31 C
Udupi
Sunday, May 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 103

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೦೪ ಮಹಾಭಾರತ

ಪಾಂಚಾಲದತ್ತ ಸಾಗುತ್ತಿದ್ದಂತೆ ದಾರಿಯಲ್ಲಿ ಬಹಳಷ್ಟು ಬ್ರಾಹ್ಮಣರು ಸಿಕ್ಕಿದರು. ಅವರೂ ಪಾಂಚಾಲದಲ್ಲಿ ನಡೆಯುವ ಸ್ವಯಂವರ ಕಣ್ತುಂಬಿಕೊಂಡು ದಾನ ಪಡೆಯಲು ಹೋಗುತ್ತಿದ್ದರು. ಅವರ ಜೊತೆ ಪಾಂಡವರೂ ಬ್ರಾಹ್ಮಣರಂತೆಯೇ ವ್ಯವಹರಿಸುತ್ತಾ ಪಾಂಚಾಲದ ವಿಷಯ ಕೇಳಿ ತಿಳಿಯುತ್ತಾ ಸಾಗಿದರು. ಅರ್ಜುನ ದ್ರೌಪದಿಯ ಬಗ್ಗೆ ಕೇಳಿದಾಗ – ಆಕೆಯ ಸ್ನಿಗ್ಧ ಸೌಂದರ್ಯ, ಅದ್ವಿತೀಯ ಚೆಲುವು, ಗುಣ ನಡತೆ, ಸಂಸ್ಕಾರ ಹೀಗೆ ಗುಣಗಾನಗಳ ಸುರಿಮಳೆಯೇ ಸುರಿಸಿದರು. ಹೀಗೆ ನಡೆದು ನಡೆದು ಕುಂತಿ ಆಯಾಸಗೊಂಡಾಗ ವಿರಮಿಸಿದರು. ಸಂಜೆಯ ಹೊತ್ತು ಮತ್ತೆ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿದರು. ರಾತ್ರಿಯಾಗಿತ್ತು ಗಂಗಾನದಿಯ ತೀರ, ಹುಣ್ಣಿಮೆಯ ಚಂದ್ರಮ ಪಶ್ಚಿಮಾಭಿಮುಖವಾಗಿ ಇಳಿಯುತ್ತಿದ್ದಾನೆ. ಗಂಗಾಜಲ ಮಂಜಾಗಿ ಘನೀಕರಿಸಿ ಬೆಳ್ಳಿಯ ಹೊದಿಕೆ ಹೊದ್ದಂತೆ ಕಾಣುತ್ತಿದೆ. ಇಳಿ ರಾತ್ರಿಯ ಹೊತ್ತು ಉಳಿದ ಬ್ರಾಹ್ಮಣರು ಆಗಲೆ ವಿಶ್ರಾಂತಿ ತಾಣಗಳಲ್ಲಿ ತಂಗಿದ್ದರು. ಪಾಂಡವರು ಮಾತ್ರ ಕಾಷ್ಟಗಳನ್ನು (ಕಟ್ಟಿಗೆಗಳನ್ನು) ಜೋಡಿಸಿ ಪಂಜುಗಳನ್ನು ಮಾಡಿ ಅದರ ಬೆಳಕನ್ನು ದಾರಿಕಾಣಲೂ, ಅದರಿಂದ ಉತ್ಪನ್ನವಾಗುತ್ತಿದ್ದ ಹದ ಬಿಸಿಯನ್ನು ಚಳಿಯ ಉಪಶಮನಕ್ಕೋ ಎಂಬಂತೆ ಹಿಡಿದುಕೊಂಡು ಮಾತೆ ಕುಂತಿಯ ಜೊತೆ ಆಹ್ಲಾದಕರ ಪ್ರಯಾಣದಲ್ಲಿ ತೊಡಗಿದ್ದರು. ಹಗಲಿನ ಸುಡುಬಿಸಿಲ ಉರಿಯ ಬದಲು ಸಾಧ್ಯವಾದಷ್ಟು ನಿದ್ರೆ ಆವರಿಸುವವರೆಗೆ ರಾತ್ರಿಯ ಪ್ರಯಾಣ ಬೆಳೆಸಿ ಮತ್ತೆ ವಿರಮಿಸುವ ಯೋಜನೆ ಅವರದ್ದಾಗಿತ್ತು. ಗಂಗೆಯ ತಡಿಯಲ್ಲಿ ಮಂಜುಳ ನಿನಾದ, ಚಂದ್ರಮನ ಬೆಳದಿಂಗಳ ತಂಪು, ಸುಗಂಧಮಿಶ್ರಿತವಾಗಿ ಬೀಸುತ್ತಿದ್ದ ಮಂದ ಮಾರುತ ಹೀಗೆ ಯಾನಕ್ಕೆ ಪೂರಕವಾಗಿರಲು ನಿಧಾನವಾಗಿ ಸಾಗುತ್ತಿದ್ದರು.

ಒಮ್ಮೆಲೇ ಧನುಷ್ಟೇಂಕಾರವೂ, “ಯಾರದು ನಿಲ್ಲಿ ಅಲ್ಲಿ” ಎಂಬ ಆದೇಶವೂ ಕೇಳಿಬಂತು. ಅರ್ಜುನ ತಕ್ಷಣ ತನ್ನೊಡನಿದ್ದವರನ್ನು ನಿಲ್ಲಿಸಿದ. “ಯಾರೂ ಮುಂದೆ ಬರಬೇಡಿ ನೀವೆಲ್ಲ ಜೊತೆಯಾಗಿ ಇಲ್ಲೇ ನಿಲ್ಲಬೇಕು” ಎಂದು ಸೂಚನೆ ನೀಡಿದ. ತಾನೋರ್ವನೇ ನಾಲ್ಕಾರು ಹೆಜ್ಜೆ ಮುಂದೊತ್ತಿ ಬಂದು ಅವಲೋಕಿಸಿದ. ಚಾಪಟಂಕಾರದ ಸದ್ದು ಕ್ಷತ್ರಿಯರಿಗೆ ಪ್ರಹಾರದ ಸೂಚನೆ. ಧನುರ್ವೇದ ಪ್ರವೀಣ ಅರ್ಜುನನಿಗೆ ಯುದ್ದಾಹ್ವಾನ ನೀಡಿರುವುದು ತಿಳಿಯಿತು. ಪ್ರತಿಯಾಗಿ ಅರ್ಜುನನೂ ಪ್ರಶ್ನಿಸಿದ – “ನೀವು ಯಾರು? ನಮ್ಮಿಂದ ಏನು ಅಪಚಾರವಾಗಿದೆ? ತಡೆಯುವಲ್ಲಿ ಕಾರಣವೇನು?” ಎಂದು ಗಂಭೀರವಾಗಿ ಮರು ಪ್ರಶ್ನೆ ಕೇಳಿದ. ಆಗ ಉತ್ತರ ಕೇಳಿ ಬಂತು – “ರಾತ್ರಿಯ ಪೂರ್ವ ಭಾಗ ಕಳೆದು ಎಂಬತ್ತು ವಿಘಳಿಗೆಗಳು ಕಳೆದು ಬರುವ ಈ ಇಳಿರಾತ್ರಿಯ ಹೊತ್ತು ಗಂಧರ್ವಾದಿಗಳ ಸಂಚಾರಕಾಲ. ಮನುಷ್ಯರಿಗೆ ಅನುಚಿತವಾದ ಈ ಹೊತ್ತಿನಲ್ಲಿ ನೀವು ಅತಿಕ್ರಮಣ ಮಾಡುತ್ತಾ ನಮ್ಮ ಏಕಾಂತಕ್ಕೆ ತೊಂದರೆ ನೀಡಿ ಅಪರಾಧವೆಸಗಿದ್ದೀರಿ. ಈ ಸಮಯ ಗಂಧರ್ವರಾದ ನಾವು ಜಲಕ್ರೀಡೆ, ಕಾಮಕೇಳಿಯಾದಿ ನಿರತರಾಗಿ ನೀರವ ಪ್ರಶಾಂತ ನಿಶೆಯಲ್ಲಿ ವಿಹರಿಸುವ ಕಾಲ. ಅಪರಾಧವೆಸಗಿದ ನೀವು ಯಾರೇ ಆಗಿರಿ, ನನ್ನ ಶರಗಳಿಗೆ ನಿಮ್ಮ ಶರೀರ ಆಹುತಿಯಾಗಲಿ” ಎಂದು ಸರಸರನೆ ಶರ ಪ್ರಯೋಗ ಮಾಡಿದ. ತಕ್ಷಣ ಅರ್ಜುನ ತನ್ನ ಕೈಯಲ್ಲಿದ್ದ ಪಂಜಿನಿಂದ ಒಂದು ಕಾಷ್ಟ ಕೊಳ್ಳಿಯನ್ನೆಳೆದು ಆಗ್ನೇಯಾಸ್ತ್ರ ಮಂತ್ರ ಅಭಿಮಂತ್ರಿಸಿ ಬರುತ್ತಿರುವ ಶರಗಳತ್ತ ಪ್ರತ್ಯಸ್ತ್ರವಾಗಿ ಬೀಸಿ ಎಸೆದು ಪ್ರಯೋಗಿಸಿದ. ಗಂಧರ್ವ ಪ್ರಯೋಗಿಸಿದ ಶರಗಳನ್ನೆಲ್ಲಾ ಸುಟ್ಟು ಮುಂದುವರಿದು ಅದೃಶ್ಯರಾಗಿದ್ದ ಗಂಧರ್ವನನ್ನೂ ಬೆನ್ನಟ್ಟಿ ಸುಡತೊಡಗಿತು ಅರ್ಜುನನ ಆಗ್ನೇಯಾಸ್ತ್ರ. ಇದನ್ನು ಕಂಡು ಬೆಚ್ಚಿಬಿದ್ದ ಆತನ ಜೊತೆಗಿದ್ದ ವಿಲಾಸಿನಿಯರು ಶರಣಾಗತರಾಗಿ ಕುಂತಿಯ ಪಾದಮೂಲಕ್ಕೆರಗಿ “ರಕ್ಷಿಸಬೇಕು” ಎಂದು ಆರ್ತರಾಗಿ ಬೇಡತೊಡಗಿದರು. ಧರ್ಮರಾಯ ಅರ್ಜುನನ್ನು ಕರೆದು “ಶತ್ರುಗಳೇ ಆಗಿದ್ದರೂ ಶರಣಾಗತರಾದ ಮೇಲೆ ದಂಡಿಸಬಾರದು, ಕ್ಷಮಿಸಬೇಕು. ಅದೇ ಧರ್ಮಸಮ್ಮತವಾದದ್ದು. ಆಗ್ನೇಯಾಸ್ತ್ರವನ್ನು ಹಿಂದಕ್ಕೆ ಕರೆಸಿಕೋ” ಎಂದು ಆದೇಶ ನೀಡಿದನು. ಅರ್ಜುನನು ತನ್ನ ಅಣ್ಣನ ಆಜ್ಞೆಯಂತೆ ಆಗ್ನೇಯಾಸ್ತ್ರ ಮಂತ್ರವನ್ನು ಉಪಸಂಹಾರ ಮಾಡಿ ಮಂತ್ರಾಸ್ತ್ರವನ್ನು ಉಪಶಮನಗೊಳಿಸಿದ. ಪರಿಣಾಮ ಗಂಧರ್ವ ಬದುಕುಳಿದು ಬಂದು ಶರಣಾಗತನಾದ. ಅರ್ಜುನನ ಮುಂದೆ ಬಂದು ಕೈ ಮುಗಿದು “ಮಹಾತ್ಮರೇ ನೀವು ಯಾರು? ನಿಮ್ಮ ಶಕ್ತಿ ಅರಿಯದೆ ನನ್ನಿಂದ ಅಪಚಾರವಾಯ್ತು, ಕ್ಷಮಿಸಬೇಕು” ಎಂದು ನಿವೇದಿಸಿಕೊಂಡನು. “ನೋಡಲು ಬ್ರಾಹ್ಮಣರಂತೆ ಕಂಡರೂ ಬೂದಿ ಮುಚ್ಚಿದ ಕೆಂಡದಂತೆ ನಿಮ್ಮ ಬ್ರಾಹ್ಮಣ್ಯ ರೂಪದ ಹಿಂದೆ ಅಮೋಘ ಶಕ್ತಿಯೂ, ವ್ಯಕ್ತಿತ್ವವೂ ಅಡಗಿದೆ. ದಯಮಾಡಿ ನೀವು ಯಾರೆಂದು ತಿಳಿಯಪಡಿಸಬೇಕು. ನಾನು ನಿಮಗೆ ಸಹಾಯಿಯಾಗಿ ಕ್ಷೇಮವನ್ನೇ ಉಂಟು ಮಾಡುವೆ. ನನ್ನಿಂದ ಇನ್ನು ನಿಮಗೆ ಕೆಡುಕಾಗದು. ದಯೆತೋರಿ ನನ್ನ ಮಾತುಗಳನ್ನು ನಂಬಬೇಕು. ನಾನು ಅಂಗಾರಪರ್ಣನೆಂಬ ವರ್ಗದ ಗಂಧರ್ವ. ಯಕ್ಷಾಧಿಪತಿಯಾದ ಕುಬೇರನ ಅನುಚರ, ನನ್ನ ಹೆಸರು ಚಿತ್ರರಥನೆಂಬುವುದಾಗಿ. ಈ ಕಾಡು ನನ್ನ ಅಧೀನವೂ ವೈಯಕ್ತಿಕವಾಗಿ ನಮ್ಮದೇ ವಿಹಾರವನವಾಗಿದೆ. ಈ ಹೊತ್ತಿನಲ್ಲಿ ನಮ್ಮ ಕನ್ಯೆಯರೊಡನೆ ವಿಹಾರಾರ್ಥಿಯಾಗಿ ಈ ಪ್ರದೇಶಕ್ಕೆ ನಿತ್ಯ ಜಲಕೇಳಿ, ನಾನಾ ವಿಧವಾದ ಕಾಮಕ್ರೀಡೆಗಳಿಗಾಗಿ ಬರುವುದು ನಮ್ಮ ನಿತ್ಯ ರೂಢಿ. ನನ್ನ ವಿಚಾರ ಪರಿಚಯ ಸವಿವರವಾಗಿ ತಿಳಿಸಿರುವೆ. ನೀವು ಯಾರೆಂಬುವುದಾಗಿ ತಿಳಿಸುವಿರಾ?” ಎಂದು ಕೇಳಿದ.

ಅರ್ಜುನ ಅಣ್ಣ ಧರ್ಮರಾಯನತ್ತ ನೋಡಿ, ಅನುಮತಿ ಪಡೆದು ಸವಿವರವಾಗಿ ತಮ್ಮ ಹುಟ್ಟು, ವಿದ್ಯಾಭ್ಯಾಸ, ಹಾಗೂ ಇಂದಿನ ಸ್ಥಿತಿಗೆ ಕಾರಣವನ್ನು ಸೂಚ್ಯವಾಗಿ ತಿಳಿಸಿದ.

ಪಾಂಡವರು ಗಂಧರ್ವ ಚಿತ್ರರಥ ಆತನಿಗೆ ನೀಡಿದ ಪ್ರಾಣದಾನ, ಪಾಂಡವರ ಸಜ್ಜನಿಕೆಗೆ ಮೆಚ್ಚಿ, ಎಲ್ಲದಕ್ಕೂ ಮಿಗಿಲಾಗಿ ದೈವಾಂಶ ಸಂಭೂತರು ಎಂಬ ವಿಚಾರ ತಿಳಿದು ಇವರಿಗೇನಾದರೂ ಮಹತ್ತರವಾದ ಕೊಡುಗೆ ನೀಡಲೇಬೇಕೆಂದು ತೀರ್ಮಾನಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page