ಭಾಗ 85
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೮೫ ಮಹಾಭಾರತ
ಇಂತಹ ವಿಶಿಷ್ಟ ಹುಟ್ಟು ಪಡೆದ ಜರಾಸಂಧ ಮಹಾ ವಿಕ್ರಮಿ. ಚಂಡ ಕೌಶಿಕರ ಮಂತ್ರಬಲ ಮತ್ತು ಅನುಗ್ರಹದಿಂದ ಸದಾ ವಿಜಯ ಪ್ರಾಪ್ತಿ, ಛಲ, ಬಲ, ವಿಕ್ರಮ, ಆಯುಧದಿಂದ ಮರಣ ಇಲ್ಲದಿರುವಿಕೆ ಮುಂತಾದ ವಿಶೇಷ ವರೋಪಮ ರಕ್ಷಣೆ ಪ್ರಾಪ್ತಿಸಿಕೊಂಡಿದ್ದ.
ಈ ರೀತಿ ಅಮೋಘ ಬಲಾಢ್ಯನಾದ ಜರಾಸಂಧನ ಮಕ್ಕಳು “ಅಸ್ತಿ ಪ್ರಾಸ್ತಿ”ಯರನ್ನು ಜಗಜಟ್ಟಿ ಮಥುರಾ ಮಹೀಂದ್ರ ಕಂಸನಿಗೆ ಮದುವೆ ಮಾಡಿ ಕೊಟ್ಟಿದ್ದ. ಈಗ ವಿಧವೆಯರಾಗಿ, ಕೇಶ ಮುಂಡನ, ಶ್ವೇತ ವಸನಧಾರಿಗಳಾಗಿ ಬಂದಿರುವುದನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ದಿವ್ಯ ಗದೆಯನ್ನು ಗಿರ ಗಿರನೆ ತಿರುಗಿಸಿ ಸಂಕಲ್ಪ ಮಾಡಿ ಮಥುರೆಯತ್ತ ಎಸೆದನು. ಮಥುರಾ ಪಟ್ಟಣದಿಂದ ಕೆಲ ಯೋಜನ ಅಂತರ ಸಾಗಿ ಅಪ್ಪಳಿಸಿ ಭೀಕರ ಶಬ್ದದೊಂದಿಗೆ ಬಿತ್ತು. ಪರಿಣಾಮ ದೊಡ್ಡದಾದ ಹೊಂಡವೇ ಆಗಿ ಆಕಾಶದೆತ್ತರಕ್ಕೆ ಧೂಳು ಹಬ್ಬಿತು. ಕೃಷ್ಣನಿಗೆ ವಿಷಯ – ಯುದ್ದದ ಸೂಚನೆ ಎಂದು ಅರ್ಥವಾಯಿತು. ಉದ್ದವನನ್ನು ಕರೆದು ಸಮಾಲೋಚನೆ ಮಾಡಿದ. ಬಲರಾಮನ ಒಡಗೂಡಿ, ಆಯ್ದ ಮಿತ ಪ್ರಬಲ ಸೈನ್ಯ ಸೇರಿಸಿ ಮಥುರೆಯ ಹೊರ ಭಾಗದಲ್ಲಿ ಜರಾಸಂಧನ ದಾಳಿ ಎದುರಿಸಲು ಸಿದ್ದರಾಗಿ ನಿಂತರು. ಕೃಷ್ಣ ಬಲರಾಮರಿಗೆ ಒಪ್ಪುವಂತಹ ದಿವ್ಯ ರಥಗಳೂ, ವಿಶಿಷ್ಟಾಯುಧಗಳೂ ದೇವತಾನುಗ್ರಹದಿಂದ ಪ್ರಾಪ್ತವಾದವು.
ಜರಾಸಂಧನೇನು ಸುಮ್ಮನುಳಿಯುವವನೇ? ರಣ ಭಯಂಕರ ಸೈನ್ಯ ಸೇರಿಸಿಕೊಂಡು ಮಥುರೆಯತ್ತ ಹೊರಟನು. ಕೃಷ್ಣ ಬಲರಾಮರು ಮಥುರಾ ಪಟ್ಟಣದ ಹೊರಭಾಗದಲ್ಲೇ ಸನ್ನದ್ಧರಾಗಿದ್ದರು. ಯುಕ್ತಿಯ ಯುದ್ದಕ್ಕೆ ಸನ್ನದ್ಧರಾಗಿದ್ದ ಕೃಷ್ಣ ಬಲರಾಮರು ಜರಾಸಂಧನ ಸೈನ್ಯವನ್ನು ಪಥ ಮಧ್ಯದಲ್ಲೇ ಎದುರಿಸಿದರು. ಮಾರಣ ಹೋಮದಂತೆ ಮಗಧ ಸೈನ್ಯ ಆಹುತಿಯಾಯಿತು. ಇಪ್ಪತ್ತಮೂರು ಅಕ್ಷೋಹಿಣೀ ಸೈನ್ಯ ನಾಶಗೊಂಡಿತು. ಮಗಧಾಧಿಪ ಜರಾಸಂಧ ಅರ್ಧದಿಂದಲೇ ಹಿಂದೆ ಹೋದನು. ಕೆಲ ಕಾಲ ಕಳೆದು ಮತ್ತೆ ಮಥುರೆಗೆ ದಾಳಿ ಮಾಡಿದ. ಅಪರಿಮಿತ ಸೈನ್ಯ ಮತ್ತೆ ಕೃಷ್ಣ ಬಲರಾಮರ ಯುದ್ದತಂತ್ರಕ್ಕೆ ಬಲಿಯಾಯಿತು. ಹೀಗೆ ಹಲವು ಬಾರಿ ದಂಡೆತ್ತಿ ಬಂದಾಗಲೂ ಜರಾಸಂಧ ಮಾತ್ರ ಉಳಿದು ಗೆಲ್ಲುಗಳೆಲ್ಲಾ ಕತ್ತರಿಸಿದ ಮಧ್ಯ ಕಾಂಡವಷ್ಟೇ ಉಳಿದಂತಹ ಮರದಂತೆ ವರಬಲ ರಕ್ಷೆಯಾಗಿದ್ದು, ಸೈನ್ಯ ನಷ್ಟವಾದ ಬಳಿಕ ಹಿಂದೆ ಹೋಗಬೇಕಾಗುತಿತ್ತು. ಈಗ ಹದಿನಾರನೆ ಬಾರಿ ದಂಡೆತ್ತಿ ಬರುತ್ತಿದ್ದಾನೆ. ಭಾರಿ ಬಲಾಢ್ಯರಾದ ಮಹಾಯೋಧರನ್ನೂ, ಅತೀ ದೊಡ್ಡ ಸೈನ್ಯವನ್ನೂ, ತಂತ್ರವನ್ನೂ ಬಲಿದು ಸಿದ್ದನಾದನು. ತನ್ನ ಪರಮಾಪ್ತರಾದ ಅಜೇಯ ವೀರರಾದ “ಹಂಸ – ಢಿಂಭಕ” ಸೋದರ ವೀರರನ್ನೂ ಜೊತೆಯಾಗಿಸಿ ಮಥುರೆಗೆ ದಾಳಿ ಮಾಡಿದ.
ಈ ಬಾರಿಯೂ ನಗರದ ಹೊರಭಾಗದಲ್ಲೇ ಯುದ್ದವಾಯಿತು. ಯಾದವರೂ ಹಿಂದೆಂದಿಗಿಂತಲೂ ಹೆಚ್ಚಿನ ಸೈನ್ಯ ಸನ್ನದ್ದುಗೊಳಿಸಿ ಯುದ್ಧ ಮಾಡಿ, ಕದನ ಕಲಿಗಳಾಗಿ ಹೋರಾಡಿದರೂ ಮಾಗಧನ ಸೈನ್ಯವೇ ಮುಂದೊತ್ತಿ ಬರತೊಡಗಿತು. ಕಾರಣ ಹಂಸ ಡಿಂಭಕರ ಅಸಾಮಾನ್ಯ ಪರಾಕ್ರಮ ಜರಾಸಂಧನ ಶಕ್ತಿಯನ್ನು ಇಮ್ಮಡಿಗೊಳಿಸಿತ್ತು. ಹಂಸ ಡಿಂಭಕರಿಗೆ ಯಾರಿಂದಲೂ ಮರಣ ಬಾರದ, ಯಾವ ಆಯುಧವೂ ಗಾಯ ಮಾಡದ ವರವಿತ್ತು. ತಾವಾಗಿಯೇ ಹತ್ಯೆ ಮಾಡಿಕೊಂಡರೆ ಮಾತ್ರ ಮರಣ. ಹೀಗಿರಲು ಯುದ್ದ ಮಧ್ಯದಲ್ಲಿ ಯಾದವರ ಸೇನೆ ಹರ್ಷೋದ್ಘಾರ ಮಾಡಿತು. ಹಂಸ ಸತ್ತ… ಹಂಸ ಸತ್ತ ಎಂಬ ಘೋಷಣೆ ಒಂದು ಬದಿಯಿಂದ ಕೇಳಿ ಬಂತು… ಇದನ್ನು ಕೇಳಿದ ಡಿಂಭಕನಿಗೆ ಅಣ್ಣನ ಮರಣ ವಾರ್ತೆ ಅಸಹನೀಯ ವೇದನೆ, ನೋವು, ಖಿನ್ನತೆ ಉದ್ಭವಿಸಿ ತಟಸ್ಥನಾದ. ಚಿಂತೆ ಆವರಿಸಿ ಅಣ್ಣನಿಲ್ಲದ ಬದುಕು ಬೇಡವೆಂದು ರಣರಂಗದಿಂದ ಸರಿದು ಯಮುನಾ ನದಿಗೆ ಹಾರಿ ಪ್ರಾಣತ್ಯಾಗ ಮಾಡಿದ. ಇದನ್ನು ನೋಡಿದ ಯಾದವ ಸೈನ್ಯ ಸಂಭ್ರಮ ಹರ್ಷೋದ್ಘಾರ ಮಾಡುತ್ತಾ ಡಿಂಭಕ ಸತ್ತ ಎಂದು ಘೋಷಿಸಿ ಶಂಖನಾದ ಮೊಳಗಿಸಿದರು. ಡಿಂಭಕನನ್ನು ಹುಡುಕಿದರೂ ಕಾಣದ ಹಂಸ, ಸೋದರನಳಿದರೆ ತಾನೇಕೆ ಬದುಕಬೇಕೆಂದು ವಿರಕ್ತನಾಗಿ ತನ್ನ ನಾಲಗೆ ಸೆಳೆದು ಕೈಯಾರೆ ಕತ್ತರಿಸಿಕೊಂಡು ಪ್ರಾಣ ತ್ಯಾಗ ಮಾಡಿದ. ಈ ವೀರರ ಅಂತ್ಯವಾದೊಡನೆ ಮತ್ತೆ ಯಾದವ ಸೇನೆ ಮುಂದೊತ್ತಿ ಬಂತು. ಜರಾಸಂಧ ವಿಕ್ರಮ ಮೆರೆದು ಬಹು ಸಂಖ್ಯೆಯ ಯಾದವರ ನಾಶ ಮಾಡಿದನಾದರೂ ಕೃಷ್ಣ ಬಲರಾಮರು ಮಾಗಧ ಸೈನ್ಯವನ್ನು ಸವರುತ್ತಾ ನಿರ್ನಾಮ ಮಾಡತೊಡಗಿದರು. ಪರಿಣಾಮ ಜರಾಸಂಧ ಹಿಂದಿರುಗಲೆ ಬೇಕಾಯಿತು.
ಹೀಗೆ ಹದಿನಾರು ಬಾರಿ ಆಕ್ರಮಣಮಾಡಿದ ಜರಾಸಂಧನಿಗೆ ಕೃಷ್ಣ ಬಲರಾಮರನ್ನು ಬಂಧಿಸಲು ಅಥವಾ ಕೊಂದು ಕೆಡಹಲು ಆಗದಿದ್ದರೂ ಯಾದವ ಸೈನ್ಯವನ್ನು ಬಹುಪಾಲು ನಾಶಗೊಳಿಸಿದ್ದ. ಯಾದವರ ಬಳಿ ಈಗ ಸೈನ್ಯದ ಕೊರತೆಯೂ ತಲೆದೋರಿತು. ಮತ್ತೆ ಹದಿನೇಳನೆಯ ಬಾರಿ ಜರಾಸಂಧ ದಾಳಿ ಮಾಡಿಯೇ ಮಾಡುತ್ತಾನೆ ಎಂದರಿತು ಪರ್ಯಾಯ ದಾರಿ ಹುಡುಕ ತೊಡಗಿದರು. ಕೃಷ್ಣನ ಸಲಹೆಯಂತೆ ಮಥುರಾ ಪಟ್ಟಣವನ್ನೇ ತೊರೆದು ಹೋಗುವುದೆಂದು ಹೊರಟು ಬರುವಾಗ, ಪಶ್ಚಿಮದ ಗೋಮಂತಕ ಪರ್ವತ ಶ್ರೇಣಿಗಳನ್ನು ಏರಿ ಕೆಳ ನೋಡಿದರೆ ಸಮುದ್ರ ಮಧ್ಯದಲ್ಲಿ ವಿಶಾಲವಾದ ದ್ವೀಪ ಪ್ರದೇಶವೊಂದು ಗೋಚರಿಸಿತು. ಪರ್ವತಗಳಿಂದ ಒಂದೆಡೆ ಆವೃತವಾಗಿ, ಜಲ ಮಧ್ಯದ ಈ ದ್ವೀಪಕ್ಕೆ ಯಾರಿಂದಲೂ ಆಕ್ರಮಿಸಲು ಸುಲಭ ಸಾಧ್ಯವಲ್ಲ ಎಂಬ ನಿರ್ಧಾರ ಮಾಡಿದರು. ಹಾಗೆಯೇ ಯಾದವರು ಮಥುರಾ ಪಟ್ಟಣ ತೊರೆದು ಆ ದ್ವೀಪ ಪ್ರದೇಶ ಸೇರಿದರು.
ಶ್ರೀ ಕೃಷ್ಣನ ಪ್ರಾರ್ಥನೆ, ಸಂಕಲ್ಪದಂತೆ ವಿಶ್ವಕರ್ಮ ಮುಖೇನ ಶ್ರೀ ಕೃಷ್ಣ ಪರಮಾತ್ಮನ ಮನೋಗತ ಆಶಯವಾದ ಸುಂದರ ನಗರ ಗೌಪ್ಯವಾಗಿಯೇ ನಿರ್ಮಾಣವಾಗ ತೊಡಗಿತು. ತ್ರೇತಾ ಯುಗದಲ್ಲಿ ರಾಮನ ಮಗನಾದ ಕುಶನಿಂದ ಪಾಲಿತವಾಗಿದ್ದ ಈ ಪ್ರದೇಶ ಕುಶಸ್ಥಲಿ ಎಂಬ ಹೆಸರು ಪಡೆದಿತ್ತು. ವಿಶ್ವಕರ್ಮನಿಂದ ದ್ವಾರಕೆ ಎಂಬ ಹೆಸರಿನಲ್ಲಿ ಸುಂದರ ನಗರವಾಗಿ ಸೃಷ್ಟಿಯಾಯಿತು. ಯಾದವ ವೀರರು ಜಾಗರೂಕತೆಯಿಂದ ಮಥುರೆಯ ಸರ್ವ ಸಂಪತ್ತನ್ನೂ ದ್ವಾರಕೆಗೆ ಸಾಗಿಸಿದರು. ಈ ಮಧ್ಯೆ ಸೈನ್ಯವಿಲ್ಲದೆ ಮಾಗಧ ಜರಾಸಂಧನಿಗೂ ಆಕ್ರಮಣ ಮಾಡುವಲ್ಲಿ ವಿಳಂಬವಾದ ಕಾರಣ ಕೆಲಸಗಳೆಲ್ಲಾ ನಿರ್ವಿಘ್ನವಾಗಿ ಸಾಗಿತು.
ಇಷ್ಟೆಲ್ಲಾ ಆಗಿ ಹೋದರೂ, ಜರಾಸಂಧ ಸುಮ್ಮನುಳಿಯಲಿಲ್ಲ…
ಮುಂದುವರಿಯುವುದು…





















