
ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾದ ಪರಶುರಾಮ ಪ್ರತಿಮೆಯಲ್ಲಿ ಭಾರೀ ದೊಡ್ಡ ಮೋಸವಾಗಿದ್ದು ಹಿಂದು ಧಾರ್ಮಿಕ ವಿಧಿ ವಿಧಾನಗಳಿಂದ ಉದ್ಘಾಟನೆಗೊಂಡ ಪರಶುರಾಮ ಪ್ರತಿಮೆಯು ಇಂದು ರುಂಡ ಬೇರೆ ಮುಂಡ ಬೇರೆಯಾಗಿ ನಿಂತಿರುವ ದಯನೀಯ ಪರಿಸ್ಥಿತಿಯಿಂದ ಬೇಸತ್ತು, ಪರಶುರಾಮ ಪ್ರತಿಮೆಯ ಪುನರ್ನಿರ್ಮಾಣಕ್ಕೆ ಆಗ್ರಹಿಸಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲುರವರು ಪತ್ರಿಕಾಗೋಷ್ಠಿ ನಡೆಸಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸುವ ಮೂಲಕ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಸಲಹೆಯನ್ನು ನೀಡಿರುವುದು ಆಸ್ತಿಕ ವಲಯದಲ್ಲಿ ಭರವಸೆಯನ್ನು ಮೂಡಿಸಿದೆ.
ಉದಯ ಶೆಟ್ಟಿ ಮುನಿಯಾಲು,ರವರ ಮಾತಿನಿಂದ ಆಸ್ತಿಕ ವಲಯದಲ್ಲಿ ಭರವಸೆ ಮೂಡಿಸಿದರೆ ಕಾರ್ಕಳ ಬಿಜೆಪಿ ವಲಯದಲ್ಲಿ ನಡುಕು ಉಂಟಾಗಿರುವುದು ಏಕೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಪ್ರಶ್ನೆ ಮಾಡಿದ್ದಾರೆ.
ದೈವಸ್ಥಾನ, ದೇವಸ್ಥಾನ ಮುಂತಾದ ಧಾರ್ಮಿಕ ಶ್ರದ್ದಾ ಕೇಂದ್ರಗಳ ಜೀರ್ಣೋದ್ಧಾರ ಕಾರ್ಯ, ಪುನರ್ನಿರ್ಮಾಣ ಕಾರ್ಯಗಳನ್ನು ನಡೆಸುವಾಗ ಸಂಬಂದಪಟ್ಟ ಕ್ಷೇತ್ರದ ಪ್ರಮುಖರು ಒಗ್ಗಟ್ಟಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸುವುದು ನಮ್ಮ ಧರ್ಮದ ಪದ್ದತಿ ಹಾಗೂ ಸಂಪ್ರದಾಯವಾಗಿದೆ. ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಹಿಂದೂ ಜ್ಯೋತಿಷ್ಯ ಪದ್ದತಿಯಲ್ಲಿ ಅದರದ್ದೇ ಆದ ಮಹತ್ವವಿದ್ದು ಅದನ್ನು ಪ್ರಶ್ನಿಸುವ ಕೆಲಸವನ್ನು ದೈವ ದೇವರನ್ನು ನಂಬುವ ಯಾರೂ ಮಾಡುವುದಿಲ್ಲ. ಅದರಂತೆ ಪರಶುರಾಮ ಪ್ರತಿಮೆ ಭಗ್ನ ವಿಚಾರವಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸುವಂತೆ ಉದಯ ಶೆಟ್ಟಿ ಮುನಿಯಾಲು ಅವರು ಸಲಹೆ ನೀಡಿರುವುದನ್ನು ಕಾರ್ಕಳ ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಅವರು ಅಪಹಾಸ್ಯ ಮಾಡಿರುವುದು ಇದು ಹಿಂದು ಜ್ಯೋತಿಷ್ಯ ಪದ್ದತಿಗೆ ಬಗೆದ ದ್ರೋಹವಾಗಿದೆ. ಕಾರ್ಕಳ ಬಿಜೆಪಿ ನಾಯಕರ ಹಣದ ಮದ, ದರ್ಪ ದೌಲತ್ತು ಪವಿತ್ರ ಜ್ಯೋತಿಷ್ಯ ಪದ್ದತಿಯಾದ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನೇ ಅವಹೇಳನ ಮಾಡುವಷ್ಟು ಬೆಳೆದಿದೆ ಎಂದರು.
ಅಷ್ಟಮಂಗಲ ಪ್ರಶ್ನಾ ಚಿಂತನೆಯ ಸಲಹೆಯ ವಿಚಾರವನ್ನು ತಿಳಿಯುತ್ತಿದ್ದಂತೆ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಭಾರೀ ದೊಡ್ಡ ಮೋಸವನ್ನು ಎಸಗಿದ ದುಷ್ಟ ಶಕ್ತಿಗಳು ಬಾಯಿಗೆ ನೀರಿಲ್ಲದೆ ಸತ್ತ ಪ್ರೇತಾತ್ಮದಂತೆ ಕಂಗಾಲಾಗಿ ಸಾಮಾಜಿಕ ಜಾಲತಾಣದ ಮೂಲಕ ಅರಚಲು ಆರಂಭಿಸಿವೆ. ಈ ದುಷ್ಟಶಕ್ತಿಗಳು ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನೇ ಅಪಹಾಸ್ಯ ಮಾಡುವ ಹಂತಕ್ಕೆ ಬಂದಿರುವುದು ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ ಎಂದಂತಾಗಿದೆ.
ಅಪವಿತ್ರಗೊಂಡ ಪ್ರತಿಮೆಯ ಪುನರ್ನಿರ್ಮಾಣಕ್ಕೆ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿದರೆ ಕಾರ್ಕಳ ಬಿಜೆಪಿಯ ನವೀನ್ ನಾಯಕ್ ಅವರಿಗೆ ಯಾಕೆ ಭಯ..? ಸುನಿಲ್ ಕುಮಾರ್ ಬೆಂಬಲಿಗರು ಅಷ್ಟಮಂಗಲ ಪ್ರಶ್ನೆಯನ್ನು ವಿರೋದಿಸುತ್ತಿರುವುದು ಏತಕ್ಕಾಗಿ…?
ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಪ್ರಾಮಾಣಿಕತೆ ಇದ್ದರೆ ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಬಿಜೆಪಿಯು ಬೆಂಬಲಿಸಬೇಕಿತ್ತು. ಬೆಂಬಲಿಸುವ ಬದಲು ಕಾರ್ಕಳ ಬಿಜೆಪಿ ಪ್ರಶ್ನಾ ಚಿಂತನೆಗೆ ವಿರೋಧ ಮಾಡುತ್ತಿರುವುದರ ಹಿಂದೆ ಬಹುದೊಡ್ಡ ಮೋಸದ ಜಾಡು ಇದೆ ಎಂದವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.