ಭಾಗ – 51
ಭರತೇಶ್ ಶೆಟ್ಟಿ ,ಎಕ್ಕಾರ್

ಸಾಧನೆಯಿಂದ ಚಕ್ರವರ್ತಿಯಾಗಿದ್ದ ಪಾಂಡು ತನ್ನ ಸಂಸಾರದ ಸವಿಯನ್ನು ಮುದ್ದು ಮಕ್ಕಳ ಜೊತೆ ಎತ್ತರದ ಶತಶೃಂಗಾದ್ರಿಯಲ್ಲಿ, ಪ್ರಾಕೃತ ತೊಟ್ಟಿಲಲ್ಲಿ, ಋಷಿ ಮುನಿಗಳ ಮಂತ್ರ ಘೋಷದ ಜೋಗುಳದಲ್ಲಿ, ಸುಸಂಸ್ಕೃತ ಪರಿಸರದಲ್ಲಿ ರಾಗದ್ವೇಷಾದಿ ಅರಿಷಡ್ವರ್ಗ ರಹಿತ, ಸುಹಿತ ಬದುಕಾಗಿಸಿ ಪಾಲಿಸತೊಡಗಿದ್ದಾನೆ. ಇತ್ತ ಹಸ್ತಿನೆಯಲ್ಲಿ ಅರಮನೆಯೊಳಗೆ ಭಿನ್ನ ಸ್ಥಿತಿ. ಗಾಂಧಾರಿ, ಧೃತರಾಷ್ಟ್ರ, ಶಕುನಿಯಾದಿ ಬಳಗ ಅತಿ ಸಂತೋಷದಿಂದ ಏಕಾಶತಿ (ನೂರೊಂದು) ಕೌರವರ ಮುದ್ದಿಸುತ್ತಿದ್ದಾರೆ. ಪ್ರಾಜ್ಞರು, ಕೃಪ, ಭೀಷ್ಮ, ವಿದುರಾದಿಗಳು ಭವಿಷ್ಯದಲ್ಲಿ ಘಟಿಸಬಹುದಾದ ಬವಣೆಗಳನ್ನು ಭ್ರಮಿಸಿ ಆತಂಕಿತರಾಗಿದ್ದರು. ಕಾರಣ ಜನ್ಮ ಕಾಲದ ಶಕುನ, ಗ್ರಹಗತಿ ಸೂಚಿತ ಸಂಭವನೀಯ ಆಪತ್ತುಗಳ ಬಗ್ಗೆ ದೂರದೃಷ್ಟಿಯ ಮಥನ ಸಾಗುತ್ತಿತ್ತು. ಹೀಗೆ ಚಂದ್ರವಂಶ ವೃಕ್ಷದ ಎರಡು ಕೊಂಬೆಗಳು ಚಿಗುರೊಡೆದು ಮೈದುಂಬಿದೆ. ಮುಂದೆ ಚಂದ್ರವಂಶ ಬೆಳಗಬೇಕಾದ ಮಕ್ಕಳು ಸುಖವಾಗಿ ಬೆಳೆಯುತ್ತಿದ್ದಾರೆ.
ಹೀಗಿರಲು ಇತ್ತ ಪಾಂಚಾಲದೇಶದಲ್ಲಿ ಸೋಮಕ ವಂಶ ಆಳ್ವಿಕೆಯಲ್ಲಿತ್ತು. ಗುರು ಅಗ್ನಿವೇಶ್ಯರ ಆಶ್ರಮದಲ್ಲಿ ದ್ರೋಣ ದ್ರುಪದರು ಸಹಪಾಠಿ, ಒಡನಾಡಿ, ಮಿತ್ರರಾಗಿ ಬೆಳೆದ ವಿಚಾರ ವೇದ್ಯ ಸಂಗತಿ. ದ್ರುಪದ ಪ್ರಸ್ತುತ ಪಾಂಚಾಲ ದೇಶದ ಅಧಿಪತಿಯಾಗಿ ಮಾಕಂದಿನಗರ ವನ್ನು ರಾಜಧಾನಿಯನ್ನಾಗಿಸಿದ್ದನು. ಸುತರಾಮನೆಂಬಾತನ ಮಗಳು ಕೌಸವಿ ಯನ್ನು ಮದುವೆಯಾದರೂ ಮಕ್ಕಳಾಗಿರಲಿಲ್ಲ. ಶಿವನ ತಪಸ್ಸು ಮಾಡಿ ಒಲಿದ ದೇವರಲ್ಲಿ ಸಂತಾನ ಬೇಡಿದರೆ ಒಬ್ಬಳು ಮಗಳು ಹುಟ್ಟುವಂತೆ ಅನುಗ್ರಹಿಸಿದನು ರುದ್ರ ದೇವ. ದ್ರುಪದ ಪುತ್ರಾಪೇಕ್ಷೆ ವ್ಯಕ್ತಪಡಿಸಿ ಬೇಡಿದಾಗ, ಹೆಣ್ಣಾಗಿ ಹುಟ್ಟಿ ಮತ್ತೆ ಗಂಡಾಗುತ್ತಾಳೆ ಎಂದು ಪುನರ್ ಅನುಗ್ರಹಿಸಿದ ಪರಶಿವ. ಇಂತಹ ವಿಭಿನ್ನತೆ ವಿಚಿತ್ರವಾದರೂ ಕಾರ್ಯ ಕಾರಣವಿಲ್ಲದೆ ಕಾಯ ಬದಲಾಗಲ್ಪಟ್ಟೀತೆ? ಕಾಲವೇ ಉತ್ತರಿಸಲಿದೆ..ಕಾಯಬೇಕು.
ಹೀಗೆ ಕಾಲಾಂತರದಲ್ಲಿ ವರಬಲದಲ್ಲಿ ಹುಟ್ಟಿದ ಮಗು ಹೆಣ್ಣಾದರೂ ಗಂಡೆಂದೇ ಬೆಳೆಸಿದರು. ಶಿಖೆ ಅಂದರೆ ತಲೆಯ ಹಿಂಭಾಗದಲ್ಲಿ ಅಂಡಾಕೃತಿ ಇದ್ದ ಕಾರಣ ಶಿಖಂಡಿ ಎಂಬ ಹೆಸರಿಟ್ಟರು. ವಸ್ತ್ರ – ಶಿಕ್ಷಣ ಹೀಗೆ ಎಲ್ಲಾ ವಿಚಾರದಲ್ಲೂ ಗಂಡೇ ಆಗಿ ಬೆಳೆಸಿ ಎಲ್ಲೂ ಯಾರಿಗೂ ಹೆಣ್ಣೆಂಬ ಸತ್ಯ ಅರಿಯದಂತೆ ಅತಿ ಜಾಗರೂಕತೆ ವಹಿಸಿದರು. ಯೌವನ ಕಾಲದಲ್ಲಿ ದಶಾರ್ಣ ದೇಶದ ರಾಜ ಹಿರಣ್ಯವರ್ಮನ ಮಗಳು ಹಿರಣ್ಯವತಿ ಯನ್ನು ತಂದು ಮದುವೆಯನ್ನೂ ಮಾಡಿಸಿದರು. ಶಿಖಂಡಿಯ ಪತ್ನಿಗೆ ಗಂಡನ ವಿಚಾರ ತಿಳಿಯಿತು ನಾನು ವರಿಸಿದ್ದು ಹೆಣ್ಣನ್ನು, ಗಂಡನ್ನಲ್ಲ. ಈ ಚಿಂತೆ ಖಿನ್ನತೆಯಾಗಿ ಬಳಲಿ ವ್ಯಾಧಿಗ್ರಸ್ಥಳಾದಳು. ದಶಾರ್ಣ ದೇಶದಿಂದ ಶುಶ್ರೂಷೆಗೆ ಬಂದ ದಾದಿ ಸಲುಗೆ ಬೆಳೆಸಿ ವಿಷಯವರಿತು ಹಿರಣ್ಯವರ್ಮನಿಗೂ ಈ ಸುದ್ದಿ ಮುಟ್ಟಿತು. ತನ್ನ ಮಗಳಿಗೆ ಮೋಸದ ಮದುವೆ ಮಾಡಿಸಿದ ದ್ರುಪದನ ಮೇಲೆ ಸೈನ್ಯ ಸಮೇತ ದಂಡೆತ್ತಿ ಬಂದನು. ದ್ರುಪದ ಕೋಟೆಯ ಬಾಗಿಲು ಮುಚ್ಚಿ ಕೋಟೆಯ ಒಳಗೆ ಮಾನ ರಕ್ಷಣೆಗಾಗಿ ಶಿವನ ವರ ವಾಕ್ಯ ಸ್ಮರಿಸಿ ಧ್ಯಾನ ಮಾಡುತ್ತಾ ಕುಳಿತು, ದೇವರೇ ಕಾಪಾಡಿ ಎಂದು ಬೇಡುತ್ತಿದ್ದನು. ಇತ್ತ ಮಗ ಶಿಖಂಡಿ ಬೇಸತ್ತು ಕೋಟೆಯ ಹಿಂಬಾಗಿಲ ಮೂಲಕ ಕುದುರೆಯೇರಿ ಕಾಡ ದಾರಿ ಹಿಡಿದು ಗೊಂಡಾರಣ್ಯ ಪ್ರವೇಶಿಸಿ ಅಲೆದಾಡುತ್ತಿದ್ದನು. ಅದೇ ಸಮಯ ಮೃಗ ಬೇಟೆಗಾಗಿ ಕುಬೇರ ತನ್ನ ಸಹಚರರ ಸಹಿತ ಬೇಟೆಗೆ ಬಂದಿದ್ದನು. ಅವರಲ್ಲಿ ಸ್ಥೂಲಕರ್ಣ ಎಂಬ ಯಕ್ಷ ಉತ್ಸಾಹರಹಿತನಾಗಿ ಬೇಟೆಯಾಡದೆ ಒಂದೆಡೆ ವಿರಮಿಸುತ್ತಾ ಕುಳಿತಿದ್ದ. ಕಾಡಾಡಿಯಾಗಿ ಬಂದ ಶಿಖಂಡಿಯನ್ನು ಕಂಡು ಕುಶಲೋಪರಿ, ಬಳಿಕ ಆತನ ಕರುಣಾಜನಕ ಕಥೆ ಆಲಿಸಿ, ಶಿಖಂಡಿಯನ್ನು ಸಂತೈಸಿದ. ದುಃಖಿಸಬೇಡ ನಾನು ನಿನಗೆ ಸಹಾಯ ಮಾಡುವೆ. ನನಗೂ ಶಿವನ ಅನುಗ್ರಹವಿದೆ. ನಾನು ನನ್ನ ಪುರುಷತ್ವಕ್ಕೆ ನಿನ್ನ ಸ್ತ್ರೀತ್ವವನ್ನು ಬದಲಿಸಿಕೊಳ್ಳುವ ಶಕ್ತಿ ಹೊಂದಿರುವೆ. ಈ ವಿನಿಮಯ ಒಂದು ತಿಂಗಳ ಅವಧಿಗೆ ನೀಡುವೆ. ದಂಡೆತ್ತಿ ಬಂದ ನಿನ್ನ ಮಾವ ತಲೆ ತಗ್ಗಿಸಿ ಮರಳಿ ಹೋಗುವಂತೆ ಮಾಡು. ಆದರೆ ಕ್ಲಪ್ತ ಸಮಯದಲ್ಲಿ ನೀನು ಬಂದು ನನ್ನ ಪುರುಷತ್ವ ಮರಳಿ ನೀಡಬೇಕು. ಮಾತಿಗೆ ತಪ್ಪಬಾರದೆಂದೂ ಎಚ್ಚರಿಕೆಯ ಮಾತು ಹೇಳಿದ. ಹಾಗೆ ಮುಂದುವರಿದು ಶಿಖಂಡಿಯನ್ನು ಗಂಡಾಗಿಸಿದ ಯಕ್ಷ ಸ್ಥೂಲಕರ್ಣ. ಆಶೀರ್ವಾದ ಪಡೆದು ಶಿಖಂಡಿ ಶರವೇಗದಲ್ಲಿ ಮಾಕಂದಿನಗರ ಸೇರಿ ಕೋಟೆಯ ಹೊರಭಾಗದಿಂದ ಪ್ರವೇಶಿಸಿ ಮಾವ ಹಿರಣ್ಯವರ್ಮನನ್ನು ಕಂಡು ಮಾತನಾಡಿಸಿದ. ಮಾವನ ಸಂದೇಹಕ್ಕೆ ನಕ್ಕು ಗಾಂಭೀರ್ಯ ಮೆರೆದು ಕೋಟೆಯ ಹಿಂಬಾಗಿಲ ಮೂಲಕ ಪ್ರವೇಶಿಸಿದ. ತಾಯ್ತಂದೆ, ಪತ್ನಿಯರನ್ನು ಕಂಡು ನಡೆದ ವೃತ್ತಾಂತ ವಿವರಿಸಿದ. ಸಂತೋಷಗೊಂಡ ಅವರು ಧೈರ್ಯವಾಗಿ ಕೋಟೆಯ ಬಾಗಿಲು ತೆರೆದು ಹಿರಣ್ಯವರ್ಮನನ್ನು ಸ್ವಾಗತಿಸಿದರು. ಶಿಖಂಡಿ ಹೋಗಿ ಮಡದಿಯನ್ನು ಸರಸದಿಂದ ಒಡಂಬಡಿಸಿ ಒಡಗೂಡಿದನು. ಆ ಬಳಿಕ ಹಿರಣ್ಯವರ್ಮನ ಮಗಳು ಸಂತೋಷದಿಂದ ಬಂದು ಪಿತ ಹಿರಣ್ಯವರ್ಮನಲ್ಲಿ ತನ್ನ ಪತಿ ಗಂಡೇ ಆಗಿದ್ದಾನೆ ಎಂದು ಹೇಳಿದಾಗ ಅವಳ ಅಪ್ಪ ನಂಬಲೇ ಬೇಕಾಯಿತು. ದ್ರುಪದನೂ – ಹಿರಣ್ಯವರ್ಮನನ್ನು ಮಾತನಾಡಿಸಿದ. ಮಗ ಮನೆಯಲ್ಲಿಲ್ಲದ ಕಾರಣ ವ್ಯರ್ಥ ಕದನದಿಂದ ಫಲವಿಲ್ಲ. ನಿಮ್ಮ ಸಂದೇಹ ಪರಿಹಾರಕ್ಕಾಗಿ ಆತನ ಆಗಮನದ ನಿರೀಕ್ಷೆಯಲ್ಲಿದ್ದೆ. ನಾವು ಸೋಮಕ ವಂಶದವರು ರಣಹೇಡಿಗಳಲ್ಲ . ಯುದ್ದಾಕಾಂಕ್ಷೆ ಇದ್ದರೆ ಈಗಲೂ ಸಿದ್ದರಿದ್ದೇವೆ, ನಿಮ್ಮ ನಿರ್ಣಯವೇನೆಂದು ಕೇಳಿ ಧೈರ್ಯ ತೋರಿಸಿದನು. ಹಿರಣ್ಯವರ್ಮ ದ್ರುಪದನನ್ನು ಸಂತೈಸಿ, ನಾನೂ ಆಕ್ರಮಣ ಮಾಡದೆ ಬೀಗರೊಳಗೆ ಯುದ್ದ ಬೇಡ ಎಂದು ಸೈನ್ಯವನ್ನು ನಿಲ್ಲಿಸಿ ಕಾಯುತ್ತಿದ್ದೆ. ಈಗ ಗೊಂದಲ ಪರಿಹಾರವಾಯಿತೆಂದು ದ್ರುಪದನನ್ನು ಅಪ್ಪಿ ಬಾಂಧವ್ಯ ಸೂಚಕ ಆಲಿಂಗನ ನೀಡಿ ಮರಳಿ ತನ್ನ ದೇಶ ದಶಾರ್ಣ ಸೇರಿದ.
ಇತ್ತ ಕುಬೇರ ಮೃಗ ಬೇಟೆಯಾಡಿ ಮರಳಿ ಅಲಕಾವತಿ ಸೇರಲು ಹೊರಟರೆ ಯಕ್ಷ ಸ್ಥೂಲಕರ್ಣ ಬರುತ್ತಿಲ್ಲ. ಯಾಕೆಂದು ಕೇಳಿದರೆ, ಭೂಲೋಕದ ಮನುಷ್ಯರೊಡನೆ ಲಿಂಗ ವಿನಿಮಯ ಮಾಡಿದ ವಿಚಾರ ತಿಳಿಯಿತು. ನಿಯಮ ಮೀರಿದ ಕಾರಣ ಕೋಪ ತಳೆದ ಕುಬೇರ ಯಕ್ಷ ಸ್ಥೂಲಕರ್ಣನಿಗೆ “ನೀನು ಲೋಕಧರ್ಮ ಮೀರಿ ವ್ಯವಹರಿಸಿದ ಕಾರಣ ಸ್ತ್ರೀಲಿಂಗಿಯಾಗಿಯೇ , ಶಿಖಂಡಿ ಪುರುಷನಾಗಿಯೇ ಬದುಕುವಂತಾಗಲಿ”. ಎಂದು ಶಪಿಸಿದ.
ಇತ್ತ ಶಿಖಂಡಿ ವಚನವಿತ್ತಂತೆ ಮಾಸಾಂತ್ಯದೊಳಗೆ ಕಾಡಿಗೆ ಬಂದು ಯಕ್ಷ ಸ್ಥೂಲಕರ್ಣನಿಗೆ ತನ್ನಲಿರುವ ಆತನ ಪುರುಷತ್ವ ಮರಳಿಸಲು ಬಂದನು. ಯಕ್ಷನಿಗೆ ಒದಗಿದ ಶಾಪ ವೃತ್ತಾಂತ ತಿಳಿದು, ತನಗೆ ಉಪಕೃತಿ ಮಾಡಲು ಹೋಗಿ ಈತನಿಗಾದ ದುಸ್ಥಿತಿಗೆ ಮರುಗಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್