
ಹೆಬ್ರಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಹೆಬ್ರಿ ತಾಲೂಕು ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವು ಹೆಬ್ರಿ ದೇವಾಡಿಗರ ಸುಧಾರಕ ಸಂಘದಲ್ಲಿ ಜ. 5 ರಂದು ನಡೆಯಿತು.
ಕಾರ್ಕಳ ಹಿರಿಯ ನ್ಯಾಯವಾದಿಗಳಾದ ರೇಖಾ ಡಿ. ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಐಷಾರಾಮಿ ಜೀವನ ಒಂದೇ ಸುಂದರ ಬದುಕಲ್ಲ.ವಿದ್ಯಾವಂತರಾಗಿ ತನ್ನ ಜೀವನದಲ್ಲಿ ತೃಪ್ತಿಯಾಗಿ ಪ್ರಾಮಾಣಿಕ ಆರೋಗ್ಯಕರ ಜೀವನ ನಡೆಸುವುದೇ ಸುಂದರ ಬದುಕು.ಮಹಿಳೆಯರು ಗೌರವಯುತರಾಗಿ ಬದುಕಬೇಕಾದರೆ ಎಲ್ಲರೊಂದಿಗೆ ಸೌಹಾರ್ದತೆಯಿಂದ, ಒಳ್ಳೆಯ ನಡವಳಿಕೆಯಿಂದ ಜೀವನ ರೂಪಿಸಿದಲ್ಲಿ ಮಹಿಳೆಯರ ಬದುಕು ಸುಂದರವೆನಿಸುತ್ತದೆ. ಯೋಜನೆಯ ಜ್ಞಾನ ವಿಕಾಸ ಕೇಂದ್ರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ಅಯೋಜಿಸಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ನೈತಿಕ ಮೌಲ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಿಂದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
“ಮಹಿಳೆಯರು ಸುಂದರ ಬದುಕನ್ನು ರೂಪಿಸಿಕೊಳ್ಳುವಲ್ಲಿ ನೈತಿಕ ಮೌಲ್ಯಗಳ ಅವಶ್ಯಕತೆ ” ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಖ್ಯಾತ ತರಬೇತುದಾರರು ಹಾಗೂ ಮನಶಾಸ್ತ್ರಜ್ಞೆ ಜಯಶ್ರೀ ಭಟ್ ಮಾಹಿತಿ ನೀಡುತ್ತಾ ಪ್ರತಿಯೊಬ್ಬರೂ ಜೀವನದಲ್ಲಿ ನೈತಿಕ ಮೌಲ್ಯಗಳ ಅರಿವು, ಪಾಲನೆ ಅರಿತು ಕೊಂಡು ಬಾಳಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಮತ್ತು ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡುವುದು ಪಾಲಕರ ಕರ್ತವ್ಯ. ನಿಷ್ಠೆ, ಶಾಂತಿ, ಸತ್ಯ,ನ್ಯಾಯ, ಪ್ರಾಮಾಣಿಕತೆ, ಕರುಣೆ, ಜವಾಬ್ದಾರಿ ನಿರ್ವಹಣೆ,ಕರ್ತವ್ಯ ನಿಷ್ಠೆ ಮೊದಲಾದ ನೈತಿಕ ಮೌಲ್ಯಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು .ಪ್ರತಿಯೊಬ್ಬ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು.ಮಹಿಳೆಯರು ಪ್ರೀತಿ, ವಾತ್ಸಲ್ಯ, ಸಹಾನುಭೂತಿ ಗುಣಗಳನ್ನು ಮೈಗೂಡಿಸಿಕೊಂಡು , ಸ್ವಚ್ಛತೆಯಿಂದ ಪರಿಸರವನ್ನು ಚೆನ್ನಾಗಿಟ್ಟುಕೊಂಡಲ್ಲಿ ಮಹಿಳೆಯ ಜೀವನ ಸುಂದರವೆನಿಸುತ್ತದೆ ಎಂದು ಹೇಳಿದರು.
ಹೆಬ್ರಿ ತಾಲೂಕು ಯೋಜನಾಧಿಕಾರಿಯಾದ ಲೀಲಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾರ ವಲಯ ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ವಾದಿರಾಜ ಶೆಟ್ಟಿ, ಹೆಬ್ರಿ ವಲಯ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ನರೇಂದ್ರ ನಾಯಕ್ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಹೆಬ್ರಿ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷರಾದ ಶಂಕರ ದೇವಾಡಿಗ ವಹಿಸಿದ್ದರು.
ಬಚ್ಚಪು ಜ್ಞಾನ ವಿಕಾಸ ಕೇಂದ್ರದ ಸವಿತ, ಎಳ್ಳಾರೆ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸುನಂದ ರವರು ಅನಿಸಿಕೆ ವ್ಯಕ್ತಪಡಿಸಿದರು. ಪುಷ್ಪ ಗುಚ್ಚ ಮತ್ತು ನೃತ್ಯ ಸ್ಪರ್ಧೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವಿಜೇತರಾದ ಪಟ್ಟಿಯನ್ನು ಸೇವಾಪ್ರತಿನಿಧಿ ನಾಗರತ್ನ ವಾಚಿಸಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ ವಂದಿಸಿದರು . ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಮತ್ತು ಬೆಳ್ವೆ ವಲಯ ಸೇವಾಪ್ರತಿನಿಧಿ ಪ್ರಶಾಂತ್ ನಿರೂಪಿಸಿದರು. ಚಾರ ವಲಯಾಧ್ಯಕ್ಷರಾದ ಜ್ಯೋತಿ, ವಕೀಲ ವಿ. ಸುರೇಶ್ ಪೂಜಾರಿ ಸೇರಿದಂತೆ ವಿವಿಧ ವಲಯಗಳ .ಸೇವಾಪ್ರತಿನಿಧಿಗಳು, ಜ್ಞಾನವಿಕಾಸ ಕೇಂದ್ರದ ಸಂಯೋಜಕಿಯರು,ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



















