28.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 83

ಭರತೇಶ್ ಶೆಟ್ಟಿ ,ಎಕ್ಕಾರ್

ಈಗ ಕೃಷ್ಣ ಕಾಣಲು ಹೋಗುತ್ತಿರುವ ತ್ರಿವಕ್ರೆ ಕುಬ್ಜೆ ವೇಶ್ಯೆಯಾಗಿದ್ದವಳು – ವೃತ್ತಿಯಿಂದಲ್ಲ, ತಾನು ಹುಟ್ಟಿದ ಕುಲದಿಂದ. ಆಕೆ ತನ್ನ ಕುಲವೃತ್ತಿಯಲ್ಲಿ ಮುಂದಾಗದೇ ಉಳಿಯುವಂತಾಗಲು ಕಾರಣವಾದದ್ದು ಆಕೆಯ ಶರೀರದ ಕುರೂಪ, ಅಂಗಗಳ ವಕ್ರತೆ. ಪರಮ ಭಕ್ತೆಯಾಗಿ ಸದಾ ಭಗವತ್ ನಾಮ ಸ್ಮರಣೆಯಲ್ಲೇ ನಿರತಳಾಗಿ ಬುದ್ಧಿ ಬೆಳೆದ ದಿನದಿಂದ ಅನ್ಯ ಕೆಲಸ ಮಾಡಲಾಗದೆ, ಅನಿವಾರ್ಯವಾಗಿ ತನಗೊದಗಿದ ನಿತ್ಯ ಬಿಡುವಿನ ವೇಳೆಯಲ್ಲಿ ದೇವರ ನಾಮ ಸಂಕೀರ್ತನೆ, ಧ್ಯಾನ ಮಾಡುತ್ತಾ ಕಾಲ ಕಳೆಯುವುದು. ದೇವರ ಪೂಜೆ ಕಣ್ತುಂಬಿಸಿ ಪ್ರಸಾದ ಸೇವಿಸಿ ಬದುಕುತ್ತಿದ್ದ ಪರ್ಯಾಯ ರೂಪದ ತಪಸ್ವಿ ಎನ್ನಬಹುದು. ಇಂತಹ ಕುಬ್ಜೆ ತ್ರಿವಕ್ರೆ ಶ್ರೀ ಕೃಷ್ಣಾನುಗ್ರಹದಿಂದ ತನ್ನ ಶಾರೀರಿಕ ವಕ್ರತೆ ಕಳೆದು ಚೆಲ್ವಿಕೆಯಾಗಿದ್ದಾಳೆ. ಬಳಿಕ ಆಕೆಯ ಅಪೇಕ್ಷೆಗೆ ಕೃಷ್ಣನಿತ್ತ ವಾಗ್ದಾನದಂತೆ ತನ್ನ ಮನೆಗೆ ಬಂದೇ ಬರುತ್ತಾನೆ ಎಂಬ ವಿಶ್ವಾಸ ಹೊತ್ತು ತನ್ನನ್ನುದ್ದರಿಸಿದ ಕೃಷ್ಣನಿಗೆ ತನ್ನ ತನು ಮನ ಅರ್ಪಿಸಬೇಕೆಂದು ಕಾತರದಿಂದ ಕಾಯುತ್ತಿದ್ದಳು.

ಶ್ರೀ ಕೃಷ್ಣ ಬರುವುದಾಗಿ ಹೇಳಿ ಕಳುಹಿಸಿದ ಸುದ್ದಿ ಕೇಳಿ ಮನೆಯಲ್ಲೆಲ್ಲಾ ಓಡಾಟ. ಸ್ವಚ್ಚ ಮಾಡುವುದು, ಅಲಂಕರಿಸುವುದು, ರಂಗೋಲಿ ಹಾಕುವುದು, ಪಾತ್ರೆಗಳನ್ನು ತಿಕ್ಕಿ ತಿಕ್ಕಿ ತೊಳೆದು ಸ್ವಚ್ಚ ಮಾಡುವುದು, ಮತ್ತೆ ಪುನಃ ತೊಳೆಯುವುದು. ಗುಡಿಸುವುದು, ಒರೆಸುವುದು ಹೀಗೆ ಎಷ್ಟು ಏನು ಮಾಡಿದರೂ ತೃಪ್ತಿಯಿಲ್ಲ ಕುಬ್ಜೆಯಾಗಿದ್ದ ತ್ರಿವಕ್ರೆಗೆ. ತನ್ನ ಮನೆಗಲ್ಲ, ಮನದೊಳಗೆ ಕೃಷ್ಣ ಬರುತ್ತಾನೆ, ನನ್ನ ಆಸೆ ಮನ್ನಿಸಿ ನನ್ನನ್ನು ಸೇರುತ್ತಾನೆ ಹೀಗೆ ಕಲ್ಪಿಸುತ್ತಾ ಬಹುಭಾರಿ ಸ್ನಾನಾದಿ ಶೌಚ ಕ್ರಿಯೆಗಳನ್ನೂ ಬಹು ಬಾರಿ ಮಾಡುತ್ತಾ ಶುಭ್ರ ವಸನ ತೊಟ್ಟು, ಕೃಷ್ಣನಿಗೆ ಆಸೀನನಾಗಲು ಪೀಠ – ಶುದ್ದ ವಸ್ತ್ರದ ಹೊದಿಕೆ, ಮಲಗಲು ಮಂಚ, ಹಾಸು ಬಟ್ಟೆ ಹೀಗೆ ಏನೇನೋ ಮಾಡುತ್ತಾ, ಕಲ್ಪಿಸುತ್ತಾ ಇದ್ದಳು. “ಕೃಷ್ಣಾ ಕೃಷ್ಣಾ… ಎಂದು ಕಾಮಪೂರಿತಳಾಗಿ, ಅನಿಯಂತ್ರಿತಳಾಗಿ ಉದ್ರೇಕಗೊಳ್ಳುತ್ತಾ, ಸಹನೆ ಮೀರುತ್ತಾ, ಬಹುವಿಧ ಯೋಚನೆ ಮಾಡುತ್ತಾ ಕಾಯುತ್ತಿದ್ದಳು. ಕಾಮ ಎನ್ನುವುದು ಬಯಕೆ. ಇಲ್ಲಿ ಅದು ಸರ್ವ ಸಮರ್ಪಣಾ ಭಾವ.

ಶ್ರೀಕೃಷ್ಣ ಮುಸ್ಸಂಜೆಯ ಹೊತ್ತಿಗೆ ಉದ್ಧವನೊಂದಿಗೆ ಜೊತೆಯಾಗಿ ಕುಬ್ಜೆಯ ಮನೆಯಂಗಳಕ್ಕೆ ಬಂದು ಮುಟ್ಟಿದನು. ಆಕೆಗೆ ಶ್ರೀಕೃಷ್ಣನನ್ನು ಕಂಡೊಡನೆ ಅತ್ಯುತ್ಸಾಹ. ಓಡಿ ಬಂದು ಪಾದ ತೊಳೆದು, ಕೈ ಹಿಡಿದು ಒಳ ಕರೆತಂದಳು. ಪೀಠದಲ್ಲಿ ಕುಳಿತುಕೊಳ್ಳಿಸಿದಳು. ಎದ್ದು ನಿಂತಾಗ ಜೊತೆಗೆ ಬಂದಿದ್ದ ಉದ್ದವನನ್ನು ನೋಡಿ, ಇವನ್ಯಾಕೆ ಬಂದ ಈ ಹೊತ್ತು ಎಂಬ ಭಾವ ಅಸಹನೆಯಾಗಿ ಮುಖದಲ್ಲಿ ಪ್ರಕಟಗೊಂಡಿತು. ಆದರೂ ಆತನಿಗೊಂದು ಆಸನ ನೀಡಿ ಆಸೀನನಾಗಲು ಹೇಳಿದಳು. ಉದ್ದವ ಆಸನದತ್ತ ನೋಡಿ, ಕೃಷ್ಣನ ಪೀಠದ ಬಳಿ ಬಂದು ಕಾಲಬುಡದಲ್ಲಿ ನೆಲದಲ್ಲೇ ಆಸೀನನಾದ. ಕುಬ್ಜೆ ಮನೆಯೊಳಗೆ ಹೋದಳು. ಹೊರ ಬಂದಳು.ಕೃಷ್ಣನೊಮ್ಮೆ ನೋಡಿದಳು – ತಲೆ ತಗ್ಗಿಸಿ ನೆಲ ನೋಟಕಳಾದಳು. ಮತ್ತೆ ತಲೆಯೆತ್ತಿ ಕಣ್ಣಲ್ಲೇ ಕೃಷ್ಣನನ್ನು ಕಣ್ಣಲ್ಲೇ ಹೀರಿ ಬಿಡುವಂತೆ ನೋಡ ತೊಡಗಿದಳು. ನೋಡುತ್ತಾ ಇರಲಾಗದ ಸ್ತ್ರೀ ಸಹಜ ನಾಚಿಗೆ, ಲಜ್ಜೆ ಆವರಿಸಿ ಒಳ ಮನೆ ಸೇರಿದಳು. ಹೀಗೆ ಕಾಮ ಪ್ರಮತ್ತಳಾಗಿ, ಇಂದ್ರಿಯ ಕಾಮನೆಗಳನ್ನು ತಡೆಯಲೂ ಆಗದೆ, ಉದ್ದವನ ಉಪಸ್ಥಿತಿಯ ಬಗ್ಗೆ ಅಸಹನೆಯನ್ನು ತಳೆಯುತ್ತಾ ಒದ್ದಾಟ, ಕೂಡಲೇ ಮುದ್ದಾಟದ ದ್ವಂದ್ವ ಭಾವ ಪ್ರಕಟಿಸುತ್ತಿದ್ದಳು. ಕುಳಿತಿರಲೂ ಆಗದೆ, ನಿಂತಿರಲೂ ಆಗದೆ ಕಾಮ ವಿಕಾರಗಳು ಅಂಗಾಂಗಗಳಲ್ಲಿ ಲಾಸ್ಯವಾಡ ತೊಡಗಿತ್ತು. ಇಲ್ಲೊಂದು ಗಹನವಾದ ವ್ಯತ್ಯಾಸ ಮೊದಲು ದೇಹದಲ್ಲಿ ವಕ್ರತೆ ಇದ್ದರೂ ಮನಸ್ಸು ಮಲಿನವಾಗಿರಲಿಲ್ಲ. ಪರಿಣಾಮ ಸಕಾಲದಲ್ಲಿ ದೇವರ ದಯೆಯಾಗಿತ್ತು.

ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀಕೃಷ್ಣ ಉದ್ಧವನತ್ತ ನೋಡಿ ಸನ್ನೆ ಮಾಡಿದ. ಸೂಚನೆ ಅರ್ಥೈಸಿಕೊಂಡ ಉದ್ಧವ ಕುಬ್ಜೆಯನ್ನು ಕರೆದು ಕುಳಿತು ಕೊಳ್ಳುವಂತೆ ಹೇಳಿದ. ಕೃಷ್ಣ ನ ಬಳಿ ಬಂದು ಕುಳಿತು ಪಾದಗಳನ್ನು ಕೈಗಳಲ್ಲಿ ಹಿಡಿದು ಕಣ್ಣಿಗೊತ್ತುತ್ತಾ, ಲಜ್ಜೆ ತೊರೆದು ಮೈ ಮನಗಳಿಗೂ ಒತ್ತುತ್ತಾ.. ತನ್ನ ಮನದ ಭಾವ ಹೇಳಿಯೇ ಬಿಡುವೆ ಎಂದು ನಿರ್ಧರಿಸಿ, “ಪ್ರಭೋ…” ಎಂದು ಕರೆದಾಗ.. ಉದ್ಧವ ತಡೆದು ಕುಬ್ಜೆಯನ್ನುದ್ದೇಶಿಸಿ ಮಾತನಾಡತೊಡಗಿದ.

“ಅಮ್ಮಾ! ನಿನ್ನ ಮನಸಿನ ಆಶೆ ಅರ್ಥವಾಗಿದೆ. ಭಗವಂತನ ಸೂಚನೆಯಂತೆ ನಿನಗೆ ಬುದ್ಧಿಯ ಮಾತನ್ನು ಹೇಳುತ್ತೇನೆ. ಚಿತ್ತವಿಟ್ಟು ಕೇಳಬೇಕು. ನಿನ್ನ ಕಾಮನೆಯಂತೆ ಶ್ರೀ ಕೃಷ್ಣ ನಿನ್ನ ದೈಹಿಕ ತೃಷೆಯನ್ನು ತೀರಿಸಲು ಬಂದವನೆಂದು ಬಗೆದೆಯಾ? ಯಾವನನ್ನು ಕಾಣಲು ತಪಸ್ವಿಗಳು ಸುದೀರ್ಘ ತಪಸ್ಸನ್ನಾಚರಿಸುತ್ತಿದ್ದಾರೋ, ಯಾವನ ಪಾದ ಮೂಲದಲ್ಲಿ ಐಕ್ಯರಾಗಲು ಮಹರ್ಷಿಗಳು ಹಂಬಲಿಸುತ್ತಿದ್ದಾರೋ, ಅಂತಹ ಮಹಾನುಭಾವನಿಂದ ನೀನು ಶರೀರ ಸುಖ ಅಪೇಕ್ಷಿಸುತ್ತಿರುವೆ. ಕಲ್ಪತರುವಿನ ಬುಡದಲ್ಲಿ ಕುಳಿತು ಕ್ಷಣಿಕ ಸುಖ ಬಯಸುವ ನಿನ್ನ ಬುದ್ದಿಗೆ ಏನನ್ನಬೇಕು? ನಶ್ವರವಾದ ಈ ಶರೀರ ಸುಭದ್ರವಾದುದೇ? ನಷ್ಟವಾಗಲಿರುವ ತಾತ್ಕಾಲಿಕ ಆಶ್ರಯವಲ್ಲವೇ? ರಕ್ತ ಮಾಂಸದ ಪಿಂಡವಾಗಿ ಗರ್ಭದಲ್ಲಿ ಉತ್ಪನ್ನವಾಗಿ ಹುಟ್ಟಿ, ಬೆಳೆಯುತ್ತಾ ಪ್ರಾಪಂಚಿಕ ಸುಖ ಭೋಗ, ಕಷ್ಟ ಕಾರ್ಪಣ್ಯ, ಯಾತನೆ ಅನುಭವಿಸಿ ಸಾವಿನಲ್ಲಿ ಅಂತ್ಯವಾಗುವ ಜೀವನ ಮಾಧ್ಯಮವೇ ಈ ಶರೀರ. ಯೌವನದಲ್ಲಿ ಸಂತಸ ಪ್ರಾಪ್ತಿಗೆ ಮಾಡಬಾರದ ಕರ್ಮಗಳನ್ನು ಮಾಡಿ, ವೃದ್ದಾಪ್ಯದಲ್ಲಿ ರೋಗಕ್ಕೆ ತುತ್ತಾಗಿ ಕಷ್ಟ ಸಹಿಸಿ ಸತ್ತು ನಷ್ಟವಾಗುತ್ತದೆ ಈ ಶರೀರ. ಆತ್ಮ ನರಕದ ಪಾಲಾಗುವುದಿಲ್ಲವೇ? ಇದು ಸಾಮಾನ್ಯ ಮನುಷ್ಯರ ಜೀವನಚಕ್ರದ ಪ್ರಾರಬ್ದ. ಯೌವನದಲ್ಲಿ ಶರೀರ ಸೌಂದರ್ಯ, ಲಾವಣ್ಯ ಬೀರಬಹುದು. ಎರಡು ದಿನ ಸ್ನಾನ, ಶೌಚಾದಿ ನಿರ್ಮಲ ಮಾಡಲಾಗದಿದ್ದರೆ -ಮಲ ಮೂತ್ರ, ರಕ್ತ ಮಾಂಸದ ಗೂಡಿನ ತೊಗಲು ಹೊದಿಕೆಯ ಶರೀರ ದುರ್ನಾತ ಬೀರುತ್ತದೆ. ಆಗ ಬಯಸುವವರೂ ದೂರ ನಿಲ್ಲುವಂತಾಗುತ್ತದೆ. ಇದಕ್ಕಿಂತ ಅಸಹ್ಯವಾದದ್ದು ಬೇರೇನಿದೆ? ಇಂತಹ ದುರ್ಗತಿ ಅಂತರ್ಯದಲ್ಲಿ ಹುದುಗಿಸಿಟ್ಟಿರುವ ದೇಹದ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ, ಶಾಶ್ವತ ಸದ್ಗತಿಯನ್ನು ಮರೆತು ವ್ಯವಹರಿಸುವುದು ಭ್ರಾಂತಿಯಲ್ಲವೇ? ಈ ಸ್ಥಿತಿಯನ್ನೇ ಅಜ್ಞಾನ ಎನ್ನುವುದು. ನಿನ್ನ ನಿಜ ಆಶೆ ಏನು? ಕ್ಷಣಿಕ ಸುಖವೇ? ಅದಕ್ಕಾಗಿ ಶ್ರೀ ಕೃಷ್ಣನನ್ನು ಬಯಸಿದೆಯಾ? ಹಾಗೆ ಬಯಸಿದರೆ ಕೃಷ್ಣ ಸಿಗುತ್ತಾನೆ ಎಂದು ತಿಳಿದಿರುವೆಯಾ? ಮೂರ್ಖಳೆಂದೆಣಿಸಲಾರೆಯಾ ನೀನು? ಆನಂದ ಸ್ವರೂಪಿ, ಸಕಲ ಕಲಾತ್ಮಕನಾದ ಶ್ರೀ ಕೃಷ್ಣನ ಅನುಗ್ರಹದಿಂದ ನಿನ್ನ ಶರೀರದ ವಿಕಾರತೆ ಸರಿಹೋಗಿ ಬಾಹ್ಯ ಸೌಂದರ್ಯ ಪ್ರಾಪ್ತವಾಯಿತು. ಇದನ್ನು ಅನುಭವಿಸಿದ ಬಳಿಕವೂ ಮಹಿಮಾ ವಿಶೇಷ ಹೊಂದಿರುವ ಪರಮಾತ್ಮನ ಬಗೆಯಲ್ಲಿ ನಿನ್ನ ಮನಸ್ಸಿನ ವಿಕಾರತೆ ದೂರವಾಗದೆ ಉಳಿಯಿತೇ? ನಿಜವಾಗಿಯೂ ನಿನ್ನ ಸ್ಥಿತಿ ವರ್ತನೆ ಕಂಡು ನನಗೆ ದುಃಖವಾಗುತ್ತಿದೆ. ಏನು ಮಾಡಲಾದೀತು ಹೇಳು, ಸೂರ್ಯೋದಯವಾಗಿ ಬೆಳಕು ಹರಿದರೂ, ಮುಸುಕು ಹಾಕಿ ಕತ್ತಲೆ ಮಾಡಿಕೊಂಡು ಮಲಗುವ ತಾಮಸಿಗಳಿಗೆ ಅರ್ಥ ಮಾಡಿಸುವುದು ಅಸಾಧ್ಯ. ನಿನಗೆ ಸವಿವರವಾಗಿ ವಿವರಿಸಿದೆ, ಇನ್ನಾದರೂ ಅರಿತು ಜಾಗೃತಳಾಗು. ಜಗತ್ತನ್ನೇ ಬೆಳಗುವ ಜಗಜ್ಯೋತಿಯ ಬೆಳಕಿನಲ್ಲಿ ನಿನ್ನ ಮನದ ಕತ್ತಲೆಯನ್ನು ನಿವಾರಿಸು. ಬೆಳಗುತ್ತಿರುವ ದಿವ್ಯ ಜ್ಯೋತಿ ಸ್ವರೂಪನ ಬೆಳಕನ್ನು ಆಧರಿಸಿ – ಪ್ರತಿಫಲಿಸಿ ನೀನೂ ಬೆಳಕು ನೀಡುವಂತವಳಾಗು.” ಎಂದು ಉದ್ದವ ನೀತಿಯ ಬೋಧನೆ ಮಾಡಿದ.

ಕೇಳುತ್ತಾ ಕೇಳುತ್ತಾ ಮನಸ್ಸು ನಿರ್ವಿಕಾರವಾಗಿ ಜ್ಞಾನೋದಯವಾಯಿತು. ಮನ ಪರಿವರ್ತನೆಗೊಂಡು ಕುಬ್ಜೆಯಾಗಿದ್ದ ತ್ರಿವಕ್ರೆ, ಕೃಷ್ಣನ ಅಡಿದಾವರಗಳಿಗೆ ವಂದಿಸಿ ಶ್ರೀಹರಿಯನ್ನು ಕಣ್ಣಾರೆ, ಮನದಣಿಯೆ ತುಂಬಿಕೊಂಡು ಭಕ್ತಿಯಿಂದ ನಮಿಸಿದಳು. ದೇವಾ ನನ್ನ ಸರ್ವಾಪರಾಧವನ್ನೂ ಮನ್ನಿಸಿ ಉದ್ದರಿಸಬೇಕೆಂದು ಬೇಡಿದಳು. ಕೃಷ್ಣ ಪರಮಾತ್ಮ ಆಕೆಯ ಭಕ್ತಿಗೆ ಮೆಚ್ಚಿ ನಂದ ಗೋಕುಲದ ಬೃಂದಾವನ ಸೇರಲು ಹೇಳಿದ. ಅಲ್ಲಿಗೆ ಬರುವ ಉದ್ಧವನಿಂದ ಸುದೀರ್ಘ ನೀತಿ ಬೋಧನೆ ಪಡೆದು ತಪಸ್ಸಾನಾಚರಿಸಿ ಮುಕ್ತಿ ಪಡೆಯಲು ಮಾರ್ಗದರ್ಶನ ನೀಡಿದ. ಕುಬ್ಜೆ ಹಾಗೆಯೇ ಮುಂದುವರಿಯಲು ತೀರ್ಮಾನಿಸಿ, ತನ್ನ ಸಕಲವನ್ನೂ ದಾನ ಮಾಡಿ ಬೃಂದಾವನಕ್ಕೆ ಹೊರಟಳು.

ಮರುದಿವಸ ಕೃಷ್ಣ ಉದ್ದವನನ್ನು ಕರೆದು ನಂದಗೋಕುಲಕ್ಕೆ ಹೋಗಲು ಆದೇಶ ನೀಡಿದ. ನಂದಗೋಕುಲಕ್ಕೆ ಬಂದ ಉದ್ಧವ ನಂದಗೋಪ ಯಶೋದೆಯರನ್ನು ಕಂಡು ಕೃಷ್ಣ ಬಲರಾಮರ ಸರ್ವ ವಿಚಾರಗಳನ್ನೂ ಸವಿವರವಾಗಿ ಹೇಳಿ ಸಂತೋಷಪಡಿಸಿದ. ಬಳಿಕ ವಿರಹದಿಂದ ಬಳಲುತ್ತಿರುವ ಗೋಪಿಕೆಯರನ್ನು ಬೃಂದಾವನಕ್ಕೆ ಕರೆದೊಯ್ದು ಅಲ್ಲಿ ಎಲ್ಲರನ್ನೂ ಕುಳ್ಳಿರಿಸಿ ಕೊಂಡು ಹುಟ್ಟು, ಸಾವು, ಮತ್ತು ಅದರಾಚೆಗಿನ ಸತ್ಯ ವಿಸ್ಮಯ ಕುರಿತಾದ ಮಹತ್ ತತ್ವವನ್ನು ಸವಿವರವಾಗಿ ಸುದೀರ್ಘ ಕಾಲ ಉಪದೇಶ ಮಾಡಿದ. ಹೀಗೆ ಗೋಪಿಕೆಯರಿಗೆ ಉದ್ಧವನಿಂದ ಆದ ದಿವ್ಯ ಉಪದೇಶ ” ಉದ್ಧವ ಗೀತೆ” (ಬಹಳಷ್ಟು ತತ್ವಸಾರವುಳ್ಳ ಭಾಗ. ಓದುಗ ಸಹೃದಯರು ಕೃಷ್ಣನಿಂದ ಉಪದಿಷ್ಟವಾದ ಸಾರ ಸಾಗರ ಉದ್ಧವ ಗೀತೆಯನ್ನು ಅಧ್ಯಯನ ಮಾಡಿದರೆ ಉತ್ತಮ. ಅದು ದೀರ್ಘವೂ, ತತ್ವ ಸಾರ ಭರಿತವೂ ಆಗಿದೆ. ಬಹಳಷ್ಟು ತಾಳ್ಮೆ ಹಾಗು ಅರ್ಥೈಸಿಕೊಂಡು ಓದಬೇಕಾಗ ಭಾಗ. ಹಾಗಾಗಿ ಅದು ಗೀತೆ ಎಂಬ ಮಾನ್ಯತೆ ಪಡೆದಿದೆ.) ಎಂದು ಪ್ರಸಿದ್ಧವಾಯಿತು. ಬಳಿಕ ಗೋಪಿಕೆಯರು ಬೃಂದಾವನದಲ್ಲೇ ತಪಸ್ಸನಾಚರಿಸತೊಡಗಿದರು. ಉದ್ಧವ ಮರಳಿ ಮಥುರೆಗೆ ಬಂದ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page