ಭಾಗ 109
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೧೦ ಮಹಾಭಾರತ
ಧ್ಯಾನ ಪೂರೈಸಿ ಮಾತೆ ಕುಂತಿ ಹೊರಬಂದು ನೋಡಿದರೆ ತನ್ನೈದು ಮಕ್ಕಳು ರಾಜಕುಮಾರಿಯ ಜೊತೆ ಬಂದು ನಿಂತಿರುವುದನ್ನು ಕಂಡು ಅರ್ಜುನನು ಕೂಗಿ ಕರೆದು ಹೇಳಿದ ಫಲ ಈ ಹೆಣ್ಣೇ? ನಾನು ಹಣ್ಣೆಂದು ಭಾವಿಸಿ ನೀವೈವರೂ ಹಂಚಿಕೊಳ್ಳಿ ಎಂದು ಹೇಳಿದ್ದು ಪ್ರಮಾದವಾಯಿತಲ್ಲಾ ಎಂಬುವುದಾಗಿ ಚಿಂತಿಸತೊಡಗಿದಳು.
ಆಗ ಅರ್ಜುನ ಧರ್ಮರಾಯನಿಗೆ ಪ್ರಣಾಮ ಸಲ್ಲಿಸಿ “ಅಣ್ಣಾ, ಅಮ್ಮನ ಆಜ್ಞೆಯಂತೆ ನಾವು ಐವರೂ ದ್ರೌಪದಿಯನ್ನು ವರಿಸಬೇಕೆಂದು ಅಪ್ಪಣೆಯಾಗಿದೆ” ಎಂದನು. ಅರ್ಜುನನ ಮಾತು ಕೇಳಿ ಧರ್ಮರಾಯ “ಅಯ್ಯಾ ವೀರನೇ ಪಣ ವಿಜೇತನಾದ ನೀನೇ ದ್ರೌಪದಿಗೆ ಅಧಿಕಾರಿ. ನೀನೇ ಆಕೆಗೆ ಪತಿಯಾಗುವುದು ಧರ್ಮ ಸಮ್ಮತ. ನಾವು ಐವರಲ್ಲಿ ಭೇದವಿಲ್ಲ ನಿಜ. ಆದರೆ ವೈವಾಹಿಕ ವಿಚಾರ ಬಂದಿರುವ ಈ ಸಂದರ್ಭ ಪಣಗೆದ್ದ ನೀನೇ ವಾರಸುದಾರನಾಗುವೆ” ಎಂದನು.
ಅರ್ಜುನ ಅಣ್ಣನ ವಿಚಾರ ವಿಮರ್ಷೆ ಆಲಿಸಿ, “ಅಣ್ಣಾ.. ಅರಿತೋ ಅರಿಯದೆಯೋ ಅಮ್ಮ ಹೇಳಿದ್ದಾರೆ. ಈವರೆಗೆ ನಾವು ಅಮ್ಮನ ಮಾತು ಮೀರಿದವರಲ್ಲ. ಹಾಗೆಯೇ ನಮ್ಮ ಸಂಪಾದನೆ ಯಾವ ರೂಪದಲ್ಲಿದ್ದರೂ ಈವರೆಗೆ ನಮ್ಮಲ್ಲಿ ಭೇದವಿರಲಿಲ್ಲ. ನಾವೆಲ್ಲರೂ ಸಮಾನ ಹಕ್ಕುದಾರರಾಗಿಯೇ ಬದುಕಿದ್ದೇವೆ. ಹಾಗಿರುವಾಗ ಮಾತೆಯ ಆಜ್ಞೆ ಒಂದೊಮ್ಮೆಗೆ ಪ್ರಮಾದ ವಾಕ್ಯವಾಗಿದ್ದರೂ ನಮಗದು ಪಾಲಿಸಲೇ ಬೇಕಾದ ಧರ್ಮವಾಗಿದೆ. ನಮ್ಮೊಳಗೆ ಇನ್ನೂ ಭೇದವಿಲ್ಲ ಎಂಬ ಸತ್ಯವನ್ನು ಮುಂದುವರಿಸುವಲ್ಲಿ ಪೂರಕವೂ ಆಗುತ್ತದೆ. ಹಾಗಾಗಿ ಈ ದ್ರುಪದ ರಾಜಕುಮಾರಿ ನಾವು ಐವರು ಪಾಂಡವರಿಗೂ ಪತ್ನಿಯಾಗಲಿ” ಎಂದನು.
ಅರ್ಜುನನ ಮಾತು ಕೇಳಿದ ದ್ರೌಪದಿ ಆಶ್ಚರ್ಯಚಕಿತಳಾಗಿ “ಏನು ನೀವು ಪಾಂಡವರೇ” ಎಂದು ಐದೂ ಮಂದಿಯ ಮುಖ ನೋಡಿದಳು. ಪಾಂಡವರೂ ಅತ್ತ ತಿರುಗಿ ಪರಸ್ಪರ ಮುಖ ನೋಡಿಕೊಂಡರು. ದ್ರೌಪದಿ ಎಲ್ಲರಿಗೂ ನಮಿಸಿದಳು. ಆಕೆಯನ್ನು ಪಣದಲ್ಲಿ ಗೆದ್ದಿರುವುದು ಅರ್ಜುನನೇ ಇರಬೇಕು ಎಂಬ ಆಕೆಯ ಊಹೆ ಸ್ಪಷ್ಟವಾಯಿತು. ಸ್ವಯಂವರ ಮಂಟಪದಲ್ಲಿ ಪರಿಚಯಕ್ಕೂ ಅವಕಾಶವಿರದೆ ನಡೆದ ಆಕಸ್ಮಿಕ ಯುದ್ದ ಸಂದರ್ಭ ಶ್ರೀಕೃಷ್ಣನ ಸೂಚನೆಯಂತೆ ಅರ್ಜುನನ ರಥವೇರಿ ಕದನ – ಕಾಳಗಗೈಯುತ್ತಲೇ ಮುಂದುವರಿದು ಇಲ್ಲಿಗೆ ಬಂದು ಸೇರಿದ ಕಾರಣ ಈ ವರೆಗೆ ಇವರ್ಯಾರು ಎಂದು ತಿಳಿಯಲಾಗದೇ ಉಳಿದಿತ್ತು.
ಅರ್ಜುನನ ಮಾತು ಮಾತೃ ವಾಕ್ಯ ಪಾಲನಾ ಧರ್ಮವಾಗಿಯೇ ಇರುವುದು ಸತ್ಯ. ಇದೇ ವಿಧಿ ವಿಲಾಸ ಆಗಿದ್ದರೆ ಹಾಗೆಯೇ ಆಗಲಿ ಎಂದು ಧರ್ಮರಾಯ ದ್ರೌಪದಿಯ ವಿವಾಹ ಐವರು ಪಾಂಡವರ ಜೊತೆ ನಡೆಸಲು ಸಮ್ಮತಿಸಿದ. ಕುಂತಿಗೆ ತನ್ನ ಮಕ್ಕಳು ತನಗೀಯುತ್ತಿರುವ ಗೌರವ ಕಂಡು ಮನತುಂಬಿ ಬಂದರೂ, ತನ್ನಿಂದಾದ ಅಚಾತುರ್ಯಕ್ಕೆ ಕಡು ದುಃಖಿತಳಾದಳು. ಧರ್ಮದ ಪ್ರತಿರೂಪ ಧರ್ಮಜನೇ ಸಮ್ಮತಿಸಿದ ಮೇಲೆ ಈ ಸಂಬಂಧದ ಬಗೆಯಲ್ಲಿ ಕುಂತಿಗೇನೂ ಗೊಂದಲವಿರದೆ ಆಕೆಯೂ ಹಾಗೇ ಮುಂದುವರಿಯುವ ತನ್ನ ಮಕ್ಕಳ ನಿರ್ಧಾರಕ್ಕೆ ಒಪ್ಪಿಗೆ ನೀಡಿದಳು. ದ್ರೌಪದಿಯ ಮುಂದೆ ಆಯ್ಕೆ ಇರದಿದ್ದರೂ ಆಕೆಯ ಸಹಮತವೂ ಸಿಕ್ಕಿತು.
ಆ ಹೊತ್ತಿಗೆ ಅಲ್ಲಿಗೆ ಧೌಮ್ಯರ ಜೊತೆ ಕೃಷ್ಣ ಬಲರಾಮರು ಪಾಂಡವರಿರುವ ಕುಂಬಾರನ ಮನೆಗೆ ಬಂದರು. ಕುಂತಿಗೆ ಇವರ ಪರಿಚಯವಿರಲಿಲ್ಲ. ಧರ್ಮರಾಯ ಅರ್ಜುನರು ಸ್ವಯಂವರ ಮಂಟಪದಲ್ಲಿ ಸ್ವಾಗತ ಬಹುಪರಾಕ್ ಕೂಗಿದ ಸಂದರ್ಭ ಕೃಷ್ಣ ಬಲರಾಮರನ್ನು ಕಂಡು ಗುರುತಿಸಿದ್ದರು. ಅರ್ಜುನ ಮತ್ಸ್ಯಯಂತ್ರ ಭೇದನದ ಮೊದಲೇ ಸನ್ನೆಯಲ್ಲೆ ಪರಿಚಯದ ದೃಷ್ಟಿಯನ್ನೂ, ಪ್ರಣಾಮವನ್ನೂ ಸಲ್ಲಿಸಿ ಮುಂದುವರೆದಿದ್ದನು. ಆದರೆ ಕುಂತಿ ಈವರೆಗೆ ನೋಡಿರದ ಕಾರಣ ಕೃಷ್ಣ ಬಲರಾಮರನ್ನು ಗುರುತಿಸುವಲ್ಲಿ ಹಿಂದುಳಿದಾಗ ಶ್ರೀ ಕೃಷ್ಣ ಪರಮಾತ್ಮನೇ ಸ್ವಂತ ಪರಿಚಯ ಹೇಳಿಕೊಂಡ. “ಅಮ್ಮಾ ನಿಮಗೆ ನಮ್ಮ ನಮನಗಳು. ನಾವೀರ್ವರು ವಸುದೇವ ದೇವಕಿಯ ಮಕ್ಕಳು. ನಾನು ಕೃಷ್ಣ, ಈತ ನನ್ನಣ್ಣ ಬಲರಾಮ. ನೀವೆಲ್ಲರೂ ಕ್ಷೇಮ ತಾನೇ? ಲೋಕದ ಬಹುಮಂದಿ ನೀವು ಆರೂ ಜನ ವಾರಣಾವತದ ಅರಮನೆಯ ದುರಂತದಲ್ಲಿ ಅಗ್ನಿಗಾಹುತಿಯಾಗಿದ್ದೀರಿ ಎಂದೇ ನಂಬಿದ್ದರೂ ನಾನು ಮಾತ್ರ ಆ ವಿಚಾರ ಒಪ್ಪಿರಲಿಲ್ಲ. ಇಂದಿನ ಸ್ವಯಂವರದಲ್ಲಿ ನಿಮ್ಮನ್ನೆಲ್ಲಾ ಕಾಣುವ ಸಾಧ್ಯತೆ ಇದೆ ಎಂಬ ನನ್ನ ವಿಶ್ವಾಸಕ್ಕೆ ಪೂರಕವಾಗಿ ಎರಡು ವಿಚಾರಗಳಿದ್ದವು. ಮೊದಲನೆಯದಾಗಿ ದ್ರುಪದ ತನ್ನ ಮಗಳನ್ನು ಯಾಗಮುಖದಲ್ಲಿ ಪಡೆಯುವಲ್ಲಿ ಅರ್ಜುನನ ಪತ್ನಿಯಾಗುವ ಮಗಳು ನನಗೆ ಬೇಕೆಂದು ಬೇಡಿದ್ದ ಸಂಕಲ್ಪ. ಮತ್ತೆ ಎರಡನೆಯದಾಗಿ ಇಂದು ನಡೆದ ಸ್ವಯಂವರ ಪಣದಲ್ಲಿ ಅರ್ಜುನನ್ನುಳಿದು ಇನ್ಯಾವ ಕ್ಷತ್ರಿಯನಿಗೂ ಗೆಲುವು ಕಷ್ಟಸಾಧ್ಯ ಎಂದೇ ಒಪ್ಪಬಹುದಾದ ರೀತಿಯ ಪಣವಿದ್ದದ್ದು. ಅಲ್ಲಿಗೆ ನಾನು ಮತ್ತೆ ಅಣ್ಣ ಬಂದು ಸೇರಿದ ಬಳಿಕ ಪಾಂಡವರು ಬಂದಿರಬಹುದು ಎಂಬ ನಂಬಿಕೆಯ ದೃಷ್ಟಿಯಲ್ಲಿ ಹುಡುಕಿದಾಗ ಈ ಐವರು ತೇಜಸ್ವಿಗಳು ವಿಪ್ರ ರೂಪದಲ್ಲಿರುವುದನ್ನು ಕಂಡು ಇವರೇ ಪಾಂಡವರಾಗಿರಬಹುದು ಎಂದು ಊಹಿಸಿದ್ದೆ. ಮತ್ತೂ ಮುಂದುವರಿದು ಯಾವ ಕ್ಷಾತ್ರವೀರನಿಗೂ ಅಸದಳವಾದ ಮತ್ಸ್ಯ ಯಂತ್ರ ಭೇದನಕ್ಕೆ ವಿಪ್ರನೋರ್ವ ಮುಂದಾದಾಗ ಸ್ಪಷ್ಟವಾಗಿ ತಿಳಿಯಿತು ಈತನೇ ಅರ್ಜುನನೆಂದು. ಕಿಂಧುರವನ್ನು ಹೆದೆಯೇರಿಸಿ ಪಣ ಗೆದ್ದಾಗ ನನ್ನ ಊಹೆಯಲ್ಲಿ ಯಾವುದೇ ಅನುಮಾನವಿಲ್ಲದೆ ಈತನೇ ಅರ್ಜುನ ಹೌದು ಎಂಬುವುದಾಗಿ ಸಾಬೀತಾಯಿತು. ಆ ಬಳಿಕ ಸಾಗಿದ ಯುದ್ದದಲ್ಲಿ ಭೀಮಾರ್ಜುನರ ವಿಕ್ರಮ, ಅಮಿತ ಪರಾಕ್ರಮ ಅಸದೃಶವಾಗಿತ್ತು. ಆರ್ಯಾವರ್ತದ ವೀರ ರಾಜರೆಲ್ಲರೂ ಒಂದಾಗಿ ಏಕಕಾಲದಲ್ಲಿ ವಿರೋಧಿಗಳಾಗಿ ಹೋರಾಡಿದರೂ ನಿಮ್ಮ ಈ ಪುತ್ರರ ಬಾಹುಬಲ – ಯುದ್ದ ಕೌಶಲದ ಮುಂದೆ ನಿಲ್ಲಲಾಗದೆ ಓಡಿ ಹೋಗುವಲ್ಲಿ ಅನ್ಯ ದಾರಿಯಿಲ್ಲದಂತಾಯಿತು. ಪ್ರತ್ಯಕ್ಷವಾಗಿ ನನ್ನತ್ತೆ ನಿಮ್ಮನ್ನು ಹಾಗು ನಿಮ್ಮ ಮಕ್ಕಳಾದ ವೀರ ಪಾಂಡವರನ್ನು ಈ ವರೆಗೆ ಕಾಣುವ ಸಮಯ ಒದಗಿ ಬಾರದೇ ಇದ್ದು, ಕೇವಲ ಸುದ್ದಿ ಮಾತ್ರ ತಿಳಿಯುತ್ತಿದ್ದೆವು. ಇಂದು ಕೇಳಿ ತಿಳಿದ ಸಕಲ ವಾರ್ತೆಗಳನ್ನೂ ಪ್ರತ್ಯಕ್ಷ ಸಾಕ್ಷಿ ಸಮೇತ ದೃಷ್ಟಾಂತವಾಗಿ ನೋಡಿ ಆನಂದಿಸುವ ದಿನ ಕೂಡಿ ಬಂತು. ಹಾಗಾಗಿ, ನಮ್ಮತ್ತೆ ನಿಮ್ಮನ್ನೂ – ಪಾಂಡವರನ್ನೂ ಕಂಡು ಕುಶಲೋಪರಿ ವಿಚಾರಿಸಿ ಶುಭಾಶಯ ಕೋರಿ ಹೋಗುವ ಮನಸ್ಸಾದ ಕಾರಣ ಇಲ್ಲಿಯವರೆಗೆ ಬರುವಂತಾಯಿತು” ಎಂದನು ಶ್ರೀ ಕೃಷ್ಣ.
ತನ್ನ ಅಣ್ಣನ ಮಕ್ಕಳು ಕೃಷ್ಣ ಬಲರಾಮರನ್ನು ಕಂಡು ಅತಿ ಸಂತೋಷಗೊಂಡಳು ಕುಂತಿ. ಅಣ್ಣನ ಮಕ್ಕಳ ಬಾಲ್ಯ ಜೀವನ, ಸಾಧನೆಗಳನ್ನು ಕೇಳಿ ತಿಳಿದಿದ್ದ ಕುಂತಿಗೂ ಅವರನ್ನು ನೋಡುವ ಮಹದಾಸೆ ಇತ್ತು. ಆದರೆ ದರ್ಶನ ಭಾಗ್ಯ ಈವರೆಗೆ ಒದಗಿರಲಿಲ್ಲ. ಬಹಳಷ್ಟು ವಿಚಾರಗಳನ್ನು ಹೇಳಿ ಮಹತ್ತರವಾದದ್ದನ್ನು ಅವರ ಬಳಿ ಕೇಳುವ ನಿರ್ಣಯ ಮನದಲ್ಲೇ ತೀರ್ಮಾನಿಸಿ ಮಾತಿಗೆ ತೊಡಗಿದಳು ಪಾಂಡವ ಮಾತೆ ಕುಂತಿದೇವಿ.
ಮುಂದುವರಿಯುವುದು…













