
ಬೆಂಗಳೂರು: ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದ ಪ್ರಯೋಗಾಲಯಗಳಲ್ಲಿ ಬಳಕೆಗೆ ಅಸುರಕ್ಷಿತ ಎನಿಸಿದ ಹಾಗೂ ಗುಣಮಟ್ಟದಲ್ಲಿ ವಿಫಲವಾಗಿರುವ ಅನ್ಯ ರಾಜ್ಯಗಳಲ್ಲಿ ತಯಾರಿಸಲಾಗಿರುವ 9 ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು ಮತ್ತು ಇದನ್ನು ತಯಾರಿಸುವ ಕಂಪನಿಗಳ ಔಷಧಿಗಳ ಮಾರಾಟಕ್ಕೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ರವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯು ಈ ಔಷಧಗಳನ್ನು ಉತ್ಪಾದಿಸಿದ ಕಂಪನಿಗಳಲ್ಲಿ ಉತ್ತಮ ಉತ್ಪಾದನಾ ಪದ್ಧತಿಯ ಪಾಲನೆ ಆಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವವರೆಗೂ ಈ ಸಂಸ್ಥೆಗಳ ಔಷದ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈಗಾಗಲೇ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ ಬಂಗಾ ಫಾರ್ಮಸುಟಿಕಲ್ಸ್ ತಯಾರಿಸಿದ ಔಷಧವನ್ನು ಬಳಸಿದ ಪರಿಣಾಮ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ತಾಯಂದಿರು ಮೃತಪಟ್ಟಿದ್ದಾರೆ.
ಜೀವ ಹಾನಿಕಾರಕ ಮತ್ತು ಅಸುರಕ್ಷಿತ ಔಷಧಿಗಳ ಬಗ್ಗೆ ರಾಜ್ಯ ಸರ್ಕಾರ, ವೈದ್ಯರು ಫಾರ್ಮಸಿಸ್ಟ್ ಗಳು ಹಾಗೂ ರೋಗಿಗಳಿಗೆ “ಎಚ್ಚರಿಕೆ ಅಲರ್ಟ್” ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.