ಭಾಗ 41
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೪೧ ಮಹಾಭಾರತ
ಪರಶುರಾಮರಿಗೆ ಭೀಷ್ಮನ ಅಂತಃಸತ್ವ , ಧರ್ಮ ನಿಷ್ಟೆ, ಸ್ಥಿತ ಪ್ರಜ್ಞೆ ಹಿತವೆಣಿಸಿತು. ಒತ್ತಡಕ್ಕೆ ಬಗ್ಗದೆ, ಅಧರ್ಮಕ್ಕೆ ಒಗ್ಗದೆ ನಿಯತಿಯ ನಿಯಮವೇನೋ ಅದೇ ನಿರ್ಣಯವಾಗಲೆಂದು ನಿರ್ಮಲ ಮನಸ್ಸಿನ ನಿಷ್ಟೆಯಿಂದ ನಿಂತ ವಿನೀತ ಭೀಷ್ಮನ ನಿಲುವು ಲೋಕಕ್ಕೆ ಸದುತ್ತರವಾಗಲಿ ಎಂದು ಬಯಸಿದರು.
ಇತ್ತ ಭೀಷ್ಮ ರಾಜಮಾತೆ ಸತ್ಯವತಿದೇವಿಗೆ ವಾಸ್ತವ ಸ್ಥಿತಿ ಬಿತ್ತರಿಸಿದ. ಆಕೆ ಧರ್ಮೋ ರಕ್ಷತಿಃ ರಕ್ಷಿತಾಃ ಎಂದುಲಿದು ವಿಜಯೀಭವ ಎಂಬಂತೆ ಆಶೀರ್ವದಿಸಿದಳು. ನಾಳಿನ ಸೂರ್ಯೋದಯ ಗುರು ಶಿಷ್ಯರ ಮಧ್ಯೆ ಸಾಗುವ ಧರ್ಮ ಪರೀಕ್ಷೆಗೆ ರಂಗವೇದಿಕೆಯೋ – ರಣರಂಗವೋ ಆಗಲಿದೆ ಎಂದರಿತ ಭೀಷ್ಮ, ಮನಸ್ಸಿನ ಮೇಲೆ ಹಿಡಿತ, ಸೂಕ್ತ ನಿರ್ಣಯ, ಏಕಾಗ್ರತೆ ಹೀಗೆ ಸಾಧಿಸಬೇಕಾದ ಕೈಂಕರ್ಯಗಳ ಸಿದ್ಧತೆಗಾಗಿ ಧ್ಯಾನಸ್ಥನಾಗಿ ರಾತ್ರಿ ಕಳೆದನು.
ಬ್ರಾಹ್ಮೀ ಮುಹೂರ್ತದಲ್ಲಿ ನೈಮಿತ್ತಿಕ ಕರ್ಮಗಳನ್ನು ಪೂರೈಸಿ, ಧರ್ಮಕ್ಷೇತ್ರ – ಕುರುಕ್ಷೇತ್ರದಲ್ಲಿ ಗುರು ಶಿಷ್ಯರು ಮುಖಾಮುಖಿಯಾದರು. ಯುದ್ದಾರಂಭಕ್ಕೆ ಮುನ್ನ ಚತುರೋಪಾಯ ಪ್ರಯೋಗಕ್ಕೆ ಮುಂದಾದರು ಗುರು ಭಾರ್ಗವರಾಮ-
ಭೀಷ್ಮಾ..! ಹಠ ಬಿಟ್ಟು ಅಂಬೆಯನ್ನು ವರಿಸು ಎಂದು ಸಾಮ ದಿಂದ ತಿಳಿ ಹೇಳಿದರೆ, ಗುರುಗಳೇ… ಹಾಗೆ ಮಾಡಿದರೆ ಬ್ರಹ್ಮಚರ್ಯದ ವ್ರತಪಾಲಕನಾದ ನಿಮ್ಮ ಶಿಷ್ಯ ಮಾಡುವ ಧರ್ಮದ ಅತಿಕ್ರಮಣವಾಗದೇ ? ಎಂಬ ಮರು ಪ್ರಶ್ನೆ ಶಿಷ್ಯನಿಂದ.
ಹೋ! ಹಾಗೋ ಅಧರ್ಮವಾಗುವುದೆಂಬ ಭಯವೇ? ಗುರು ವಾಕ್ಯ ಪರಿಪಾಲನೆಯ ಸುಕೃತ ಪುಣ್ಯ ನಾನು ಒದಗಿಸುತ್ತೇನೆ. ಮಾತ್ರವಲ್ಲ ನಿನ್ನ ಮನದಲ್ಲಿ ಕಾಡುವ ವಚನ ಭ್ರಷ್ಟತೆಗೆ ನನ್ನ ಆದೇಶ ಕಾರಣ. ಆ ದೋಷವನ್ನೂ ನಾನೇ ಸ್ವೀಕರಿಸುವೆ. ಹೀಗೆ ಪುಣ್ಯ ದಾನ ರೂಪದ ಪ್ರಯತ್ನಕ್ಕೆ ಮುಂದಾಗು ಎಂಬ ಒತ್ತಡ ಹೇರಿದರು. ಆಗ ಭೀಷ್ಮ ಗುರುಗಳೇ ಧರ್ಮ ವೈರುಧ್ಯದ ಅಪೇಕ್ಷೆ, ಕಾಮನೆಗಳು ನನ್ನಲ್ಲಿ ಇಲ್ಲವಲ್ಲ. ನಾ ಹೇಗೆ ಸ್ವೀಕರಿಸಲಿ? ಎಂಬ ಪ್ರಶ್ನೆ ಶಿಷ್ಯ ಭೀಷ್ಮನಿಂದ ಬಂತು.
ನಿನ್ನನ್ನು ನನ್ನ ಶಿಷ್ಯೋತ್ತಮನೆಂದು ಮುಕ್ತಕಂಠದಿಂದ ಸಾರುತ್ತಿದ್ದೆ. ಆದರೆ ನೀನು ಗುರು ವಾಕ್ಯವನ್ನೇ ಧಿಕ್ಕರಿಸಿ ಅವಮಾನಿಸುವ ಶಿಷ್ಯನಾಗಿ ಹೋದೆಯಾ? ಎಂಬ ಭೇದ ಕಲ್ಪಿಸಿದರು. ಆಗ ಗುರುಗಳೇ, ಅಧರ್ಮದ ಹಾದಿ ತೋರುವುದೂ ತಪ್ಪಲ್ಲವೇ? ಉತ್ತರವೂ ಪ್ರಶ್ನೆಯೇ ಆಯಿತು.
ಯಾವುದಕ್ಕೂ ಬಗ್ಗುವುದಿಲ್ಲ ಎಂದಾದರೆ, ದಶಗುಣವುಳ್ಳ ದಂಡ ಪ್ರಯೋಗವೇ ಸೂಕ್ತ ಸಿದ್ದನಾಗು ಎಂಬ ಆಜ್ಞೆ ಗುರು ಮುಖದಿಂದ ಹೊರಟಿತು. ಶಿಷ್ಯ ಉತ್ತಮನಾಗಿಯೇ ವ್ಯವಹರಿಸಿ, ಧನು ಶರಗಳನ್ನು ಗುರುಗಳ ಪಾದಮೂಲದಲ್ಲಿ ಕೆಳಗಿಟ್ಟು ಗುರು ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಎಷ್ಟಾದರೂ ಗುರುವಲ್ಲವೇ ತಳ್ಕಿಸಿ ಎಬ್ಬಿಸಿ, ಶಿಷ್ಯನ ಜೋಡಿಸಿದ ಕೈಗಳು, ಬಾಗಿದ ಶಿರದ ಸ್ಥಿತಿಯಲ್ಲಿ ಅಪೇಕ್ಷೆಯೊಂದು ಭೀಷ್ಮನ ಮುಖವಾಣಿಯಾಯಿತು. ನಿಮ್ಮ ಶಿಷ್ಯನಿಗೆ ಜಯವಾಗಲೆಂದು ಆಶೀರ್ವದಿಸಿ. ಧರ್ಮ ರಕ್ಷಣೆಯಾಗಲಿ ಎಂದಾಗ ರೇಣುಕಾ ನಂದನನ (ಪರಶುರಾಮರ ತಾಯಿ ರೇಣುಕೆ) ಮನ ಮಂಥನದಿ ಅರ್ಥೈಸಿತು. ಇದಿರಾಳಿಗೆ ಜಯವಾಗಲಿ ಎಂದರೆ ತನಗೆ ಸೋಲಾಗಲಿ ಎಂದಲ್ಲವೇ? ಶಿಷ್ಯನ ಜಾಣ್ಮೆಗೆ ಮೆಚ್ಚಿದರು. “ಶ್ರೇಯಸ್ಸಾಗಲಿ. ಧರ್ಮ ವಿಜಯೀಭವ” ಎಂದು ಆಶೀರ್ವದಿಸಿದರು.
ಯುದ್ದಾರಂಭವಾಯಿತು. ಭೂಮಂಡಲದ ಕ್ಷತ್ರಿಯ ಕುಲವನ್ನೇ ಸವರಿ ರಕ್ತಸಿಕ್ತ ಪರಶುವನ್ನು ತೊಳೆದು ಶುಚಿಗೊಳಿಸಿದ್ದರಿಂದ ಈ ಕ್ಷೇತ್ರದಲ್ಲಿ ರುಧಿರ ಸರೋವರವೇ ಆಗಿದೆ. ಮರಳಿ ನನ್ನನ್ನು ಶಸ್ತ್ರಧಾರಣೆ ಮಾಡಿಸಿದೆಯಲ್ಲಾ! ಎಂದು ನುಡಿದು ಶರವನ್ನೆಳೆದು ಪ್ರತ್ಯಂಚಕ್ಕೆ ಜೋಡಿಸಿ ಸಂಧಾನ ಮಾಡಿ ಸೆಳೆದು ಬಿಟ್ಟರು. ಭಾರ್ಗವ ರಾಮ ಬಾಣ ಹೊರಟಿತು. ಎಣೆಯುಂಟೇ ಭಾರ್ಗವರಾಮರ ಶರಕೆ? ಆದರೆ ಭೀಷ್ಮರು ಖಂಡಿಸಿ ಮಧ್ಯಪಥದಲ್ಲೇ ತುಂಡರಿಸಿದರು. ತರ ತರಹದ ಪ್ರಯೋಗ, ಕುಶಲ ಕೌಶಲ್ಯ ಪ್ರಾವಿಣ್ಯ, ವೇಗ ಉದ್ವೇಗದ ಅಬ್ಬರಗಳನ್ನೆಲ್ಲಾ ಭೀಷ್ಮರು ತಾಳ್ಮೆಯಿಂದ ಖಂಡಿಸಿದರೇ ಹೊರತು ಗುರುವಿನ ಮೇಲೆ ಪ್ರತಿ ಆಕ್ರಮಣಗೈಯಲಿಲ್ಲ. ಸೂರ್ಯಾಸ್ತ ಸೂರ್ಯೋದಯಗಳಾದವು. ಪರಶುರಾಮರ ಧನುರ್ವೇದ ಪಾಂಡಿತ್ಯ, ಅಸ್ತ್ರ ಶಸ್ತ್ರ ಮಂತ್ರಾಸ್ತ್ರಗಳನ್ನೆಲ್ಲಾ ಭೀಷ್ಮರು ಪ್ರತ್ಯಸ್ತ್ರಗಳಿಂದ ಖಂಡಿಸುತ್ತಾ ಹೋಗುತ್ತಲೇ ಇದ್ದರು. ಜಯಾಪಜಯದ ನಿರ್ಣಯವಾಗಲಿಲ್ಲ. ತನ್ನಲ್ಲಿರುವುದೆಲ್ಲವನ್ನೂ ಹೇಳಿಕೊಟ್ಟರೆ ಮರಳಿ ನಮಗೇ ಪ್ರಯೋಗಿಸಲ್ಪಡುತ್ತದೆ ಎಂಬುವುದಕ್ಕೆ ನಿದರ್ಶನವಾಯ್ತು ಈ ಗುರು ಶಿಷ್ಯರ ಸಂಘರ್ಷ. ಇಪ್ಪತ್ತಾರನೇ ದಿನದ ಸಂಗ್ರಾಮ, ಯುದ್ದಾಂತ್ಯಗೊಳಿಸಲೇ ಬೇಕೆಂದು ಅತ್ಯಮೋಘವಾದ ಪುಷ್ಪಾಪನ ಅಥವಾ ಪ್ರಸ್ವಾಪನ ಶರವನ್ನು ಪರಶುರಾಮರು ಹೆದೆಯೇರಿಸಿದಾಗ, ಭೀಷ್ಮರೂ ಅದೇ ಮಂತ್ರಶರ ಪ್ರಯೋಗಕ್ಕೆ ಸಿದ್ಧರಾದರು. ಅರೆ! ಏನಾಶ್ಚರ್ಯ ಈ ದಿವ್ಯಾಸ್ತ್ರವನ್ನು ನಾನು ಉಪದೇಶಿಸಲೇ ಇಲ್ಲವಲ್ಲ. ಹಾಗಾದರೆ ಇದರ ಸಂಪಾದನೆ ಭೀಷ್ಮನಿಗೆ ಹೇಗಾಯಿತು? ಎಂದು ದಿವ್ಯ ದೃಷ್ಟಿಯಿಂದ ನೋಡಿದರೆ, ಹಿಂದಣ ರಾತ್ರೆ ಅಷ್ಟವಸುಗಳಲ್ಲಿ ನಾಲ್ವರು ಸ್ವಪ್ನಸ್ಥರಾಗಿ ಬಂದು ಉಪದೇಶ ಮಾಡಿದ್ದರು. ಇಂದು ಭೀಷ್ಮ ಅವರನ್ನು ಧ್ಯಾನಿಸಿ ಸಂಧಾನ ಮಾಡಿದ್ದ. ಒಂದೇ ಮಂತ್ರದ ಅತ್ಯಮೋಘ ವಿಧ್ವಂಸಕ ಶರಗಳು ಪ್ರಯೋಗಿಸಲ್ಪಟ್ಟು ಘಾತಿಸಿಕೊಂಡರೆ ಇಡೀ ಜಗತ್ತೇ ನಿರ್ನಾಮವಾದೀತು. ಈ ವಿಚಾರ ಅರಿತೂ ಗುರು ಶಿಷ್ಯರು ಶರ ಸಂಧಾನ ಮಾಡಿಯಾಗಿದೆ! ಮುಂದೇನಾದೀತು? ದೇವಗಡಣವೇ ಆತಂಕಕ್ಕೀಡಾಗಿದೆ.
ಮುಂದುವರಿಯುವುದು.





