27.9 C
Udupi
Sunday, April 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 120

ಭರತೇಶ್ ಶೆಟ್ಟಿ,ಎಕ್ಕಾರ್

ಮುಂದಿನ ನಡೆಯ ಬಗ್ಗೆ ಚಿಂತಿತರಾಗಿದ್ದಾರೆ ಕೌರವರು. ಪಾಂಡವರಿಗೆ ದ್ವಾರಕೆಯ ಕೃಷ್ಣ ಬಲರಾಮರ ಸಖ್ಯ, ಪಾಂಚಾಲದ ದ್ರುಪದ ಮಹಾರಾಜನ ಸಂಬಂಧ, ದ್ರೌಪದಿಯ ಕರಗ್ರಹಣ ಹೀಗೆ ಎಲ್ಲವೂ ಅನುಕೂಲಕರ ಬೆಳವಣಿಗೆಯೇ ಆಗಿದೆ. ನಾವು ಪಾಂಡವರಿಗೆ ಕೇಡು ಬಯಸಿ ಅವರ ಅಂತ್ಯಕ್ಕಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಪಾಂಡವರು ಆದಿ ಅಂತ್ಯರಹಿತರಾಗಿ ಪ್ರಜ್ವಲಿಸಿದರಲ್ಲಾ ಎಂಬ ಚಿಂತೆ ದುರ್ಯೋಧನನ ಪಾಳಯಕ್ಕೆ ವ್ಯಥೆಯಾಗಿ ಪರಿಣಮಿಸಿತ್ತು.

ಪಾಂಚಾಲದ ಸ್ವಯಂವರ ಪ್ರಕರಣ, ಅರ್ಜುನನ ಸಾಧನೆ, ಆರ್ಯಾವರ್ತದ ಅನ್ಯ ಕ್ಷತ್ರಿಯರ ವಿರೋಧ, ನಂತರದ ಎರಡೆರಡು ಭಾರಿ ನಡೆದ ಯುದ್ದದಲ್ಲಿ ದುರ್ಯೋಧನಾದಿಗಳಿಗೆ ಹೀನಾಯ ಸೋಲು ಈ ಎಲ್ಲಾ ವಿಚಾರಗಳು ಜನಜನಿತವಾಗಿ, ಪ್ರಜಾ ಜನ ಕೌರವರ ಕುತಂತ್ರ, ಹೀನಾಯ ಸ್ಥಿತಿಗೆ ನಿಂದನೆ, ಅಪಶಬ್ದಗಳನ್ನಾಡುತ್ತಾ ಅಗೌರವ ಹೊಂದಿದ ವಿಚಾರಗಳೆಲ್ಲವೂ ಹಸ್ತಿನೆಗೂ ತಲುಪಿತು. ಭೀಷ್ಮ, ವಿದುರ, ದ್ರೋಣ, ಕೃಪಾಚಾರ್ಯರು ಪಾಂಡವರ ಶ್ರೇಯಸ್ಸನ್ನು ಕಂಡು ಆನಂದಿಸಿದರೆ ಧೃತರಾಷ್ಟ್ರ ಮಾತ್ರ ಹೊರಗೆ ನಗೆ ಒಳಗೆ ಧಗೆಯ ಸ್ಥಿತಿ ಹೊಂದಬೇಕಾಯಿತು. ಕಾರಣ ಅಲ್ಲಿ ಪರಾಜಿತರಾಗಿ ಅಪಮಾನಿತರಾಗಿರುವುದು ಆತನ ಸ್ವಂತ ಮಕ್ಕಳು. ದೈಹಿಕವಾಗಿ ಅಂಧರಾಜ ಹೌದು. ಆದರೆ ಪುತ್ರವ್ಯಾಮೋಹದಿಂದ ಬುದ್ಧಿಗೂ ಅಂಧತ್ವ ವ್ಯಾಪಿಸಿ ಯುಕ್ತಾಯುಕ್ತತೆಯನ್ನು ತೀರ್ಮಾನಿಸುವಲ್ಲಿ ವಿಚಲಿತನನ್ನಾಗಿ ಮಾಡಿತ್ತು.

ಭೀಷ್ಮಾಚಾರ್ಯ, ವಿದುರ, ದ್ರೋಣಾದಿಗಳು ಏಕಾಂತದಲ್ಲಿ ಧೃತರಾಷ್ಟ್ರನನ್ನು ಸಂಧಿಸಿ ಕೌರವರ ನಡೆ, ಧರ್ಮಾತ್ಮರಾದ ಪಾಂಡವರ ಮೇಲೆ ದ್ವೇಷ ಸಾಧಿಸಿ, ಪರಿಣಾಮದಲ್ಲಿ ಆದ ಅಪಮಾನ, ಪರಾಭವ ಎಲ್ಲವನ್ನೂ ಸವಿವರವಾಗಿ ವಿವರಿಸಿ ಹೇಳಿದರು. ಸಕ್ಷಮ, ಧರ್ಮಿಷ್ಟ, ಅತುಲ ವಿಕ್ರಮಿಗಳು, ಪ್ರಜಾ ಜನಾನುರಾಗಿಗಳಾದ ಪಾಂಡವರೇ ಮುಂದಿನ ಅಧಿಕಾರಕ್ಕೆ ಯೋಗ್ಯರು ಎಂಬ ಅಭಿಮತವೂ ಅವರೆಲ್ಲರಿಂದ ಧೃತರಾಷ್ಟ್ರನಿಗೆ ಉಪದೇಶಿತವಾಯಿತು.

ಹೀಗೆ ಸಮಾಲೋಚನೆ ನಡೆದು ಧೃತರಾಷ್ಟ್ರ ತನ್ನ ಮಕ್ಕಳನ್ನು ಕರೆದು ಬುದ್ಧಿವಾದ ಹೇಳಿ ಸರಿಪಡಿಸುವೆನೆಂದು ಭರವಸೆ ನೀಡಿ ತನ್ನ ಪುತ್ರರಾದ ಕೌರವರು, ಕರ್ಣ, ಶಕುನಿ ಸಹಿತ ಬಳಗವನ್ನು ಕರೆದು ಅವರ ಅಭಿಪ್ರಾಯ ಕೇಳತೊಡಗಿದ.

ಶಕುನಿ ಕೌರವರ ವಕ್ತಾರನಾಗಿ ಧೃತರಾಷ್ಟ್ರನ ಮುಂದೆ ತನ್ನ ಮನದ ವಿಚಾರ ಮಂಡಿಸತೊಡಗಿದನು. “ಮಹಾರಾಜಾ, ಈ ಮಕ್ಕಳು ನಿನ್ನವರು. ಅವರಿಗೆ ಅಧಿಕಾರವೂ ಇಲ್ಲ, ಮರ್ಯಾದೆಯೂ ಇಲ್ಲ. ಆ ಪಾಂಡವರ ಬಗ್ಗೆ ನಮ್ಮ ಹಸ್ತಿನೆಯ ಭೀಷ್ಮ, ದ್ರೋಣ, ವಿದುರರಿಂದ ಹಿಡಿದು ಎಲ್ಲರದ್ದೂ ಬೆಂಬಲವೇ. ಸಾಲದಕ್ಕೆ ಈಗ ದ್ವಾರಕೆಯ ಕೃಷ್ಣ, ಪಾಂಚಾಲದ ದ್ರುಪದನೂ ಆ ಪಾಂಡವರ ಪಕ್ಷಪಾತಿಗಳೇ ಆಗಿದ್ದಾರೆ. ಹೀಗೆ ಮುಂದುವರಿದರೆ ನಿನ್ನ ಮಕ್ಕಳು ಪಾಂಡವರ ದಾಸರಾಗಿ ಸೇವೆಗೈಯುವ, ಆಜ್ಞಾನುವರ್ತಿಗಳಾಗಿ ವ್ಯವಹರಿಸುವ ಸೇವಕರಾಗಿ ಬಿಡುತ್ತಾರೆ. ಮಹಾರಾಜನ ಪುತ್ರರಾಗಿ ನಿನ್ನ ಮಕ್ಕಳಿಗೆ ಅಂತಹ ನೀಚ ದಯನೀಯ ಸ್ಥಿತಿ ಬರುವುದನ್ನು ಅವರ ಮಾವನಾಗಿ ನಾನು ಸಹಿಸಲಾರೆ. ಸದ್ಯದ ಸ್ಥಿಥಿಯಲ್ಲಿ ಪಾಂಡವರ ವಿಚಾರದಲ್ಲಿ ದುಡುಕಿ ಕಾರ್ಯ ಸಾಧಿಸಲಾಗದು. ನಮ್ಮ ಬಳಿ ಪೂರ್ಣಾಧಿಕಾರವೂ ಇಲ್ಲ. ಮಹಾರಾಜರೆಂದು ಕರೆಸಿಕೊಳ್ಳುವ ನೀವೂ ಕೂಡ ರಾಜ ಪ್ರತಿನಿಧಿಯಷ್ಟೇ. ವಾಸ್ತವ ಅಧಿಕಾರ ಭೀಷ್ಮ – ವಿದುರರ ಬಳಿ ಇದೆ. ಹಾಗಾಗಿ ನಮಗೆ ಅಧಿಕಾರ ಸಿಗುವಂತಾಗಬೇಕು. ಬಲಾತ್ಕಾರವಾಗಿ ಪಾಂಡವರಿಂದ ಸೆಳೆದುಕೊಳ್ಳಲಾಗದು. ಯಾಕೆಂದರೆ ಅವರು ಅತಿ ಬಲಾಢ್ಯರೂ, ಬುದ್ಧಿವಂತರೂ ಆಗಿದ್ದಾರೆ. ಈಗ ಪರಮ ಜ್ಞಾನಿ, ಸಮಯ ಸಾಧಿಸಿ ಕಾರ್ಯ ಪೂರೈಸುವ ಚಾಣಾಕ್ಷ ಕೃಷ್ಣನೂ ಅವರ ಜೊತೆ ಸೇರಿದ್ದಾನೆ. ಇಂತಹ ಸ್ಥಿತಿಯಲ್ಲಿ ನಾವೂ ಬುದ್ಧಿಯ ಬಲದಿಂದಲೇ ನಮ್ಮ ಅಪೇಕ್ಷೆಯ ಕಾರ್ಯ ಸಾಧಿಸಬೇಕು. ಒಂದು ಉಪಾಯವಿದೆ. ರಾಜ್ಯವನ್ನು ಇಬ್ಭಾಗ ಮಾಡಿ ಒಂದು ಕಿರು ಪಾಲು ಪಾಂಡವರಿಗೆ ನೀಡಿ ಅವರನ್ನು ಪ್ರತ್ಯೇಕಗೊಳಿಸಿ ದೂರವಿಡಬೇಕು. ನಾವು ಹಸ್ತಿನೆಯ ಚಕ್ರವರ್ತಿಪೀಠದ ಅಧಿಕೃತ ರಾಜನಾಗಿ ಅವರನ್ನು ಅಧಿರಾಜರಾಗಿ ಅಂಕೆಯಲ್ಲಿಡಬೇಕು. ಸಮಸ್ಯೆಗೂ ಪರಿಹಾರ- ನಮಗೂ ಪೂರ್ಣಾಧಿಕಾರ ಪ್ರಾಪ್ತಿಯಾಗುತ್ತದೆ” ಎಂಬ ತಂತ್ರಗಾರಿಕೆಯ ನಿರ್ದೇಶನ ಶಕುನಿಯಿಂದ ಧೃತರಾಷ್ಟ್ರನಿಗಾಯಿತು. ಮೊದಲೇ ದೈಹಿಕ ಅಂಧತ್ವ ಹೊಂದಿದ್ದ ಧೃತರಾಷ್ಟ್ರನ ಕುರುಡು ಪ್ರೇಮ ತನ್ನ ಮಕ್ಕಳಿಗೆ ರಾಜ್ಯಾಧಿಕಾರ ಒದಗಿಸುವ ಯೋಜನೆಗೆ ಒಪ್ಪಿಸಿಬಿಟ್ಟಿತು.

ಆಸ್ಥಾನಕ್ಕೆ ಬಂದ ಧೃತರಾಷ್ಟ್ರ ಸಭೆ ಕರೆದು, ಆಸ್ಥಾನ ಉಪಸ್ಥಿತರನ್ನು ಉದ್ದೇಶಿಸಿ ತನ್ನ ಆಶಯ ಪ್ರಕಟಿಸತೊಡಗಿದ. “ಪಾಂಡವ – ಕೌರವರು ಭಿನ್ನರಲ್ಲ. ನನಗೆ ಈರ್ವರೂ ಮಕ್ಕಳೇ ಆಗಿದ್ದಾರೆ. ಭೇದಭಾವ ನಾನು ಕಲ್ಪಿಸಲಾರೆ. ನಮ್ಮ ವಂಶದ ಕುಡಿಗಳಾದ ಪಾಂಡವರು ಅನ್ಯ ರಾಜ್ಯದ ಆಶ್ರಯದಲ್ಲಿ ಹಂಗಿನರಮನೆಯಲ್ಲಿ ಬದುಕುವುದು ನಮಗೆಲ್ಲರಿಗೂ ಅಪಮಾನವೇ ಸರಿ. ಹಾಗಾಗಿ ವಿದುರಾ, ನೀನು ಪಾಂಚಾಲಕ್ಕೆ ಹೋಗಬೇಕು. ದ್ರುಪದರಾಜನನ್ನು ಕಂಡು ಔಪಚಾರಿಕವಾಗಿ ಸ್ನೇಹಪೂರ್ವಕ ಕಾಣಿಕೆ ಸಲ್ಲಿಸಿ, ನಮ್ಮ ಬೀಗರಾದ ಕಾರಣ ಸಂಬಂಧವನ್ನು ಪಾಂಚಾಲದಲ್ಲಿ ಬಲಪಡಿಸಬೇಕು. ಹಾಗೆಯೇ ಪಾಂಡವರಿಗೆ ಬೇಕು ಬೇಕಾದ ಉಚಿತ ಕನಕ ಭೂಷಣ, ವಸ್ತ್ರಗಳೆಲ್ಲವನ್ನೂ, ನಮ್ಮ ಕುಲದ ನವವಧು ದ್ರೌಪದಿಗೂ ಸೂಕ್ತ ಸುವಸ್ತು ಆಭರಣಾದಿಗಳನ್ನೂ, ರಥ ವಾಹನಾದಿಗಳನ್ನೂ, ಪ್ರಾಜ್ಞ ಪಂಡಿತರನ್ನೂ, ಮಿತ ಸೈನ್ಯವನ್ನೂ ಕೂಡಿಕೊಂಡು ಹೋಗಿ ಪಾಂಡವರನ್ನು ಗೌರವಾದರಗಳೊಂದಿಗೆ ಹಸ್ತಿನೆಗೆ ಕರೆತರಬೇಕು” ಎಂದು ವಿನಂತಿಸಿದ.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page