್ರವಾಗಿ ನಿಯಂತ್ರಿಸಬೇಕಾದರೆ ಈ ಸಾಮ್ರಾಜ್ಯವನ್ನು ವಿಭಜಿಸಲೇಬೇಕು. ಕೆಲವೊಂದು ಗ್ರಾಮಗಳನ್ನು ಪಾಂಡವರಿಗೆ ನೀಡಿದರೆ ಅವರಿಗೆ ಪ್ರತ್ಯೇಕ ರಾಜ್ಯ, ಅಧಿಕಾರ ನೀಡಿದರೆ ಹಸ್ತಿನೆಗೆ ಅಧಿರಾಜರಾಗಿ ಆಳ್ವಿಕೆ ಮಾಡುವಂತಾಗುತ್ತದೆ. ಸಮಸ್ಯೆಯೂ ಪರಿಹರಿಸಲ್ಪಡುತ್ತದೆ. ಪಾಂಡವರಿಗೂ ನೆಮ್ಮದಿ, ಕಲಹವೂ ಶಮನಗೊಳ್ಳುತ್ತದೆ” ಎಂದನು.
ಭೀಷ್ಮಾಚಾರ್ಯರೂ ಸಂತೋಷದಿಂದ ಒಪ್ಪಿಕೊಂಡು ಮಹಾರಾಜ ಧೃತರಾಷ್ಟ್ರನಲ್ಲಿ ತನ್ನದೊಂದು ತೀರ್ಮಾನಕ್ಕೆ ಅನುಮತಿ ಕೇಳಿದರು. ಏನೆಂದು? ಕೇಳಿದಾಗ “ನನಗೆ ಪಾಂಡವರ ಜೊತೆ ಹೊಸ ರಾಜ್ಯದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕು.” ಎಂದು ವಿನಂತಿಸಿದರು. ಧೃತರಾಷ್ಟ್ರನಿಗೆ ಭೀಷ್ಮಾಚಾರ್ಯರು ಆ ಕಡೆ ಹೋದರೆ ತನ್ನ ಮಕ್ಕಳ ರಕ್ಷಣೆಗೆ ಯಾರಿರುತ್ತಾರೆ? ಎಂಬ ಭಯ ಆವರಿಸಿತು. ತಕ್ಷಣ ಭೀಷಣ ಪ್ರತಿಜ್ಞೆಗೈದ ದೇವವೃತನ ಆ ಶಪಥ ವಾಕ್ಯಗಳು ಸ್ಮರಣೆಗೆ ಬಂದು “ನಿಮ್ಮದೇ ಪ್ರತಿಜ್ಞೆ ಮುರಿದು ಹೋಗುವಿರಾ? ಹಸ್ತಿನಾವತಿಯ ಸಿಂಹಾಸನದ ರಕ್ಷಣೆಯ ಹೊಣೆ ಹೊತ್ತು ಗತಕಾಲದಲ್ಲಿ ನುಡಿದ ವಾಕ್ಯಕ್ಕೆ ತೊಡಕಾಗದೆ ನಿಮ್ಮ ಈ ಅಪೇಕ್ಷೆ?” ಎಂದು ಕೇಳಿದಾಗ ಭೀಷ್ಮರು ತಾನೇ ಹೆಣೆದ ಬಲೆಯೊಳಗೆ ಸಿಕ್ಕಿಹಾಕಿಕೊಂಡ ಜೇಡನಂತಾಗಿ ಮೌನವಹಿಸಬೇಕಾಯ್ತು.
ವಿದುರ ರಾಜ್ಯ ವಿಭಜನೆಗೆ ಸಮ್ಮತಿಸುವಲ್ಲಿ, ಹೀಗಾದರೂ ಪಾಂಡವರು ಸುಖವಾಗಿರಲಿ ಎಂಬ ಭಾವ ಕೆಲಸ ಮಾಡಿತು. ಹಾಗೂ ಹೀಗೂ ಕೌರವ ಶಕುನಿಯ ತಂತ್ರ ಫಲಿಸಿತು. ಪಾಂಡವರು ಪ್ರತ್ಯೇಕ ರಾಜ್ಯದ ಅಧಿಕಾರವಹಿಸಿ ಬದುಕಬೇಕೆಂಬ ತೀರ್ಮಾನ ಅಂಗೀಕೃತವಾಯಿತು.
ಧೃತರಾಷ್ಟ್ರನೇ ಧರ್ಮರಾಯನನ್ನು ಕರೆದು ಕೈಗೊಂಡ ತೀರ್ಮಾನ ವಿವರಿಸಿದನು. “ನೋಡು ಮಗಾ, ಪಾಂಡು ಚಕ್ರವರ್ತಿಯ ಮಕ್ಕಳಾದ ನೀವು, ನನ್ನ ಮಕ್ಕಳಾದ ಕೌರವರು ನನಗೆ ಬೇರೆ ಬೇರೆಯವರಲ್ಲ. ನನ್ನ ಮಕ್ಕಳೇ ಆದ ಕೌರವಾದಿಗಳು ಹಠ ಸ್ವಭಾವದವರಾಗಿ ಏನೇನು ಕೃತ್ಯವೆಸಗಿದ್ದಾರೆ ಎಂದು ನೀವೂ ಚೆನ್ನಾಗಿ ತಿಳಿದವರೇ ಆಗಿದ್ದೀರಿ. ಇನ್ನೂ ಹಾಗೇ ಮುಂದುವರಿಯಗೊಟ್ಟರೆ ಅನಾಹುತಕ್ಕೆ ದಾರಿಯಾದೀತು. ನಮ್ಮ ಮಹಾಭಾಗ್ಯ, ಹಿರಿಯರ ಪುಣ್ಯಫಲದಿಂದ ಈವರೆಗೆ ನಿಮಗೇನೂ ತೊಂದರೆಯಾಗದೆ ಬದುಕುಳಿದು ಸಾಧನಾ ಪಥದಲ್ಲಿ ಮೆರೆದು ಭಾಗ್ಯವಂತರಾಗಿ ಬಂದಿದ್ದೀರಿ. ಏನೋ ಕೆಟ್ಟಕಾಲದಲ್ಲಿ ಈ ಎಲ್ಲಾ ಘಟನೆಗಳು ನಡೆದು ಹೋಗಿವೆ. ಅದನ್ನೆಲ್ಲಾ ಮರೆತು ಬಿಡಿ. ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಅದಕ್ಕೆ ಪರಿಹಾರವಾಗಿ ನನ್ನ ತಮ್ಮ ಪಾಂಡು ಚಕ್ರವರ್ತಿಯ ಮಕ್ಕಳಾದ ನಿಮಗೆ ಗಂಗಾನದಿಯಿಂದ ಮೂಡು ತೆಂಕಣ ಪ್ರದೇಶವಾದ ಖಾಂಡವ ಪ್ರಸ್ಥ ಪ್ರದೇಶವನ್ನು ನಿಮ್ಮ ಅಧಿಕಾರಕ್ಕೆ ವಹಿಸಿಕೊಡುತ್ತೇನೆ. ಜಲಸಮೃದ್ಧವೂ, ಪ್ರಾಕೃತಿಕ ಸೌಂದರ್ಯವೂ, ಸುಭದ್ರವೂ ಆದ ಆ ಪ್ರದೇಶದಲ್ಲಿ ರಾಜಧಾನಿ ನಿರ್ಮಿಸಿ ಆಳ್ವಿಕೆ ಮಾಡಿಕೊಂಡಿರಿ. ಆ ವ್ಯವಸ್ಥೆಗೆ ಬೇಕುಬೇಕಾದ ಸಕಲ ಸೌಕರ್ಯಗಳನ್ನು ಇಲ್ಲಿಂದಲೇ ಒದಗಿಸುತ್ತೇನೆ. ಮತ್ತೆ ನೀವು ಅಲ್ಲಿಂದ ವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳುವಿರಂತೆ” ಎಂದು ತನ್ನ ಮನದ ತೀರ್ಮಾನ ಹೇಳಿಕೊಂಡನು. ಧರ್ಮರಾಯ ದೊಡ್ಡಪ್ಪನೂ, ಮಹಾರಾಜನೂ ಆಗಿರುವ ಧೃತರಾಷ್ಟ್ರನ ಮಾತು ಕೇಳಿ ಯೋಚನೆ ಮಾಡತೊಡಗಿದ.
ಮುಂದುವರಿಯುವುದು…






















































