ಭಾಗ 84
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೮೪ ಮಹಾಭಾರತ
ಇತ್ತ ಮಥುರೆ ಸಮೃದ್ಧವಾಗಿ ಸುಖ ಶಾಂತಿಯ ಜೀವನಕ್ಕೆ ಪೂರಕವಾಯಿತು. ಕೃಷ್ಣ ಬಲರಾಮರ ಮಹಿಮೆ, ಉದ್ಧವನ ಸಾತ್ವಿಕ ಧರ್ಮ ಬುದ್ದಿಯೂ ಸೇರಿ ಉಗ್ರಸೇನ ಮಹಾರಾಜನ ಸಾಮ್ರಾಜ್ಯ ಯಾದವರ ಗೌರವ, ಮನಶಾಂತಿ, ಗೋ ಸಮೃದ್ಧಿ, ಧಾರ್ಮಿಕ ಕಾರ್ಯಗಳಿಗೂ ಪ್ರೇರಣೆ ಪ್ರೋತ್ಸಾಹ ದೊರೆತು ಜನ ಜೀವನ ಹಿತಕರವಾಗತೊಡಗಿತು.
ಇಂತಹ ಸುಸ್ಥಿತಿಯಲ್ಲೂ ಕೃಷ್ಣನ ಮಹಿಮಾತಿಶಯ, ಸಾಧನೆ ಒಂದು ಹಂತದ ಬಳಿಕ ಕೆಲವರಲ್ಲಿ ಮತ್ಸರ ಕಾರಕವೂ, ದ್ವೇಷ ಭಾವಕ್ಕೆ ಪ್ರೇರಕವೂ ಆಗಿ ಪಂಗಡ – ಗುಂಪಾಗಿ- ದೊಡ್ಡ ಸಮೂಹವಾಗಿ ಬೆಳೆಯತೊಡಗಿತು. ಲೋಕದಲ್ಲಿ ಇಂತಹ ವರ್ತನೆ ಹೊಸದೇನಲ್ಲ. ಎಲ್ಲಾ ಜನರಲ್ಲಿ ಧಾರ್ಮಿಕ ಪ್ರಜ್ಞೆ, ದೇವತ್ವವನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನ, ಮನೋಪ್ರವೃತ್ತಿ ಇರುವುದಿಲ್ಲ. ಕೃಷ್ಣನ ಸಾಧನೆಯನ್ನು ಒಪ್ಪಿಕೊಂಡು ಶ್ರೇಯಸ್ಸನ್ನು ಕೊಂಡಾಡುವ ಗುಣ ಇರದೆ, ಕೀಳು ಸಂಸ್ಕಾರ ಪ್ರದರ್ಶಿಸಲು ಮುಂದಾಗುತ್ತಾರೆ. ಹೀಗೊಂದು ರೀತಿಯ ಬೆಳವಣಿಗೆ ಆಗುತ್ತಿರುವಾಗ ಸಣ್ಣ ಸಣ್ಣ ಕಾರಣಗಳನ್ನು ಮುಂದಿರಿಸಿ, ವೈಭವೀಕರಿಸಿ, ದ್ವೇಷ, ವೈರ ಭಾವ ಬೆಳೆಸುವ ಕೃತ್ಯದಲ್ಲಿ ಕೆಲವರು ತೊಡಗಿಕೊಂಡರು. ಯಾದವ ಕುಟುಂಬದೊಳಗೇ ಕೆಲವರು ರಾಜತಾಂತ್ರಿಕ ನಡೆ ಬಳಸಿಕೊಂಡು, ಕೆಲ ಪ್ರಭಾವಿಗಳು ತಮ್ಮದೇ ವಿರೋಧಿ ಪಾಳಯ ಸೃಷ್ಟಿಸಿಕೊಂಡರು. ಕಂಸನ ಆತ್ಮೀಯ ವರ್ಗವೂ ಇವರ ಜೊತೆ ಸೇರಿಕೊಂಡು, ಕಂಸನ ವಧೆಯನ್ನೂ ವೈರತ್ವಕ್ಕೆ ಕಾರಣವಾಗಿಸಿ ಮಥುರೆಯ ಸಮೃದ್ಧಿಗೆ ಮಾರಕರಾಗುತ್ತಾ, ಕೃಷ್ಣ ವಿರೋಧಿಗಳಾಗಿ ಕಿಡಿಕಾರತೊಡಗಿದರು. ಈ ಬೆಳವಣಿಗೆ ಕೃಷ್ಣನ ಗಮನಕ್ಕೂ ಬಂತು. ಬಲರಾಮ, ಉದ್ಧವರನ್ನು ಕರೆದು ಇಂತಹ ದುರ್ಮಾರ್ಗಿಗಳ ಬಗ್ಗೆ ಸಮಾಲೋಚಿಸಿ ಪರಿಹಾರಕ್ಕಾಗಿ ವಿಹಿತ ಮಾರ್ಗ ಹುಡುಕತೊಡಗಿದರು.
ಹೀಗಿರಲು ಈ ರೀತಿ ವಿರೋಧ ಭಾವ ತಳೆದ ಬಣದ ಪ್ರೇರಣೆಯೋ ಏನೋ ಕಂಸನ ಮಡದಿಯರೂ ತಮ್ಮ ಪತಿಯ ಮರಣಕ್ಕೆ ಕಾರಣನಾದ ಕೃಷ್ಣನ ಮೇಲೆ ಪ್ರತಿಕಾರ ತೀರಿಸುವ ಮನಮಾಡಿದರು. ಮಗಧ ದೇಶದ ಮಹಾಬಲಶಾಲಿ ಜರಾಸಂಧನ ಮಕ್ಕಳಾದ “ಅಸ್ತಿ – ಪ್ರಾಸ್ತಿ” ಕಂಸನ ಮಡದಿಯರು. ತಮ್ಮ ತಂದೆಯ ಬಳಿ ಹೋಗಿ ಕೃಷ್ಣನಿಂದಾಗಿ ಪತಿಯ ಮರಣವಾಯಿತೆಂದೂ, ತಾವು ಅಕಾಲ ವಿಧವೆಯರಾದೆವೆಂದೂ ಹೇಳಿ ಅಳಲು ತೋಡಿಕೊಂಡರು. ಮಕ್ಕಳಿಗೆ ತೊಂದರೆಯಾದಾಗ ತಂದೆ ತಾಯಿ ಕ್ರುದ್ದರಾಗುವುದು ಸಹಜ ತಾನೆ! ಈ ಜರಾಸಂಧನೂ ಕೃಷ್ಣ ಬಲರಾಮರನ್ನು ಈಗಲೆ ವಧಿಸಿ ಬಿಡುವೆ ಎಂಬ ರೀತಿಯಲ್ಲಿ ತೊಡಗಿ ಯುದ್ದಕ್ಕೆ ಸನ್ನದ್ದನಾದ.
ಜರಾಸಂಧನೇನು ಸಾಮಾನ್ಯನೇ? “ಬ್ರಹದೃತ”ನೆಂಬ ಮಹಾ ವಿಕ್ರಮಿ, ಧರ್ಮಿಷ್ಟ, ಸದ್ಭಕ್ತ ರಾಜನ ಮಗನಾತ. ಒಮ್ಮೆ ಆತನ ರಾಜ್ಯದ ಗಿರಿವ್ರಜ ಪರ್ವತ ಶ್ರೇಣಿಯಲ್ಲಿ ನರ ಭಕ್ಷಕ ರಾಕ್ಷಸನೋರ್ವ ಬೃಹದಾಕಾರದ ಬಲಿಷ್ಠ ಎತ್ತಿನ ರೂಪದಲ್ಲಿ ತಿರುಗಾಡುತ್ತಿರುವ ವಿಚಾರ ತಿಳಿದು, ಹೋರಾಡಿ ಸಂಹರಿಸಿ ಪ್ರಜೆಗಳನ್ನು ರಕ್ಷಿಸಿದ. ಹೀಗೆ ಸಂಹರಿಸಲ್ಪಟ್ಟ ರಾಕ್ಷಸನ ಚರ್ಮದಿಂದ ಮೂರು ರಣಭೇರಿಗಳನ್ನು ಮಾಡಿಸಿದ. ಭಕ್ತ ವತ್ಸಲ ಮಹಾದೇವ ಪರಮೇಶ್ವರನನ್ನು ತಪದ ಮೂಲಕ ಪ್ರಸನ್ನೀಕರಿಸಿ ವರಾನುಗ್ರಹ ಪಡೆದು ಈ ಮೂರು ಭೇರಿಗಳಿಗೆ ವಿಶೇಷ ಶಕ್ತಿ ಪ್ರಧಾನಗೊಳಿಸಿ ಕೊಂಡಿದ್ದನು. ಅದರಂತೆ ಮೊದಲನೆಯದು “ಭಯಭೇರಿ” ಯಾಯಿತು. ಯಾರಾದರೂ ಶತ್ರುಗಳು ಆಯುಧಧಾರಣೆ ಮಾಡಿ ರಾಜ್ಯ ಪ್ರವೇಶಿಸಿದರೆ ಈ ಭೇರಿ ಬಾರಿಸಲ್ಪಟ್ಟು ಸೂಚನೆ ನೀಡುತ್ತದೆ. ಎರಡನೆಯದು “ರಣಭೇರಿ” – ಇದನ್ನು ಕೂಡಲೇ ರಾಜಭಟರು ಬಾರಿಸಬೇಕು ಆಗ ರಾಜನಿಗೆ ಯುದ್ದ ಸನ್ನದ್ದನಾಗಬೇಕುನ್ನುವ ಸಂದೇಶ. ಮೂರನೆಯದು “ಜಯಭೇರಿ” – ಇದನ್ನು ರಾಜನೇ ಬಾರಿಸಿ ಯುದ್ದಕ್ಕೆ ಹೋಗುವುದು. ಯುದ್ದಕ್ಕೆ ಮೊದಲೇ ಜಯಭೇರಿ ಬಾರಿಸಿದ ಪರಿಣಾಮ ಶಿವಾನುಗ್ರಹದಂತೆ ಜಯವೇ ಆಗಬೇಕು. ಇಂತಹ ವರಬಲಾನ್ವಿತ ಭೇರಿಗಳಿಗೆ ನಿತ್ಯ ಪೂಜೆ ನಡೆಯುತ್ತಿತ್ತು. ಹೀಗೆ ಬ್ರಹದೃತ ಅಜೇಯನಾಗಿದ್ದ.
ಹೀಗಿರಲು ರಾಜಾ ಬ್ರಹದೃತ ಕಾಶಿರಾಜನ ಇಬ್ಬರು ರಾಜಕುಮಾರಿಯರನ್ನು ವಿವಾಹವಾದ. ಪೂಜೆ, ವೃತ, ಯಾಗ ಏನು ಮಾಡಿದರೂ ಮಕ್ಕಳಾಗಲಿಲ್ಲ. ಬೇಸತ್ತು ರಾಜವತನ್ನ ಅಧಿಕಾರವನ್ನು ಮಂತ್ರಿಗಳಿಗೆ ಒಪ್ಪಿಸಿ ತನ್ನ ಇಬ್ಬರು ಪತ್ನಿಯರೊಂದಿಗೆ ಕಾಡು ಸೇರಿದ. ಅಲ್ಲಿ ಮಹಾತಪಸ್ವಿ ಚಂಡ ಕೌಶಿಕ ಮುನಿಗಳ ದರ್ಶನ ಭಾಗ್ಯ ಸಿಕ್ಕಿತು. ತನ್ನ ಮನದ ವೇದನೆ ಅವರಲ್ಲಿ ಹೇಳಿಕೊಂಡನು. ಮುನಿ ಚಂಡ ಕೌಶಿಕರಿಗೆ ನೆರಳಾಗಿದ್ದ ಮಾವಿನ ಮರದಿಂದ ಮಾಗಿದ ಮಾವಿನ ಹಣ್ಣೊಂದು ತೊಟ್ಟು ಕಳಚಿಕೊಂಡು ಅವರ ತೊಡೆಯ ಮೇಲೆ ಬಿತ್ತು. ಆ ಕೂಡಲೇ ಬಿದ್ದ ಹಣ್ಣನ್ನೆ ಎತ್ತಿ ಮಂತ್ರಿಸಿ ಪ್ರಸಾದವಾಗಿ ರಾಜಾ ಬ್ರಹದೃತನಿಗೆ ನೀಡಿದರು. ಸಂತೋಷದಿಂದ ರಾಜ ಮರಳಿ ಅರಮನೆಗೆ ಬರುತ್ತಾನೆ.
ಕಾಶೀರಾಜನ ಮಕ್ಕಳನ್ನು ಮದುವೆಯಾಗುವ ಸಂದರ್ಭ ಬೃಹದೃತ ತನ್ನ ಮಾವನಿಗೆ ಇಬ್ಬರನ್ನೂ ಸಮಾನ ಭಾವದಿಂದ ಸಲಹುವೆ ಎಂದು ವಾಗ್ದಾನ ನೀಡಿದ್ದ. ಅಂತೆಯೇ ಮಂತ್ರಿಸಿ ಸಂತಾನ ಪ್ರಾಪ್ತಿಗಾಗಿ ಚಂಡಕೌಶಿಕರು ನೀಡಿದ ಹಣ್ಣನ್ನೂ ಸಮಭಾಗ ಕತ್ತರಿಸಿ ಪತ್ನಿಯರಿಗೆ ನೀಡಿದ. ಪರಿಣಾಮ ಇಬ್ಬರೂ ಗರ್ಭಧಾರಣೆ ಮಾಡಿದರು. ನವ ಮಾಸ ತುಂಬಿ ಪ್ರಸವ ಕಾಲ ಸನ್ನಿಹಿತವಾಯಿತು. ಒಂದು ದಿನ ಇಬ್ಬರಿಗೂ ಪ್ರಸವವಾಯಿತು. ಆದರೆ ಎರಡೂ ಅರ್ಧ ಶರೀರಗಳು ಒಂದು ಕೈ, ಕಾಲು, ಕಣ್ಣು ಕಿವಿ ಹೀಗೆ ಎಲ್ಲವೂ ವಿಭಾಗಿಸಲ್ಪಟ್ಟ ಮಾಂಸದ ತುಂಡಿನಂತೆ ಅರ್ಧರ್ಧ ಶರೀರ ಹುಟ್ಟಿ ಬಂದುದನ್ನು ನೋಡಿ ಮಹಾರಾಣಿಯರು ನಿಷ್ಪ್ರಯೋಗ ಎಂದು ತೀರ್ಮಾನಿಸಿದರು
ಹಾಗೆಯೇ ಎರಡೂ ಅರ್ಧರ್ಧ ಶರೀರಗಳನ್ನು ಕಾಡಿನಲ್ಲಿ ಎಸೆದು ಬರುವಂತೆ ಸಖಿಯರಿಗೆ ಆಜ್ಞಾಪಿಸಿದರು. ಅಂತೆಯೇ ಅರ್ಧ ಶರೀರದದ ರಕ್ತ ಕಾರುವ ಮಾಂಸದ ತುಂಡುಗಳನ್ನು ಎಸೆದು ಬಂದರು.
ಅದೇ ಕಾಡಿನಲ್ಲಿ ಪಟ್ಟಣದ ರಕ್ಷಣೆ ಮಾಡುತ್ತಿದ್ದ “ಜರೆ” ಎಂಬ ರಾಕ್ಷಸಿ ವಿಹರಿಸುತ್ತಿದ್ದವಳು ಈ ಮಾಂಸದ ಮುದ್ದೆ ಗಳನ್ನು ಎತ್ತಿ ಹಿಡಿದಾಗ ಅದು ಮಗುವಿನ ದೇಹದ ಎರಡು ಭಾಗಗಳು. ಸಮ್ಮೋಹಗೊಳಿಸಿ ತನ್ನ ದಿವ್ಯ ಶಕ್ತಿಯಿಂದ ಜೋಡಿಸಿ, ಅದರ ಬಾಯಿಗೆ ತನ್ನ ಉಸಿರನ್ನು ಊದಿ ಜೀವ ನೀಡಿದಳು. ಆಗ ಜೀವ ತಳೆದು ಅಳ ತೊಡಗಿತು. ಮಗು ಕಾಡಿನಲ್ಲಿ ಅಳುತ್ತಿರುವ ಸುದ್ದಿ ತಿಳಿದ ರಾಜ ತಕ್ಷಣ ಬಂದು ನೋಡಿದರೆ ಮಗು ರಾಕ್ಷಸಿಯ ಕೈಯಲ್ಲಿದೆ. ಜರೆ ನಡೆದ ವೃತ್ತಾಂತ ತಿಳಿಸಿದಾಗ ರಾಜನಿಗೆ ಪೂರ್ತಿ ಸಂಗತಿ ಅರ್ಥವಾಯಿತು. ರಾಣಿಯರಿಗೆ ಮಂತ್ರಫಲವನ್ನು ಎರಡು ಭಾಗವಾಗಿ ಕತ್ತರಿಸಿ ನೀಡಿದ ಪರಿಣಾಮ ಹೀಗಾಗಿದೆ. ಆದರೂ ದಿವ್ಯ ಅನುಗ್ರಹ ಮಗುವಾದ ಕಾರಣ “ಜರಾಸಂಧ” ನೆಂಬ ನಾಮಧೇಯವಿತ್ತರು.
ಮುಂದುವರಿಯುವುದು…





















