ಭಾಗ-113
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೧೧೪ ಮಹಾಭಾರತ
ದೃಷ್ಟದ್ಯುಮ್ನನು ತಂಗಿಯ ಪತಿಯ ಮನೆಯವರಾದ ಬೀಗರನ್ನು ಸ್ವಾಗತಿಸಿ ವಿಶ್ರಾಂತಿ ಗೃಹದತ್ತ ಕರೆದೊಯ್ದನು. ಅಲ್ಲಿ ವರ್ಣಾಶ್ರಮ ಧರ್ಮಕ್ಕೆ ಅನುಗುಣವಾಗಿ ಪ್ರತ್ಯೇಕ ಉಚಿತಾಸನಗಳ ವ್ಯವಸ್ಥೆಯನ್ನು ಮಾಡಿದ್ದರು. ಪಾಂಡವರು ಮಾತ್ರ ಹೇಳದೆಯೇ ಕ್ಷತ್ರಿಯರಿಗೆ ಮೀಸಲಿಟ್ಟ ಆಸನಗಳಲ್ಲೇ ಆಸೀನರಾದರು. ಬ್ರಾಹ್ಮಣರಿಗೆ ವ್ಯವಸ್ಥೆ ಬೇರೆಯೇ ಇದ್ದರೂ ಅತ್ತ ಹೋಗಲಿಲ್ಲ. ದ್ರುಪದ ಇವರ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದನು. ಆ ಬಳಿಕ ಉಪಹಾರ ಉಪಚಾರದ ವ್ಯವಸ್ಥೆಯಾಯಿತು. ತುಸು ಹೊತ್ತು ಕಾಲ ಕಳೆಯುವುದಕ್ಕಾಗಿ ಸುವಸ್ತು ಸಂಗ್ರಹಾಲಯದತ್ತ ಪಾಂಡವರನ್ನು ಕರೆದೊಯ್ದರು. ಅಲ್ಲೂ ಅವರು ವಿಶಿಷ್ಟ ವಸ್ತುಗಳಿದ್ದರೂ, ಪೂಜಾ ಸಾಮಾಗ್ರಿ, ವೈದಿಕ ಸುವಸ್ತುಗಳಿದ್ದರೂ ಕಣ್ಣೋಟದಲ್ಲೇ ಗಮನಿಸುತ್ತಾ ಸಾಗುತ್ತಿದ್ದಾರೆ. ಆಯುಧ ಸಂಗ್ರಹಾಲಯದತ್ತ ಬಂದಾಗ ಅತಿ ಆಸಕ್ತಿಯಿಂದ ನೋಡಿ ಎತ್ತಿ ಹಿಡಿಯುತ್ತಾ ಅವುಗಳ ಬಗ್ಗೆ ವಿಮರ್ಷಿಸತೊಡಗಿದರು. ಅಲ್ಲೇ ಬಹುಹೊತ್ತು ನಿಂತು ಮೆಚ್ಚುಗೆ ವ್ಯಕ್ತಪಡಿಸುತ್ತಾ, ಆಯುಧಗಳನ್ನು ಪರೀಕ್ಷಿಸುತ್ತಾ ನಿಂತರು. ಈ ವರ್ತನೆ ಕಂಡ ದ್ರುಪದರಾಜನಿಗೆ ಇವರು ಬ್ರಾಹ್ಮಣ ವೇಷಧಾರಿಗಳು ಮಾತ್ರ, ಬ್ರಾಹ್ಮಣರಲ್ಲ ಎಂಬುವುದು ಮನದಟ್ಟಾಯಿತು.
ಮುಂದುವರಿದು ವಿಶೇಷ ಅತಿಥಿಗೃಹದಲ್ಲಿ ಉನ್ನತ ಆಸನಗಳಲ್ಲಿ ಪಾಂಡವರನ್ನು ಕುಳ್ಳಿರಿಸಿ ದ್ರುಪದ ಮಹಾರಾಜನೂ ಪಕ್ಕದಲ್ಲೇ ಕುಳಿತು ಪ್ರಣಾಮಗಳನ್ನು ಸಲ್ಲಿಸಿ ಮಾತಿಗಾರಂಭಿಸಿದನು. “ಅಯ್ಯಾ ಮಹಾತ್ಮರೇ, ನಾನಿಗಾಗಲೇ ವಯೋವೃದ್ದನೂ, ದುಃಖ ತಪ್ತನೂ ಆಗಿದ್ದೇನೆ. ನಿಮ್ಮಲ್ಲಿ ನೇರವಾಗಿ ವಿಚಾರವನ್ನೇ ಪ್ರಸ್ತಾಪಿಸಿ ನನ್ನ ಸಂದೇಹಕ್ಕೆ ಪರಿಹಾರ ಬಯಸುತ್ತಿದ್ದೇನೆ. ಹಿಂದೆ ಹಸ್ತಿನೆಯ ಚಂದ್ರವಂಶಜ, ದ್ರೋಣ ಶಿಷ್ಯ ಅರ್ಜುನನೆಂಬಾತನ ಇದಿರು ಯುದ್ದಲ್ಲಿ ಸೋತವನು ನಾನು. ಆತನ ಯುದ್ದ ವೈಖರಿ, ಪರಾಕ್ರಮಕ್ಕೆ ಮನಸೋತವನೂ ಆದ ಕಾರಣ ದಿವ್ಯ ಯಾಗವೊಂದನ್ನು ಕೈಗೊಂಡು ಸಂಕಲ್ಪದಂತೆ ಮಗಳೊಬ್ಬಳನ್ನು ಪಡೆದಿದ್ದೇನೆ. ಆಕೆಯನ್ನು ಅರ್ಜುನನ ಸತಿಯಾಗಿಸಬೇಕೆಂದು ಬಯಸಿ ಪಡೆದಿದ್ದೆನು. ಆದರೆ ಧರ್ಮಾತ್ಮರಾದ ಪಾಂಡವರು ವಾರಣಾವತದಲ್ಲಿ ಅಗ್ನಿಗಾಹುತಿಯಾದ ಸುದ್ದಿ ಬಂತು. ನಾನು ನಂಬಲಿಲ್ಲ. ನಮ್ಮ ಶ್ರೇಷ್ಟ ಗೂಢಾಚಾರರನ್ನು ದೇಶ ದೇಶಗಳಿಗೆ ಕಳುಹಿಸಿ ಪಾಂಡವರ ಬಗ್ಗೆ ವಿಷಯ ಸಂಗ್ರಹದ ಪ್ರಯತ್ನ ಮಾಡಿಸಿದ್ದೇನೆ. ಕಾರಣ ಪಾಂಡವರು ಬದುಕಿದ್ದಾರೆ ಎಂಬ ವಿಶ್ವಾಸ ನನ್ನ ಅಂತರಂಗದಲ್ಲಿ ಬಲವಾಗಿತ್ತು. ಆದರೆ ನನ್ನ ಪ್ರಯತ್ನಗಳೆಲ್ಲಾ ವಿಫಲವಾದವು. ವಿಚಾರ ಹಾಗಿರುವಾಗ ತಂದೆಯಾಗಿ ಪ್ರಾಯ ಪ್ರಬುದ್ಧೆಯಾದ ಸುತೆಗೆ ವಿವಾಹ ಮಾಡಿಸುವ ಹೊಣೆಗಾರಿಕೆ ನನ್ನನ್ನು ಚಿಂತೆಗೀಡು ಮಾಡಿತು. ಅರ್ಜುನನಿಗೆ ಸತಿಯಾಗಬೇಕು ನನ್ನ ಮಗಳು ಎಂಬ ನನ್ನ ಕನಸು ಏಕೋ ಮತ್ತೂ ಜೀವಂತವಾಗಿತ್ತು. ಕೊನೆಯ ಪ್ರಯತ್ನವಾಗಿ ಸಮಾಲೋಚನೆ ನಡೆಸಿ ಅನ್ಯರಾರಿಗೂ ಅಭೇದ್ಯವಾದ ಮತ್ಸ್ಯಲಾಂಛನ ಭೇದನದ ಪಣವಿಡುವ ತೀರ್ಮಾನ ಕೈಗೊಂಡೆನು. ಎಲ್ಲಾದರು ಪಾಂಡವರು ಬದುಕಿದ್ದರೆ ಈ ರೂಪದಲ್ಲಾದರು ಪ್ರಕಟವಾದರೂ ಎಂಬ ಅಚಲ ನಂಬಿಕೆಯಿತ್ತು. ಪಣದಲ್ಲಿ ಅರ್ಜುನನಲ್ಲದ ಅನ್ಯ ಕ್ಷಾತ್ರ ರಾಜರು ಯಾರಿಗೂ ಪಣ ಗೆಲ್ಲಲು ಸಾಧ್ಯವಾಗದೇ ಉಳಿದಾಗ ನನಗೆ ಸಮಾಧಾನವಾಗುತ್ತಿತ್ತು. ನನ್ನ ಮಗಳಿಗೆ ಮದುವೆ ಅಸಂಭವ ಎಂಬ ಮಾತು ಎಲ್ಲರ ಬಾಯಲ್ಲೂ ಕೇಳಿಬಂದಾಗ ಚಿಂತೆಯೂ ಆಯಿತು. ಆ ಹೊತ್ತು ಪಣಗೆದ್ದು ನನ್ನ ಮಗಳ ಕರಗ್ರಹಣ ಮಾಡಿ ವ್ಯಥೆಗೊಳಗಾದ ನನ್ನ ಮನಸ್ಸಿನೊಳಗೆ ಆಶಾ ಜ್ಯೋತಿ ಬೆಳಗಿದವನು ನಿಮ್ಮೊಡನಿರುವ ಈ ಮಹಾನುಭಾವ. ಅನ್ಯತಾ ಭಾವಿಸಬಾರದು, ಬ್ರಾಹ್ಮಣ್ಯಕ್ಕೆ ನನ್ನ ಈ ಅಭಿಮತ ಅಪವಾದ ಆಗ ಕೂಡದು. ನಮ್ಮ ದೇಶದಲ್ಲಿ ಈ ತೆರನಾದ ರಣವಿದ್ಯಾ ಪಾಂಡಿತ್ಯವುಳ್ಳ ಬ್ರಾಹ್ಮಣರಿಲ್ಲವೇ ಇಲ್ಲ. ಹಾಗೆಂದು ದ್ರೋಣ, ಭಾರ್ಗವರು ವರ್ಣೋತ್ತಮರಾದರೂ ಅದ್ವಿತೀಯ ಶಸ್ತ್ರ ಶಾಸ್ತ್ರ ನಿಪುಣರೇ ಹೌದು. ಅವರನ್ನುಳಿದು ಈ ಭೂಮಿಯಲ್ಲಿ ವರ್ತಮಾನದಲ್ಲಿ ಅಂತಹ ಬ್ರಾಹ್ಮಣರು ಇರಬಹುದೇ? ಎಂಬ ಸಂದೇಹ ಬಲವಾಯ್ತು. ಆಮೇಲೆ ಆದ ಕ್ಷತ್ರಿಯ ರಾಜರ ಅತಿಕ್ರಮಣ, ಅದನ್ನು ನಿಗ್ರಹಿಸಿ ನಿಮ್ಮೊಳಗಿನ ಈರ್ವರು ವೀರರು ನಮ್ಮ ಸಾಮ್ರಾಜ್ಯದ ಮಾನ ಕಾಪಾಡಿದರು. ನನ್ನ ಸಂದೇಹಗಳು ಮತ್ತೂ ಬಲಪಡೆದು ಜೀವಂತವಾಗಿ ಕುತೂಹಲ ಗರಿಗೆದರಿತು. ಮೊದಲನೆಯದ್ದಾಗಿ ಪಣಗೆದ್ದ ವೀರನ ವಿಕ್ರಮ – ಅರ್ಜುನನ ಹೊರತು ಅನ್ಯರಿಗೆ ಅಸದಳ ಎಂದೇ ಪರಿಗಣಿತವಾಗಿದೆ. ಆ ಬಳಿಕದ ಕ್ಷತ್ರಿಯರ ಆಕ್ರಮಣವನ್ನು ಎದುರಿಸಿ ಬೆಂಬತ್ತಿ ಓಡಿಸಿದ ಶೌರ್ಯವೂ ಬ್ರಾಹ್ಮಣ್ಯ ರೂಪಿನ ನಿಮ್ಮ ನಿಜ ವರ್ಣವನ್ನು ತರ್ಕಿಸುವಂತೆ ಮಾಡಿದೆ. ಹಾಗಾಗಿ ನಿಮ್ಮನ್ನು ಪರೀಕ್ಷಿಸುವ ಪ್ರಯತ್ನ ಮಾಡಿದೆ. ಮೇಧಾವಿಗಳಾದ ನಿಮ್ಮ ಪ್ರಜ್ಞೆಗೆ ಈ ವಿಚಾರ ಗೊತ್ತಾಗಿರಲೂಬಹುದು, ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಉದ್ದೇಶಪೂರ್ವಕವಾಗಿ ಹಾಗೆ ಮಾಡಿ, ನಿಮ್ಮ ನಿಜ ತಿಳಿಯುವ ಪ್ರಯತ್ನ ನನ್ನದಾಗಿತ್ತು. ನಿಮ್ಮ ವರ್ತನೆ, ವ್ಯವಹಾರಗಳೆಲ್ಲಾ ಸಂಪೂರ್ಣವಾಗಿ ಕ್ಷತ್ರಿಯರಂತೆಯೇ ಇದೆ. ಎಲ್ಲೂ ಬ್ರಾಹ್ಮಣ್ಯದ ನಡೆಯನ್ನು ನೀವಿಲ್ಲಿ ತೋರಲಿಲ್ಲ. ಮಗಳ ಮದುವೆ ಓರ್ವ ಸಾಮಾನ್ಯ ಬ್ರಾಹ್ಮಣನ ಜೊತೆಯಾಗುವಂತಾಯಿತೇ ಎಂಬ ನನ್ನ ಚಿಂತೆಯ ಪರಿಹಾರಕ್ಕಾಗಿ ನಿಮ್ಮನ್ನು ಹುಡುಕಿಸಿದೆ, ಸತ್ಯ ತಿಳಿಯುವಲ್ಲಿ ಮುಂದಾದೆ. ಕುಂಬಾರನ ಕರ್ಮಶಾಲೆಯಲ್ಲಿ ವಾಸ್ತವ್ಯವಿದ್ದು, ಭಿಕ್ಷಾನ್ನ ಅವಲಂಬಿತರಾಗಿ ಬದುಕುತ್ತಿದ್ದೀರಿ ನೀವು ಎಂಬ ಸತ್ಯ ತಿಳಿಯಿತು. ಈಗ ನನ್ನ ಮನಸ್ಸು ವಿಭಿನ್ನವಾಗಿ ಯೋಚನೆ ಮಾಡ ತೊಡಗಿದೆ. ಅಪ್ರತಿಮ ಪರಾಕ್ರಮಿಗಳಾದ ನೀವೂ ಆರು ಮಂದಿ ಇದ್ದೀರಿ. ಅತ್ತ ವಾರಣಾವತದಲ್ಲಿ ಮಡಿದರೆಂಬ ಸುದ್ದಿಯಾದ ಪಾಂಡವರೂ ಅವರ ತಾಯಿ ಸೇರಿ ಆರು ಮಂದಿಯೇ ಇದ್ದರು. ನಿಮ್ಮ ಶ್ರೇಷ್ಠ ಸಂಸ್ಕಾರ, ಅದ್ವಿತೀಯ ಪರಾಕ್ರಮ ನೋಡಿದರೇ ನೀವೆ ಪಾಂಡವರಾಗಿರಬಹುದೇ ಎಂಬ ಸಂಶಯ ಬಲವಾಗುತ್ತಿದೆ, ಅದೇ ನಿಜವಾಗಲಿ ಎಂಬ ಆಶಯ ಮೂಡುತ್ತಿದೆ. ಯಾವುದೋ ಒಂದು ಬಲವಾದ ಸನ್ನಿವೇಶಕ್ಕೆ ವಿವಶರಾಗಿಯೋ, ಇಲ್ಲಾ ಯಾವುದೋ ಕಾರ್ಯ ಕಾರಣದಿಂದಾಗಿಯೋ ನಿಜ ಪಾಂಡವರಾದ ನೀವು ಈ ರೂಪದಲ್ಲಿದ್ದೀರೋ ಎಂಬ ಅನುಮಾನ ನನ್ನ ಮನದಲ್ಲಿದೆ. ಅನ್ಯಥಾ ಭಾವಿಸದೆ, ನಿಮ್ಮನ್ನು ಸಂಶಯಾತ್ಮಕ ದೃಷ್ಟಿಯಲ್ಲಿ ನಡೆಸಿಕೊಂಡೆ ಎಂದು ಕೋಪ ತಾಳದೆ, ವಯೋವೃದ್ದ ಕನ್ಯಾಪಿತನಾದ ನನ್ನ ಸಂದೇಹ ಪರಿಹರಿಸುವಿರಾ? ನೀವು ಯಾರೆಂಬ ಸತ್ಯ ಹೇಳಬಹುದೇ? ಪಾಂಡವರೇ ಹೌದಾದರೆ ನಾನು ಬಹುಮಾನ್ಯ ಧನ್ಯತೆಯನ್ನು, ಕೃತಾರ್ಥತೆಯನ್ನು ಹೊಂದಿದ ಸಂತೃಪ್ತನಾಗುವೆ. ದಯಮಾಡಿ ನನ್ನ ಮನದ ದುಗುಡ ದೂರ ಮಾಡುವಿರಾ” ಎಂದು ಸವಿವರವಾಗಿ ನಿವೇದಿಸಿಕೊಂಡನು.
ದ್ರುಪದನ ಪ್ರೀತಿ, ಪ್ರಯತ್ನ, ಜಾಣ್ಮೆಯನ್ನು ಮೆಚ್ಚಿದ ಧರ್ಮರಾಯ. ಸತ್ಯವಂತನೂ ಧರ್ಮಾತ್ಮನೂ ಆಗಿರುವ ಧರ್ಮರಾಯ ನಿಜವನ್ನು ಹೇಳಿಯೇ ಬಿಟ್ಟನು “ಅಯ್ಯಾ ನಿನ್ನ ಆಶಯ ನಿಜವಾಗಿದೆ. ನಾವು ಪಾಂಡವರೇ ಆಗಿದ್ದೇವೆ. ನಾನು ಹಿರಿಯವ ಧರ್ಮರಾಯ, ಈತ ಅತಿಬಲ ಭೀಮ, ಆತ ಮಹಾ ವಿಕ್ರಮಿ ಅರ್ಜುನ, ಅವರಿಬ್ಬರು ನಕುಲ ಮತ್ತು ಸಹದೇವ. ಈಕೆ ನಮ್ಮ ಮಾತೆ ಕುಂತಿದೇವಿ” ಎಂದು ಪರಿಚಯಿಸಿದನು. ಸೂಚ್ಯವಾಗಿ ಈವರೆಗಿನ ಬೆಳವಣಿಗೆಗಳ ಎಲ್ಲಾ ಕಥನವನ್ನು ಎಳೆಎಳೆಯಾಗಿ ವಿವರಿಸಿದನು. ಧರ್ಮಪಾಲನೆಯ ಮಾರ್ಗದಲ್ಲಿ ದೈವಾನುಗ್ರಹವೂ, ಸಕಾಲವೂ ಒದಗಿ ಬರುವವರೆಗೆ ಹೀಗೆಯೇ ಬದುಕುವ ಹಾದಿ ಹಿಡಿದಿದ್ದೇವೆ. ಧೌಮ್ಯ ಋಷಿಗಳಿಂದಾಗಿ ಸ್ವಯಂ ವರ ಪಣದಲ್ಲಿ ಭಾಗವಹಿಸುವಂತಾಯಿತು” ಎಂದು ಈವರೆಗಿನ ವೃತ್ತಾಂತವನ್ನೆಲ್ಲ ಪ್ರಸ್ತಾವಿಸಿದನು.
ಇವರು ಪಾಂಡವರೆಂಬ ಸತ್ಯ ತಿಳಿದ ದ್ರುಪದ ಮಹಾರಾಜ ಮಹದಾನಂದ ತುಂದಿಲನಾದನು. ಅಯ್ಯಾ ಧರ್ಮಾತ್ಮ ಇನ್ನು ತಮ್ಮ ಅಪೇಕ್ಷೆ ಏನೆಂದು ಹೇಳಿಕೊಂಡರೆ ಪೂರೈಸುವ ಹೊಣೆಗಾರಿಕೆ ನನ್ನದಾಗಿದೆ ಎಂದು ಹೇಳಿ ಕೈ ಮುಗಿದನು.
ಧರ್ಮರಾಯ ಆತನ ಕೋರಿಕೆಗೆ ಪ್ರತಿಕ್ರಿಯಿಸುತ್ತಾ ನುಡಿದ “ಅಯ್ಯಾ ಮಹಾರಾಜನೇ! ಪಣಗೆದ್ದ ಅರ್ಜುನ ನಿಮ್ಮ ಮಗಳನ್ನು ನಮ್ಮ ಬಿಡಾರಕ್ಕೆ ಕರೆದೊಯ್ದಾಗ, ನಮ್ಮಮ್ಮ ಧ್ಯಾನಸ್ಥರಾಗಿದ್ದರು. ದೈವ ಪ್ರೇರಣೆಯೋ, ನಿಯತಿಯ ಲೀಲೆಯೋ ಗೊತ್ತಿಲ್ಲ, ಅರ್ಜುನನು ಮಾತೆಯನ್ನುದ್ದೇಶಿಸಿ ದ್ರೌಪದಿಯ ವಿಚಾರ ಕೇಳಿದಾಗ ಉತ್ತರವಾಗಿ ಐವರೂ ಸಮನಾಗಿ ಹಂಚಿಕೊಳ್ಳಿ ಎಂದಳು. ಮಾತೃ ವಾಕ್ಯ ಪರಿಪಾಲನೆಯ ಹೊಣೆಗಾರರಾದ ನಾವು ಐವರಿಗೆ ಐದು ಭಿನ್ನ ಶರೀರವಗಳಿದ್ದರೂ ನಾವು ಏಕ ಮನಸ್ಕರು. ನಾವೇನೇ ಮಾಡಿದರೂ ಅದು ನಮ್ಮೈವರದ್ದು ಎಂಬ ನೀತಿಯಲ್ಲಿ ಬದುಕುತ್ತಿದ್ದೇವೆ. ಪಣ ಗೆದ್ದಿರುವುದು ಅರ್ಜುನನ ಸಾಹಸವಾದರೂ ನಮಗದು ಪಾಂಡವರ ಸಾಧನೆ. ಅದಕ್ಕೆ ಪೂರಕವಾಗಿ ಶಿವ ಧ್ಯಾನ ನಿರತ ಮಾತೆ, ದ್ರೌಪದಿಯ ವಿಚಾರದಲ್ಲಿ ಅರಿಯದೆ ಹೇಳಿದ ವಚನವನ್ನು ನಾವು ಆದೇಶದಂತೆ ಪಾಲಿಸಲು ಮುಂದಾಗಿದ್ದೇವೆ. ಸರ್ವರೂ ಅದನ್ನು ವಿಹಿತ ಎಂದೇ ತರ್ಕಿಸಿದ ಬಳಿಕ ಒಪ್ಪಿದ್ದೇವೆ. ನಮಗೈವರಿಗೂ ದ್ರೌಪದಿಯ ಜೊತೆ ವೈವಾಹಿಕ ವಿಧಿ ಪೂರೈಸಿ ಕನ್ಯೆಯನ್ನು ಧಾರೆ ಎರೆದು ಕೊಡಬೇಕೆಂಬ ಅಪೇಕ್ಷೆ ನಮ್ಮದು” ಎಂದು ತಿಳಿಸಿದನು.
ಧರ್ಮರಾಯನ ಮಾತು – ಇವರು ಪಾಂಡವರು, ಗೆದ್ದವ ಅರ್ಜುನ ಎಂಬ ಸತ್ಯ ಅತಿ ಆನಂದ ನೀಡಿದರೆ, ಐವರಿಗೆ ದ್ರೌಪದಿಯೊಬ್ಬಳು ಪತ್ನಿಯಾಗಬೇಕೆಂಬ ಮಾತು ದ್ರುಪದನಿಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದ ಅನುಭವವಾಗಿಸಿತು. ಮೇಲಾಗಿ ಆ ಬೇಡಿಕೆ ಸಹ್ಯವಾಗಲಿಲ್ಲ. ಆತ ಧರ್ಮರಾಯನಲ್ಲಿ ಈ ನಡೆಯ ಕುರಿತಾಗಿ ಧರ್ಮ ಜಿಜ್ಞಾಸೆಗೆ ತೊಡಗಿದನು.
ಮುಂದುವರಿಯುವುದು…