
ಅಯೋಧ್ಯ: ಜನವರಿ 29ರಂದು ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳಕ್ಕೆ 10 ಕೋಟಿ ಭಕ್ತರು ಆಗಮಿಸಿದ್ದು ಅವರೆಲ್ಲರೂ ಅಯೋಧ್ಯೆಗೂ ಆಗಮಿಸಿ ಬಾಲರಾಮನ ದರ್ಶನ ಪಡೆಯಲು ಇಚ್ಚಿಸಿದ್ದು ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದರಿಂದ ಶ್ರೀ ರಾಮ ಮಂದಿರದ ಆಡಳಿತ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು “ಇನ್ನು 10 ರಿಂದ 20 ದಿನಗಳ ಕಾಲ ಅಯೋಧ್ಯೆಯ ಸ್ಥಳೀಯರು ರಾಮಮಂದಿರಕ್ಕೆ ಬರಬೇಡಿ” ಎಂದು ಮನವಿ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಆಗಮಿಸಿದರೆ ಪರಿಸ್ಥಿತಿ ನಿಯಂತ್ರಣ ಮಾಡುವುದು ಕಷ್ಟವಾಗುವುದರಿಂದ ಚಂಪತ್ ರಾಯ್ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಮನವಿ ಮಾಡಿದ್ದಾರೆ.





















