ಸಾಕ್ಷ್ಯಾಧಾರ ಕೊರತೆಯಿಂದ ತನಿಖೆಗೆ ಅರ್ಹವಲ್ಲ ಎಂದ ಲೋಕಾಯುಕ್ತ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂ ಹಗರಣದ ಪ್ರಮುಖ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಅದೇನೆಂದರೆ ತನಿಖೆ ಮುಕ್ತಾಯವಾಗಿ ಮೈಸೂರು ಲೋಕಾಯುಕ್ತರು ತನಿಖಾ ವರದಿಯನ್ನು ನ್ಯಾಯಾಲಯಲಕ್ಕೆ ಸಲ್ಲಿಸಲು ಮುಂದಾಗಿದ್ದಾರೆ.
ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದ್ದು ಈ ಬಗ್ಗೆ ಲೋಕಾಯುಕ್ತವು ದೂರುದಾರ ಸ್ನೇಹಮಯಿಕೃಷ್ಣಗೆ ನೋಟಿಸ್ ನೀಡಿ ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲದ ಪ್ರಕರಣ ಎನ್ನುವುದನ್ನು ತಿಳಿಸಿದೆ. ಅಲ್ಲದೇ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಎಂದು ಕಂಡು ಬಂದಿದ್ದು ಹೀಗಾಗಿ ಈ ಪ್ರಕರಣ ತನಿಖೆಗೆ ಅರ್ಹವಲ್ಲ ಎಂದಿದೆ. ಇನ್ನು ಈ ವರದಿಯನ್ನು ವಿರೋಧಿಸುವುದಿದ್ದರೆ ತಾವು ಈ ನೋಟೀಸು ತಲುಪಿದ ಒಂದು ವಾರದೊಳಗಾಗಿ ಮ್ಯಾಜಿಸ್ಟ್ರೇಟರ್ ಎದುರು ಆ ಬಗ್ಗೆ ವಿರೋಧಿಸಬಹುದಾಗಿದೆ ಎಂದು ಸೂಚಿಸಿದೆ.
ಮುಡಾ ಪ್ರಕರಣದ ಆರೋಪಿ 1ರಿಂದ ಆರೋಪಿ 4ರವರೆಗಿನ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿರುವುದಿಲ್ಲ. ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2016ರಿಂದ 2024ರವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನ ನೀಡಿರುವ ಆರೋಪಗಳಿವೆ. ಈ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಅಂತಿಮ ವರದಿ ಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ದೂರುದಾರ ಸ್ನೇಹಮಯಿ ಕೃಷ್ಣಗೆ ನೀಡಿರುವ ನೋಟಿಸ್‌ನಲ್ಲಿ ಲೋಕಾಯುಕ್ತ ಉಲ್ಲೇಖ ಮಾಡಿದೆ.
ಇದರಿಂದ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತ ಪೊಲೀಸರ ವಿರುದ್ಧ ಕಿಡಿಕಾರಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದು, ಇದನ್ನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಹೇಳಿದ್ದಾರೆ. ತನಿಖೆ ಇನ್ನೂ ಬಾಕಿಯಿರುವಾಗಲೇ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ತನಿಖೆ ಮುಕ್ತಾಯಗೊಳಿಸದೇ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.