
ಕೊಪ್ಪಳ: ಶುಕ್ರವಾರ ರಾತ್ರಿ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಭಿನವ ಗವಿದ್ಧೇಶ್ವರ ಮಹಾಸ್ವಾಮೀಜಿ ರೈಲ್ವೆ ನಿಲ್ದಾಣ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಗವಿಸಿದ್ಧೇಶ್ವರರ ಹೆಸರನ್ನು ನಾಮಕರಣ ಮಾಡದಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತೀರಾ ಭಾವುಕರಾಗಿ ಮಾತನಾಡಿದ ಶ್ರೀಗಳು ಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವುದು, ಆ ಸಂಘಟನೆ ಮನವಿ ಕೊಡುವುದು, ಈ ಸಂಘಟನೆ ಮನವಿ ಕೊಡುವುದು ಮಾಡಿದರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಕರೆದುಕೊಂಡು ಹೋಗಬೇಡಿ ಎಂದು ಹೇಳಿದರು.
ಇವತ್ತು ರೈಲ್ವೆ ನಿಲ್ದಾಣಕ್ಕೆ ಅಂತೀರಿ, ವಿಮಾನ ನಿಲ್ದಾಣಕ್ಕೆ ಅಂತೀರಿ, ವಿವಿಗೆ ಅಂತೀರಿ ಏನು ಅವರ ಜತೆ ಗುದ್ದಾಡಲು ಆಗುತ್ತಾ? ಎಷ್ಟೋ ಮಂದಿ ಹೋರಾಟ ಮಾಡುವವರು ಅಲ್ಲೆ ಕುಳಿತಿದ್ದಾರೆ. ಗವಿಸಿದ್ದಪ್ಪಜ್ಜ ನಿಮ್ಮಲ್ಲೆರ ಉಸಿರಿನಲ್ಲಿರುವಾಗ, ಮತ್ತೊಂದಕ್ಕೆ ಅವನ ಹೆಸರು ಏನಕ್ಕೆ? ಇದೇ ಕೊನೆ ನಾನು ಎಂದೂ ಹೇಳುವುದಿಲ್ಲ. ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್ ಮಾರ್ಟಮ್ ಮಾಡುತ್ತೀರಿ ಅಷ್ಟೆ ಎಂದು ಹೇಳಿದರು.
ಎರಡನೆಯದಾಗಿ ಗವಿಮಠವನ್ನು ಇನ್ನೊಂದು ಮಠದ ಜತೆ ಹೋಲಿಸುವುದು, ಗವಿಮಠದ ಸ್ವಾಮೀಜಿಯವರನ್ನು ಬೇರೆ ಸ್ವಾಮೀಜಿ ಜತೆಗೆ ಹೋಲಿಸುವುದು, ಅದಕ್ಕೆ ಪೋಸ್ಟ್ ಹಾಕುವುದು ಬೇಡ. ನಾನು ತಿಳಿದುಕೊಂಡಿರುವುದು ಇಡೀ ನಾಡಿನ ಎಲ್ಲ ಶರಣದ ಪಾದದ ಧೂಳಾಗಿ ನಾನಿದ್ದೇನೆ ಅಷ್ಟೆ. ಯಾರಿಗೂ ಹೋಲಿಸಬೇಡಿ ಎಂದು ಮನವಿ ಮಾಡಿದರು.
ಮೂರನೆಯದ್ದು, ನೀವು ಸುಮ್ಮನೆ ಕೂಡುವ ಮಂದಿಯಲ್ಲ. ಅಜ್ಜಾರಿಗೆ ಆ ಪ್ರಶಸ್ತಿ ಕೊಡ್ರಿ, ಈ ಪ್ರಶಸ್ತಿ ಕೊಡ್ರಿ ಎಂದು ಹೇಳೋಕೆ ಶುರು ಮಾಡ್ತೀರಿ. ಬರುವ ಪ್ರಶಸ್ತಿ ತಿರಸ್ಕರಿಸುವಷ್ಟು ದೊಡ್ಡವ ನಾನಲ್ಲ. ಅದನ್ನು ಸ್ವೀಕರಿಸುವ ಅರ್ಹತೆಯೂ ನನಗಿಲ್ಲ ಎಂಬ ವಿನಯತೆ, ವಿನಮ್ರತೆ ಇದೆ. ಅರ್ಹತೆ ನನಗಿಲ್ಲ. ನಮ್ಮ ಅಜ್ಜಾರ ಮಠದಲ್ಲಿ ಇರಲು ಜಾಗ ಕೊಟ್ಟಿದ್ದೀರಲ್ಲ, ಅದೇ ನನಗೆ ದೊಡ್ಡ ಪ್ರಶಸ್ತಿ. ದಯವಿಟ್ಟು ಇನ್ನು ಮುಂದೆ ಯಾರೂ ಈ ಮೂರು ವಿಷಯ ಕುರಿತು ಮಾತಾಡಬೇಡಿ ಎಂದು ಹೇಳಿ ಭಾವುಕರಾದರು.





















