
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ರೂಲ್ಸ್ ತರಲು ಮುಂದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫೆಬ್ರವರಿ 3ರಂದು ಬನಶಂಕರಿಯ ಡಿಸಿಇಆರ್ ಟಿಯಲ್ಲಿ ಮಕ್ಕಳ ಜೊತೆ ಹಾಗೂ ಶಿಕ್ಷಕರು ಜೊತೆ ಸಂವಾದ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ.
ಕಳೆದ ವರ್ಷ SSLC ಎಕ್ಸಾಂನಲ್ಲಿ ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ವಿವಾದಕ್ಕೀಡಾಗಿದ್ದ ಶಿಕ್ಷಣ ಇಲಾಖೆ, ಈ ವರ್ಷ ಮಾರ್ಕ್ಸ್ ರದ್ದು ಮಾಡಿದೆ. ಕಳೆದ ವರ್ಷ ವೆಬ್‌ಕಾಸ್ಟ್ ಮಾಡುವುದರಿಂದ ಕಡಿಮೆ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಎಂದು ಚರ್ಚೆ ನಡೆಸಿದ್ದು ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಿದೆ. ಪ್ರತಿ ಜಿಲ್ಲೆಯ ಸಿಇಒಗಳು ಈ ಬಾರಿ ನಮಗೆ ಹೆಚ್ಚು ಸಹಕಾರ ಕೊಟ್ಟಿದ್ದಾರೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನ ಸಿದ್ಧ ಮಾಡಿದ್ದೇವೆ ಎಂದು ಹೇಳಿದರು.
ಫಲಿತಾಂಶ ವೃದ್ಧಿಗಾಗಿ ನಾನಾ ಕ್ರಮಗಳನ್ನು ಕೈಗೊಂಡಿದ್ದು ಇದರ ಭಾಗವಾಗಿ ಮಕ್ಕಳಿಗೆ ಬೆಳಗ್ಗೆ ಫೋನ್ ಮಾಡಿ ಎಬ್ಬಿಸಿ ಓದಿಸುವ ಕಾರ್ಯಕ್ರಮ, ವಿಶೇಷ ತರಗತಿಗಳನ್ನ ಮಾಡುವ ಮೂಲಕ ಅಭ್ಯಾಸ ಮಾಡುವ ಕಾರ್ಯಕ್ರಮ, ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು ಮಾಡುವ ಕೆಲಸ ಮಾಡಿದ್ದಾರೆ. ಸಿಇಒಗಳೇ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿ ಪರೀಕ್ಷೆ ಮಾಡಿದ್ದು 2-3 ಶಾಲೆಗಳಿಗೆ ಒಬ್ಬ ಅಧಿಕಾರಿಗಳ ನೇತೃತ್ವಗಳನ್ನ ನೇಮಕ ಮಾಡಿ ಕಲಿಕೆ ಅಭಿವೃದ್ಧಿ ಮಾಡುವ ಕೆಲಸ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಎಸ್ಎಸ್ ಎಲ್ ಸಿ ಪರೀಕ್ಷೆ ವೇಳೆ ಹಿಜಾಬ್ ವಿಚಾರದ ಕುರಿತು ಮಾತನಾಡಿದ ಸಚಿವರು ಈ ವಿಷಯ ಕೋರ್ಟ್‌ನಲ್ಲಿದೆ. ಹೀಗಾಗಿ ಈ ಬಗ್ಗೆ ಮಾತನಾಡುವುದಿಲ್ಲ. ಅನುಮತಿ ಕೊಡುವ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.





















