
ಬಾಗಲಕೋಟೆ : ಬೆಳಗಾವಿ ಸುವರ್ಣಸೌಧ ಮುಂದೆ ಪಂಚಮಸಾಲಿಗರ ಮೇಲೆ ಪೊಲೀಸರು ಲಾಠಿ ಜಾರ್ಜ್ ಮಾಡಿದ್ದನ್ನು ಖಂಡಿಸಿ ಬಾಗಲಕೋಟೆ ಶಿರೂರ ಅಗಸಿ ಬಳಿ ಪಂಚಮಸಾಲಿ ಸಮಾಜದಿಂದ ನಡೆದ ರಸ್ತೆ ತಡೆ, ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸಮಾಜದ ಋಣ ತೀರಿಸಿದಂತೆ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬಾಳ್ಕರ್‌ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಮಯದಲ್ಲಿ 2ಎ ಮೀಸಲಾತಿ ಸಮಾಜಕ್ಕೆ ಒದಗಿಸಿಕೊಟ್ಟರೆ ಸಹೋದರಿ, ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಳಗಾವಿಯಿಂದ ಕುಂದಾ ತಂದು, ಬಂಗಾರದ ಕಿರೀಟ ಹಾಕುವುದಾಗಿ ಹೇಳಿಕೆ ನೀಡಿದ್ದೀರಿ. ಇಂದು ನಿಮ್ಮ ಸರ್ಕಾರ ಬಂದು 18 ತಿಂಗಳ ಆಯ್ತು ನೀವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸಿಕೊಟ್ಟರೆ 1 ಕೆಜಿ ಬಂಗಾರ ನೀಡುವ ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ರಥದ ಮೇಲೆ ಮೆರವಣಿಗೆ ಮಾಡುವುದಾಗಿ ಹೇಳಿದ್ದಾರೆ.
ಬಹಳ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಮೀಸಲು ಹೋರಾಟ ಹತ್ತಿಕ್ಕುವ ಉದ್ದೇಶದೊಂದಿಗೆ ಬಲಪ್ರಯೋಗ ನಡೆಸಿದೆ. ಅಮಾಯಕರ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣ ಹಿಂಪಡೆಯಬೇಕು. ಇಲ್ಲವಾದರೆ ಪೊಲೀಸರು ಸಮಾಜದ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಮುಂದಾಗುವ ಅನಾಹುತಕ್ಕೆ ಸರಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.





