ಭಾಗ 97
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೯೭ ಮಹಾಭಾರತ
“ಯುವರಾಜರಿಗೆ ಪ್ರಣಾಮಗಳು. ವಿದುರನ ಆಪ್ತ ವರ್ಗದ ಸೇವಕ ನಾನು. ನಿಮ್ಮ ಹಿತೈಷಿಯಾಗಿ ನನ್ನನ್ನು ಕಳುಹಿಸಿದ್ದಾರೆ. ಪ್ರಾಣ ಹಾನಿ ಮಾಡಲು ಆಯುಧಗಳ ಪ್ರಯೋಗವೇ ಆಗಬೇಕೆಂದಿಲ್ಲ……. ಹೀಗೆ ವಿದುರ ನಿಮಗೆ ನೀಡಿದ ಸಲಹೆಯ ವಿಚಾರವನ್ನು ನನಗೆ ಹೇಳಿ ಪುನರಾವರ್ತಿಸಿ ವಿದುರ ಸೇವಕ ಹೌದೆಂಬ ಸಾಕ್ಷಿಯಾಗಿ, ವಿಶ್ವಾಸಕ್ಕಾಗಿ ನಿಮ್ಮಲ್ಲಿ ಹೇಳಲು ಹೇಳಿದ್ದಾರೆ. ಈ ವಿಚಾರ ಕೇಳಿ ತಿಳಿದ ಮೇಲೆ ನಂಬಿದ ಧರ್ಮರಾಯ, ಸಂದೇಶಚರನನ್ನು ಕಳುಹಿಸಿರುವ ಉದ್ದೇಶ ಕೇಳಿ ತಿಳಿಯಲು ಉತ್ಸುಕನಾದನು.
ವಿದುರನ ಆಪ್ತ ಸೇವಕನು “ಸ್ವಾಮಿ ಈ ಮನೆಯು ಸುರಕ್ಷಿತವಲ್ಲ. ಇಲ್ಲಿ ನಿಮಗೆಲ್ಲರಿಗೂ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಈ ಅರಮನೆಯ ಸುತ್ತ ನಿಮ್ಮ ಚಲನ ವಲನ ಗಮನಿಸಲು ಸರ್ಪಗಾವಲಿನಂತೆ ಯೋಧರೂ, ಗುಪ್ತಚರರೂ ಇದ್ದಾರೆ. ಪಕ್ಕದಲ್ಲೇ ಆಯುಧ ಗ್ರಹವೂ ಇದ್ದು, ವಿಶೇಷವಾದ ಆಯುಧಗಳು ಶೇಖರಿಸಲ್ಪಟ್ಟಿವೆ. ಪುರೋಚನ ಈ ಕಾರ್ಯದ ಜವಾಬ್ದಾರಿ ವಹಿಸಿಕೊಂಡಿರುವ ನಾಯಕ. ನಿಮ್ಮ ಒಪ್ಪಿಗೆ ಪಡೆದು ಈ ಮನೆಯೊಳಗಿದ್ದು ಸುರಂಗ ಮಾರ್ಗವನ್ನು ಆದಷ್ಟು ಶೀಘ್ರ ಮಾಡಿ ಪೂರೈಸುವ ಹೊಣೆ ವಿದುರನ ಅಪ್ಪಣೆಯಂತೆ ನನ್ನ ಕರ್ತವ್ಯವಾಗಿದೆ. ಆ ತನಕ ರಾತ್ರಿ ಮಲಗುವಾಗಲು ಅಗ್ನಿ ಭಯವಿರುವ ಕಾರಣ ಮಲಗುವಷ್ಟು ಗಾತ್ರದ ಗುಹೆ ನಿರ್ಮಿಸಿಯೇ ಮಲಗಬೇಕು.” ಎಂದು ವಿದುರನ ಸೂಚನೆಯನ್ನು ವಿವರಿಸಿದನು. ಇದನ್ನು ಕೇಳಿ, ಯೋಚಿಸಿ ಅರಿತು ಧರ್ಮರಾಯ ಸೇವಕನಿಗೆ ಅನುಮತಿ ನೀಡುತ್ತಾನೆ. ಕುಂತಿಮಾತೆಗೂ ಅವರ ಕೋಣೆಯ ಮಂಚದ ಅಡಿಭಾಗದಲ್ಲಿ ಯಾರಿಗೂ ಗೊತ್ತಾಗದ ರೀತಿ ಮಲಗಲು ಬೇಕಾದಷ್ಟು ಅಳತೆಯ ಒಳಗುಹೆ ಸಿದ್ದವಾಯಿತು. ಅಲ್ಲಿಂದಲೇ ಮುಂದುವರಿದು ಸುರಂಗ ಮಾರ್ಗ ನಿರ್ಮಾಣದ ಕಾರ್ಯ ಆಹೋರಾತ್ರಿಯಿಂದ ವಿದುರ ಸೇವಕನಿಂದ ಆರಂಭವಾಯಿತು. ಕುಂತಿಯ ಅಂತಃಪುರಕ್ಕೆ ಅನ್ಯರಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಹೀಗೆ ಸಿದ್ದವಾಗುವ ಗುಹಾದಾರಿಯ ಹೊರಬಾಗಿಲು ನದೀ ತೀರಕ್ಕೆ ತಲುಪುವಂತೆ ಕೊರೆಯುವುದು, ಅನಿವಾರ್ಯ ಸಂದರ್ಭ ಒದಗಿದರೆ ಗುಹಾದಾರಿಯಲ್ಲಿ ಹೊರಬಂದು, ಅಲ್ಲಿಂದ ವಿದುರ ವ್ಯವಸ್ಥೆ ಮಾಡಿರುವ ದೋಣಿಯಲ್ಲಿ ಗಂಗಾ ನದಿ ದಾಟಿ ಪಾರಾಗುವುದು ಯೋಜನೆಯಾಗಿತ್ತು.
ಒಂದೆಡೆ ಈ ಕಾರ್ಯ ಸಾಗುತ್ತಿತ್ತು. ಪಾಂಡವರಿಗೆ ಹಾಗೂ ಬಂದ ಸೇವಕನಿಗೆ ಕುಂತಿ ಮಾತೆಯೇ ಅಡುಗೆ ಮಾಡಿ ಉಣಬಡಿಸುತ್ತಿದ್ದಳು. ಕಾರಣ ಶತ್ರುಗಳು ನೀಡುವ ಆಹಾರ ವಿಷಪೂರಿತವಾಗಿರುವ ಭಯವಿತ್ತು.
ಈ ಮಧ್ಯೆ ಒಂದೆಡೆ ಗುಹೆಯ ಪೂರ್ವ ತಯಾರಿ ಸಾಗುತ್ತಿದ್ದರೆ ಪಾಂಡವರು ಪುರೋಚನನೊಡನೆ ಆತ್ಮೀಯರಾಗಿ ವ್ಯವಹರಿಸುತ್ತಾ ವಿಹಾರ, ಸಮಾಲೋಚನೆ, ವಿಶ್ರಾಂತಿ ಹೀಗೆ ಜೊತೆ ಜೊತೆಯಾಗಿಯೇ ಸಹವರ್ತಿಸುತ್ತಾ ಸಂಶಯಕ್ಕೆ ಅವಕಾಶ ನೀಡುತ್ತಿರಲಿಲ್ಲ. ಪುರೋಚನನೂ ಆಪ್ತ ಸೇವಕನಂತೆ ವಿನಯ, ನಿಷ್ಠೆಯ ನುಡಿ ನಡೆಗಳನ್ನೇ ತೋರುತ್ತಿದ್ದ. ಪಾಂಡವರ ಸೇವೆಗಾಗಿ ಕೆಲ ಆಳುಗಳನ್ನು ಪುರೋಚನ ಒದಗಿಸಿದನಾದರೂ, ಅವರನ್ನು ಸಂಶಯ ಬರಬಾರದೆಂದು ಸ್ವಲ್ಪ ಅದಕ್ಕೋ ಇದಕ್ಕೋ ಕರೆದು ಕೆಲಸ ಹೇಳುತ್ತಾ ವಿನಿಯೋಗಿಸಿ ಹೊರ ಕಳುಹಿಸುತ್ತಿದ್ದರು.
ಹೀಗೆ ನಿರಂತರ ಹಲವು ರಾತ್ರಿ ವಿನಿಯೋಗಿಸಿ ಅಗೆತ ಕಾರ್ಯ ಸೇವಕನಿಂದ ಪೂರ್ಣವಾಗತೊಡಗಿತು. ಅರ್ಜುನ ಮತ್ತು ಸಹದೇವ ರಾತ್ರಿ ಪಾಳಿಯಲ್ಲಿ ಕಣ್ಗಾವಲಾಗಿ ರಕ್ಷಣೆ ಒದಗಿಸಿದರೆ, ನಕುಲ ತಾಯಿಯ ರಕ್ಷಣೆಗಾಗಿ ಜೊತೆಗಿರುತ್ತಿದ್ದ. ಭೀಮ ಅಗಳ್ತೆಯ (ಸುರಂಗ ಅಗೆಯುವ) ಸೇವಕನ ಜೊತೆ ಗುಹೆಯ ಕೆಲಸದಲ್ಲಿ ತೊಡಗಿರುತ್ತಿದ್ದ. ಭೀಮಾರ್ಜುನ ಸಹದೇವರು ಹಗಲು ಮಧ್ಯಾಹ್ನ ಹೊತ್ತು ವಿಶ್ರಮಿಸುತ್ತಿದ್ದರೆ, ಸೇವಕನಿಗೆ ಹಗಲು ಪೂರ್ತಿ ವಿಶ್ರಾಂತಿ. ಹೀಗೆ ಗುಹಾ ಮಾರ್ಗದ ಕೆಲಸ ಮುಕ್ತಾಯವಾಗುತ್ತಾ ಬಂತು. ವಿದುರನ ಸೇವಕನನ್ನು ಹೊರ ಕಳುಹಿಸಬೇಕಲ್ಲಾ ಈಗ? ಯಾರಿಗೂ ಅನುಮಾನ ಬರಬಾರದು ಎಂಬ ನಾಟಕದಂತೆ ಭೀಮನು ಕೆಲಸದವ ಕೆಲಸ ಸರಿ ಮಾಡಲಿಲ್ಲ ಹಾಗಾಗಿ ಕೋಪಗೊಂಡು ಹೊಡೆಯಲು ಓಡಿಸಿಕೊಂಡು ಹೋಗುವಂತೆ ಅಟ್ಟಾಡಿಸುತ್ತಾ ಆ ಪ್ರದೇಶದಿಂದ ಹೊರ ಕಳುಹಿಸಿದನು. ತುಸು ದೂರ ಓಡಿ ದಾಟಿದ ಮೇಲೆ ಭೀಮ ಹಿಂದೆ ಬಂದನು. ಈ ಪ್ರಕರಣದಲ್ಲಿ ಯಾರಿಗೂ ಸಂದೇಹ ಬರಲಿಲ್ಲ.
ಅದೇ ಸಮಯ ಒಂದು ದಿನ ಪುರೋಚನನಿಗೆ ದುರ್ಯೋಧನನ ಸಂದೇಶ ಬಂತು. ಇನ್ನೆಷ್ಟು ದಿನ ಕಾಯಬೇಕು? ಶೀಘ್ರ ಕಾರ್ಯ ಸಾಧಿಸು ಎಂಬ ಆಜ್ಞೆಯೂ ಆಯಿತು.
ಧರ್ಮರಾಯ ತಾಯಿ ಹಾಗೂ ತಮ್ಮಂದಿರನ್ನು ಗೌಪ್ಯವಾಗಿ ಕರೆದು ಇನ್ನು ನಾವಿಲ್ಲಿ ಇರುವುದು ಸೂಕ್ತವಲ್ಲ. ಹೊರಗಿನ ಚಲನವಲನಗಳನ್ನು ಗಮನಿಸಿದ್ದೆ, ಏನೋ ಗೌಪ್ಯ ತಯಾರಿಗಳು, ಯೋಜನೆಗಳು ರೂಪುಗೊಳ್ಳುತ್ತಿವೆ. ಆದಷ್ಟು ಜಾಗರೂಕರಾಗಿದ್ದು ಮೈಯೆಲ್ಲಾ ಕಣ್ಣಾಗಿ ಕಾಲ ಕಳೆಯಬೇಕು. ಆದಷ್ಟು ಬೇಗ ಸಂಶಯಬಾರದ ರೀತಿ ಇಲ್ಲಿಂದ ಕಣ್ಮರೆಯಾಗಬೇಕು. ದುಷ್ಟ ಬುದ್ದಿಯ ಆ ಪುರೋಚನನಿಗೂ ತಕ್ಕ ಶಿಕ್ಷೆ ನೀಡಬೇಕು ಎಂದು ಸೂಚಿಸಿದನು.
ಕುಂತಿಗೇಕೋ ವ್ರತ ಪೂಜೆ ಮಾಡಿಸಿ ಅನ್ನದಾನ ಮಾಡಿ ಇಲ್ಲಿಂದ ಹೋಗಬೇಕೆಂಬ ವಾಂಛೆಯಾಯಿತು. ಹಾಗೇ ಮುಂದುವರಿದು ಮೂರ್ನಾಲ್ಕು ದಿನ ಅನ್ನ ಸಂತರ್ಪಣೆ ನಡೆಯಿತು. ಬಹುಮಂದಿ ಬಂದು ಉಂಡು ಹೋಗುತ್ತಿದ್ದರು. ಹಾಗೆಯೇ ಬೇಡತಿಯೊಬ್ಬಳೂ ತನ್ನ ಐದಾರು ಬೆಳೆದ ಮಕ್ಕಳ ಜೊತೆ ಉಂಡು, ನಾಳೆಯೂ ಊಟವಿದೆಯೆಂದು ತಿಳಿದು ಅಲ್ಲೇ ವಿರಮಿಸಿದರು.
ಆ ದಿನ ರಾತ್ರಿಯಾಗುತ್ತಿದ್ದಂತೆ ಊಟದ ಹೊತ್ತು ಬೇಡತಿ ಮತ್ತು ಆಕೆಯ ಮಕ್ಕಳೂ ಅಲ್ಲೇ ಇರುವುದನ್ನು ಕಂಡು ಅವರಿಗೂ ರಾತ್ರಿ ಊಟ ಬಡಿಸಿದಳು ಕುಂತಿ. ರಾತ್ರಿಯ ಚಳಿಗೆ ಒಳಗೆ ಮಲಗುವ ವ್ಯವಸ್ಥೆಯೂ ಆಯಿತು. ಅದೇ ರಾತ್ರಿ ಧರ್ಮರಾಯ ನಾವಿನ್ನು ಇಲ್ಲಿಂದ ಹೋಗಲೇ ಬೇಕು. ಇನ್ನು ಇಲ್ಲಿ ಉಳಿದರೆ ಆಪತ್ತು ನಿಶ್ಚಿತ. ಈ ರಾತ್ರಿ ನಾವೇ ಈ ಭವನವನ್ನು ಅಗ್ನಿಗಾಹುತಿಗೊಳಿಸಿ, ಪುರೋಚನ ವಿಶ್ರಾಂತಿ ಪಡೆದಿರುವ ಆಯುಧಗಾರಕ್ಕೂ ಬೆಂಕಿ ಹಚ್ಚಬೇಕು ಎಂಬಂತೆ ಆದೇಶ ನೀಡಿದ. ಹಾಗೆಯೇ ತಮ್ಮಂದಿರಲ್ಲಿ ತಮ್ಮ ತಮ್ಮ ಆಭರಣ ಆಯುಧಗಳನ್ನು ಇಲ್ಲೇ ಬಿಡುವಂತೆಯೂ ಸೂಚಿಸಿದ. ಕಾರಣ ಅಗ್ನಿಗಾಹುತಿಯಾದ ಬಳಿಕ ಇವರ ಅವಶೇಷವಾಗಿ ಆಭರಣ, ಆಯುಧಗಳು ಉಳಿದು, ಇವರು ಸತ್ತು ಸುಡಲ್ಪಟ್ಟಿದ್ದಾರೆಂದು ಸಾಬೀತಾಗುತ್ತದೆ. ಪರಿಣಾಮ ಮುಂದಿನ ಯೋಜನೆ ರೂಪಿಸುವವರೆಗೆ ನಮ್ಮನ್ನು ಯಾರೂ ಹುಡುಕಿಸುವ ಪ್ರಯತ್ನ ಮಾಡಲಾರರು. ವಿದುರನಿಗೆ ನಮ್ಮ ವಿಚಾರ ಹೇಗೂ ಗೊತ್ತಿದೆಯಲ್ಲ.
ತಡರಾತ್ರಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದಾರೆ. ಭೀಮ ಒಂದು ಸುತ್ತು ನೋಡಿಕೊಂಡು ಬಂದ ಎಲ್ಲರೂ ಮಲಗಿದ್ದಾರೆ, ಖಚಿತವಾಯಿತು. ತಕ್ಷಣ ಹೊರಡಲು ಸಿದ್ದರಾಗಲು ತಾಯಿ ಸಹೋದರರಿಗೆ ಹೇಳಿ ಗುಹೆಯ ದ್ವಾರ ಪ್ರವೇಶಿಸಲು ಸೂಚಿಸಿದ. ಹೊರಬಂದು ಆಯುಧಗ್ರಹದ ನಾಲ್ಕೂ ಕಡೆ ಬೆಂಕಿ ಕೊಟ್ಟ. ಇವರಿದ್ದ ವಾರಣಾವತದ ಅರಗಿನ ಅರಮನೆಗೂ ಅಗ್ನಿಸ್ಪರ್ಶವಾಗುತ್ತಿದ್ದಂತೆ ಬಗ್ಗನೆ ಹತ್ತಿತು ಜ್ವಾಲೆ. ನಾಲ್ಕು ಸುತ್ತಲೂ ಪರಪರ ಪಟಾರ್ ಸದ್ದೆಬ್ಬಿಸುತ್ತಾ ಅಗ್ನಿ ಹಬ್ಬತೊಡಗಿತು. ಓಡಿ ಬಂದು ತಾನೂ ಗುಹಾ ಪ್ರವೇಶ ಮಾಡಿದ. ಗುಹೆಯೊಳಗೆ ಜಾರಿಸಿಟ್ಟ ಬಂಡೆಗಳನ್ನು ಮೇಲೇರಿಸಿ ಗುಹಾದ್ವಾರ ಮುಚ್ಚಲ್ಪಟ್ಟಿತು. ಮಣ್ಣು ತುಂಬಿಸಿ ಸಂಪೂರ್ಣ ಮುಚ್ಚಿ ಗುಹಾಮಾರ್ಗವಿದ್ದ ಸುಳಿವು ಸಿಗದಂತೆ ಮಾಡಿದ. ಮುಂದೆ ಸಾಗುತ್ತಿದ್ದ ತಾಯಿ ಸಹೋದರರು ಕತ್ತಲೆ, ಗಾಳಿ ಇರದೆ ಉಸಿರಾಟದ ತೊಂದರೆ ಅನುಭವಿಸುತ್ತಾ ಒದ್ದಾಟದ ಹೆಜ್ಜೆ ಹಾಕುತ್ತಿರುವುದನ್ನು ಕಂಡು. ವಾಯುಪುತ್ರ ಭೀಮ ತಕ್ಷಣ ಅಣ್ಣ ಧರ್ಮಜ, ತಾಯಿ ಕುಂತಿದೇವಿಯನ್ನು ಹೆಗಲಮೇಲೂ, ಅರ್ಜುನ, ನಕುಲ ಸಹದೇವರನ್ನು ಎತ್ತಿ ತೋಳ ಸಂಧಿಗಳಲ್ಲಿ ಹಿಡಿದುಕೊಂಡು ಒಂದೇ ಸವನೆ ಓಡತೊಡಗಿದ. ಗುಹೆಯೊಳಗೆ ಕೆಸರು ಜೌಗು, ಕತ್ತಲೆ, ಹಾವು, ಚೇಳು ಹಲ್ಲಿ, ಕಪ್ಪೆಗಳಿದ್ದರೂ ಭೀಮನ ಗಮನ ಗತಿಗೆ ತಡೆಯಾಗಲಿಲ್ಲ. ಅತಿಬಲಾನ್ವಿತ ಭೀಮ ಓಡಿ ಓಡಿ ಮುಂಜಾವಿಗಿಂತ ಮೊದಲು ಗುಹೆಯಿಂದ ಹೊರಬಂದನು. ನದಿ ತೀರ ಪ್ರದೇಶದಲ್ಲಿ ಮಂದ ಬೆಳಕಿನ ಮಸುಕಿನಲ್ಲಿ ಸುತ್ತ ನೋಡಿದರೆ, ವಿದುರ ಹೇಳಿದಂತೆ ದೋಣಿಯೊಂದು ತೇಲುತ್ತಿದೆ. ಸಹೋದರರನ್ನೂ ತಾಯಿಯನ್ನೂ ದೋಣಿಯಲ್ಲಿ ಇಳಿಸಿದ. ದೋಣಿಯ ಹಗ್ಗ ಬಿಚ್ಚಿ ಹುಟ್ಟನ್ನೆಳೆದು ಭೀಮ ದೋಣಿಯ ಹುಟ್ಟನ್ನೆಳೆಯುತ್ತಾ ಚಲಿಸತೊಡಗಿದ. ಚಲನೆಗೆ ವೇಗ ನೀಡಿ ನೀರಿನ ಸೆಳೆತದ ಜೊತೆ ದಕ್ಷಿಣಾಭಿಮುಖವಾಗಿ ಸಾಗ ಬಿಟ್ಟನು. ಹರಿವಿನ ಜೊತೆ ದೋಣಿಯೂ ಗತಿ ವೃದ್ಧಿಸುತ್ತಾ ಸಾಗ ತೊಡಗಿತು. ಹೀಗೆ ಕ್ರಮಿಸಿ ಗೊಂಡಾರಣ್ಯ ನಿರ್ಜನ ಪ್ರದೇಶ ಬಂದಾಗ ಬದಿಗೆ ಸಾಗಿ ಅರಣ್ಯ ಹೊಕ್ಕರು. ಅವಿಶ್ರಾಂತ ಬಳಲಿಕೆಯ ಕಾರಣ ಸುಸ್ತು ಎಲ್ಲರ ಶರೀರವನ್ನೂ ಬಾಧಿಸುತ್ತಿತ್ತು. ಹಸ್ತಿನಾಪುರದ ಚಂದ್ರವಂಶದ ರಾಣಿ, ಅಭಿಷಿಕ್ತ ಯುವರಾಜ, ರಾಜಕುವರರಾದ ಭೀಮಾರ್ಜುನ ನಕುಲ ಸಹದೇವರು ರಾಶಿ ತರಗೆಲೆಗಳ ಮೇಲೆಯೇ ಬಿದ್ದು ಕೊಂಡರು. ಸುವ್ಯವಸ್ಥಿತ ಹಂಸತೂಲಿಕ ಪಲ್ಲಂಗದಲ್ಲಿ ಪವಡಿಸುವ ಚಂದ್ರವಂಶೀಯರು ಈಗ ಪರಿಸ್ಥಿತಿಯ ಕೈಗೊಂಬೆಯಾಗಿ ಗೊಂಡಾರಣ್ಯದಲ್ಲಿ ತರಗೆಲೆಗಳ ಮೇಲೆ ಸುಖ ನಿದ್ರೆಗೆ ಜಾರಿದ್ದಾರೆ.
ಮುಂದುವರಿಯುವುದು…





















