32.5 C
Udupi
Sunday, May 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 34

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೪ ಮಹಾಭಾರತ

ಮಾಸಗಳು ಉರುಳಿ, ಒಂದು ಸುದಿನ ಗಂಗೆ ಮುದ್ದಾದ ಮಗುವಿಗೆ ಜನ್ಮ ನೀಡುತ್ತಾಳೆ. ಶಂತನುವಿಗೆ ಆಗುತ್ತಿರುವ ಆನಂದ ಹೇಳತೀರದು. ಆದರೆ ಗಂಗೆ ತಾನು ಹೆತ್ತ ಮಗುವನ್ನು ಎತ್ತಿಕೊಂಡು ಹೊರಟೇ ಬಿಟ್ಟಳು. ಎಲ್ಲಿಗೆ ಹೋಗುತ್ತಿದ್ದಾಳೆಂದು ಹಿಂಬಾಲಿಸಿದ ಶಂತನು ಚಕ್ರವರ್ತಿ. ಏನು, ಎಲ್ಲಿಗೆ, ಯಾಕೆ ಎಂದು ಆಕ್ಷೇಪಿಸಲಾಗದಂತಹ ಸ್ಥಿತಿ ಆತನಿತ್ತ ಶರತ್ತು ಬದ್ದ ವಚನ ನಿರ್ಮಿಸಿತ್ತು. ನೋಡುತ್ತಿದ್ದಂತೆಯೇ ಗಂಗಾ ತೀರಕ್ಕೆ ಬಂದವಳು ಮಗುವನ್ನೊಮ್ಮೆ ಅರೆಕ್ಷಣ ಸರಿಯಾಗಿ ನೋಡಿ ನದಿ ಮಧ್ಯಕ್ಕೆ ಎಸೆದೇ ಬಿಟ್ಟಳು. ಮೂಕ ಸಾಕ್ಷಿಯಾಗಿ ನೋಡುತ್ತಾ ತಡೆದುಕೊಳ್ಳಲಾರದ ನೋವು ಶಂತನುವಿನ ಮನಸ್ಸಿಗಾಯಿತು. ಎಸೆದು ಓಡಿಬಂದ ಗಂಗೆ ಅರಸನನ್ನು ಮುದ್ದಿಸಿ ಅರೆಗಳಿಗೆಯಲ್ಲಿ ದುಗುಡವನ್ನು ಮರೆಮಾಡಿದಳು. ಆದರೂ ಪುತ್ರ ವಿಯೋಗದ ದುಃಖ ಹೋದೀತೇ? ಸಹಿಸಿಕೊಂಡು ಅರಮನೆ ಸೇರಿದ.

ಹೀಗೆ ಒಂದಾದ ನಂತರ ಮತ್ತೊಂದು ಏಳು ಮಕ್ಕಳು ನದಿ ಪಾಲಾಗಿ, ಎಂಟನೆ ಮಗುವನ್ನೆಸೆಯಲು ಬಂದಾಗ ಶಂತನುವಿನ ತಾಳ್ಮೆ, ಸಹನೆಯ ಕಟ್ಟೆ ಮೀರಿ ಬಿಟ್ಟಿತ್ತು. ನಿಯಂತ್ರಿಸಲಾಗದೆ ಹೆಂಡತಿಯನ್ನು ತಡೆದೇ ಬಿಟ್ಟ, ಆಕ್ಷೇಪಿಸಿದ. ವಚನ ಭ್ರಷ್ಟನಾದ, ಪೂರ್ವ ಸ್ಮರಣೆ ಹೊಂದಿದ್ದ ಗಂಗಾದೇವಿಗೆ ಮರಳಿ ಬ್ರಹ್ಮಲೋಕ ಸೇರುವ ಅವಕಾಶ ಕಲ್ಪಿಸಿ ಕೊಟ್ಟಿತು. ಗಂಗೆಗೆ ಪೂರ್ವ ಸ್ಮರಣೆಯಿತ್ತು. ಹಿಂದೆ ನಡೆದಿರುವ ವೃತ್ತಾಂತ, ಶಾಪ ಪ್ರಕರಣವನ್ನು ವಿವರಿಸಿ ನನ್ನಿಂದ ನದಿಗೆ ಎಸೆಯಲ್ಪಟ್ಟ ಈ ಮಕ್ಕಳು ಅಷ್ಟವಸುಗಳಲ್ಲಿ ಮೊದಲ ಏಳು ಮಂದಿ. ನನ್ನ ಕೈಯಲ್ಲಿರುವ ಎಂಟನೆಯ ಮಗು “ದ್ಯು”. ಈತ ಸುದೀರ್ಘ ಬಾಳ್ವೆಯನ್ನು ಭೂಮಿಯಲ್ಲಿ ಬದುಕಲಿದ್ದು ಅದಕ್ಕೆ ಬೇಕಾಗುವ ಸರ್ವ ಶಿಕ್ಷಣ ನೀಡಿ ಸಮರ್ಥನನ್ನಾಗಿ ರೂಪಿಸಿ ನಿನ್ನ ಬಳಿ ಕಳುಹಿಸುವೆ. ಅಲ್ಲಿಯವರೆಗೆ ನನ್ನ ಜೊತೆ ಕರೆದೊಯ್ಯುತ್ತೇನೆ ಎಂದು ಹೇಳಿ ಮಗುವನ್ನು ಹಿಡಿದುಕೊಂಡೇ ನದಿಗೆ ಹಾರಿದಳು.

ಇತ್ತ ಎಲ್ಲವೂ ಕನಸಿನಂತೆ ಸಾಗಿದ ಜೀವನ. ಸ್ಪುರದ್ರೂಪಿ ಕನ್ಯೆ ಪತ್ನಿಯಾಗಿದ್ದಳು, ಎಂಟು ಮಕ್ಕಳು ಹುಟ್ಟಿದರೂ ಒಂದೂ ಇಲ್ಲದೇ ಜೀವನದಲ್ಲಿ ಜಿಗುಪ್ಸೆಯಾಯಿತು ರಾಜಾ ಶಂತನುವಿಗೆ. ಪ್ರಾಜ್ಞ ಮಂತ್ರಿಗಳು ಕೃತಕ ಸಮಸ್ಯೆಗಳನ್ನು ಸೃಷ್ಟಿಸಿ ಅದರ ಪರಿಹಾರಕ್ಕಾಗಿ ರಾಜನಾಗಿ ತನ್ನ ಕರ್ತವ್ಯ ನಿಭಾಯಿಸಲೇ ಬೇಕಲ್ಲವೇ? ಹಾಗಾಗಿ ಅನಿವಾರ್ಯವಾಗಿ ತನ್ನ ರಾಜಧರ್ಮದತ್ತ ಮನ ಮಾಡುವಂತೆ ಹೊಂದಿಸುತ್ತಾ – ಪ್ರಜಾಪಾಲನೆಯ ಕರ್ತವ್ಯಪರತೆಯಿಂದ ಆತನ ಮನ ಪರಿವರ್ತನೆ ಮಾಡುತ್ತಾ ತಮ್ಮ ಪ್ರಜಾರಂಜಕನಾಗಿ ನಿಷ್ಟೆಯಿಂದ ಜನಸೇವೆ ಮಾಡುತ್ತಿದ್ದನು. ಆದರೆ ಮಡದಿ ಮಕ್ಕಳ ನೆನಪು ಮರುಕಳಿಸಿ ಮತ್ತೆ ಮತ್ತೆ ಮನಸ್ಸಿಗೆ ಖೇದ ಉಂಟಾಗುತ್ತಿತ್ತು. ಹಾಗಾದಾಗ ದುಗುಡ ಕಳೆಯಲು ಶಂತನು ಮೃಗ ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದ.

ಹೀಗೆ ಒಂದೆಡೆ ಚಂದ್ರ ವಂಶದ ಕುರು ಚಕ್ರವರ್ತಿ ಯ ಕುಲದಲ್ಲಿ ಹುಟ್ಟಿದ ಅರಸು ಕುವರ ತಾಯಿ ಗಂಗಾಮಾತೆಯ ಮಾರ್ಗದರ್ಶನದಲ್ಲಿ ಸಮರ್ಥ ಗುರುಗಳಿಂದ ವಿದ್ಯೆ ಕಲಿಯುತ್ತಿದ್ದ.

ಹೀಗಿರಲು ಪರಮಪೂಜ್ಯ ದೇವಗುರುಗಳೂ ಆದ ಬ್ರಹಸ್ಪತಿ ಆಚಾರ್ಯರು “ಉಚಥ್ಯ” ಎಂಬ ಮುನಿಯ ಪತ್ನಿ ಮಮತೆ ಎಂಬವಳನ್ನು ಕಾಡಿನಲ್ಲಿ ಕಂಡು ಮೋಹಿತರಾದರು. ಪರಿಣಾಮ ಒಬ್ಬ ಮಗನ ಹುಟ್ಟಿಗೂ ಕಾರಣವಾಯಿತು. ಆದರೆ ಮಗು ಇಬ್ಬರಿಗೂ ಬೇಡವಾಗಿ ಕಾಡಿನಲ್ಲೇ ಬಿಟ್ಟು ಹೋದರು. ಹಾಗೇ ಅನಾಥವಾಗಿ ಕಾಡಿನಲ್ಲೇ ಕೂಗುತ್ತಿದ್ದ ಮಗುವಿನ ಅರಣ್ಯರೋದನ ಕಂಡು ಮನಕರಗಿದ ಮರುದ್ಗಣಗಳು ರಕ್ಷಿಸಿ ಪೋಷಿದರು. ಆ ಮಗುವೇ ಮುಂದೆ ಮಹಾ ಮಹಿಮಾನ್ವಿತ “ಭರದ್ವಾಜ” ಮಹರ್ಷಿ.

ಸಕಲ ವಿದ್ಯಾ ಸಂಪನ್ನನಾದ ತಪೋನಿಧಿ ಭರದ್ವಾಜ ಮಹರ್ಷಿಗಳು ಸುದೀರ್ಘ ಕಾಲ ತಪೋ ನಿರತರಾಗಿದ್ದರು. ಆದರೆ ತಪಸ್ಸು ಮಾಡುತ್ತಿರುವಾಗ ಜೀವೋತ್ಪತ್ತಿಯ ಕೌತುಕ ಆವರಿಸಿ ಅದರ ಬಗ್ಗೆ ಚಿಂತನೆಗೊಳಗಾಗಿ ಬಹಿರ್ಮುಖರಾಗುತ್ತಿದ್ದರು. ಮತ್ತೆ ಮತ್ತೆ ತಪೋಮುಖರಾಗಿ ತಪಗೈದರೂ ಪುನರಪಿ ಅದೇ ಕಾರಣಕ್ಕೆ ಎಚ್ಚೆತ್ತು ಕೊಳ್ಳುತ್ತಿದ್ದರು. ಹಾಗೆ ಒಮ್ಮೆ ಕಣ್ಣು ತೆರೆದು ನೋಡುವಾಗ “ಘೃತಾಚಿ” ಎಂಬ ಅಪ್ಸರೆ ಸೆರಗನ್ನು ಹಾರಿಸುತ್ತಾ ಆ ದಾರಿಯಲ್ಲಿ ಬರುತ್ತಿರುವುದು ಕಾಣಿಸಿತು. ಯಾಕೋ ಏನೋ ಭರದ್ವಾಜ ಮಹರ್ಷಿಗಳು ಆಕೆಯನ್ನು ನೋಡುತ್ತಿದ್ದಂತೆ ಅವರ ಶಕ್ತಿಪಾತ (ವೀರ್ಯ ಸ್ಖಲನ) ವಾಗತೊಡಗಿತು. ಪಾತಗೊಂಡ ಜೀವದ್ರವ್ಯವನ್ನು ಬಿದಿರಿನ ದೊಣ್ಣೆಯಲ್ಲಿ ಶೇಖರಿಸಿ ಮಂತ್ರ ರಕ್ಷೆಯಿತ್ತರು. ಅದರಿಂದ ಒಂದು ಮಗುವಿನ ಸೃಷ್ಟಿಯಾಯಿತು. ಹೀಗೆ ಹುಟ್ಟು ಪಡೆದ ಭರದ್ವಾಜ ಪುತ್ರನೇ ದ್ರೋಣ. ಬೆಳೆಯುತ್ತಾ ಭರದ್ವಾಜರಿಂದ ಶಾಸ್ತ್ರಾಭ್ಯಾಸ ಪಾರಂಗತನಾಗಿ, ಚಿಕ್ಕಪ್ಪ ಅಗ್ನಿವೇಶ್ಯರಿಂದ ಧನುರ್ವೇದ ಕಲಿಯ ತೊಡಗಿದರು.

ಅದೇ ಸಮಕಾಲದಲ್ಲಿ ಇತ್ತ ಸೋಮಕ ವಂಶದ ಪೃಷದ ಎಂಬವನು ಪಾಂಚಾಲ ದೇಶವನ್ನು ಆಳುತ್ತಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಆ ದುಃಖದಿಂದ ರಾಜ್ಯಭಾರವನ್ನು ಮಂತ್ರಿಗಳಿಗೊಪ್ಪಿಸಿ ಕಾನನ ಸೇರಿ ತಪೋ ನಿರತನಾದನು. ಹೀಗೆ ತಪಸ್ಸನಾಚರಿಸುತ್ತ ಇರಬೇಕಾದರೆ ದೇವಾಂಗನೆ ಮೇನಕೆ ವೈಯ್ಯಾರದಿಂದ ಅತ್ತ ಬರುತ್ತಾಳೆ. ಬಹಿರ್ಮುಖನಾದ ಅರಸ ಅವಳನ್ನು ನೋಡುತ್ತಾನೆ. ಆಕೆಯನ್ನು ನೋಡಿ ಮನದಲ್ಲಿ ಆಸೆ ಕೆರಳುತ್ತದೆ. ಪರಿಣಾಮ ಶರೀರದ ಸೂಕ್ತ ಅಂಗದಿಂದ ಸ್ಖಲನಗೊಂಡ ಆತನ ತೇಜಸ್ಸು ಅವನ ಪಾದಗಳ ಮೇಲೆ ಬಿತ್ತು. ತಪಸ್ಶಕ್ತಿಯ ಫಲವೇ ಆಗಿರಬೇಕು ಅದು ಗಂಡು ಮಗುವಾಗಿ ಹುಟ್ಟು ಪಡೆಯಿತು. ಪುತ್ರಾಕಾಂಕ್ಷಿಯಾಗಿದ್ದ ಅರಸನಿಗೆ ಈಗ ಏನು ವಿರಕ್ತಿ ಆವರಿಸಿತೋ ಏನೋ!! ಮಗುವನ್ನು ಅಲ್ಲೇ ಮರದ ಪಾದದಲ್ಲಿ ಅಂದರೆ ಬುಡದಲ್ಲಿ ಮಲಗಿಸಿದ. ಬೇರೆ ಸ್ಥಳವನ್ನರಸಿ ಹೊರಟು ಮತ್ತೆ ತಪೋನಿರತನಾದನು. ಅದೇ ಕಾಡಿನ ದಾರಿಯಾಗಿ ಬಂದ ಅಗ್ನಿವೇಶ್ಯರು ಮರದ ಪಾದಸ್ಥಳದಲ್ಲಿ ಸಿಕ್ಕಿದ ಮಗುವನ್ನೆತ್ತಿ ಆಶ್ರಮಕ್ಕೊಯ್ದು “ದ್ರುಪದ” ಎಂದು ಹೆಸರಿಟ್ಟು ಬೆಳೆಸಿದರು. ದ್ರೋಣ ಮತ್ತು ದ್ರುಪದ ಒಂದೇ ಆಶ್ರಮದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಾ ಬೆಳೆಯುತ್ತಿದ್ದರು.

ಹೀಗಿರಲು ಪಾಂಚಾಲ ದೇಶದ ಮಂತ್ರಿಗಳು ತಪಸ್ಸಿಗೆ ಹೋದ ಅರಸ ಪೃಷದನನ್ನು ಹುಡುಕುತ್ತಾ ಕಾಡಿಗೆ ಬಂದು, ಕಂಡು ರಾಜ್ಯದ ಉತ್ತರಾಧಿಕಾರದ ಬಗ್ಗೆ ಸಮಾಲೋಚಿಸುತ್ತಾರೆ. ಆಗ ತಪಸ್ವಿಯಾಗಿದ್ದ ಅರಸ ತನ್ನಿಂದ ಸೃಷ್ಟಿಯಾಗಿರುವ ಮಗುವಿನ ಬಗ್ಗೆ ಅವರಿಗೆ ತಿಳಿಸುತ್ತಾನೆ. ವಿಚಾರ ತಿಳಿದು ಅನ್ವೇಷಣೆಗೆ ತೊಡಗಿದ ಮಂತ್ರಿಗಳಿಗೆ ಅಗ್ನಿವೇಶ್ಯರ ಬಳಿ ಬೆಳೆಯುತ್ತಿರುವ ದ್ರುಪದನ ವಿವರ ಗೊತ್ತಾಗಿ ಆಶ್ರಮಕ್ಕೆ ಬಂದು ವಿಚಾರ ತಿಳಿಸುತ್ತಾರೆ. ಪಾಂಚಾಲದ ರಾಜಕುಮಾರನಿಗೆ ಸರ್ವ ಸಮರ್ಥ ರಾಜನಾಗುವ ವಿದ್ಯಾದಾನ ಮಾಡಲು ಬೇಡಿ ಪ್ರಾರ್ಥಿಸುತ್ತಾರೆ. ಪ್ರಾಪ್ತ ವಯಸ್ಸಿನಲ್ಲಿ ರಾಜಕುಮಾರನನ್ನು ರಾಜ್ಯಕ್ಕೆ ಕಳುಹಿಸಿಕೊಡಬೇಕೆಂದೂ ವಿನಂತಿಸಿ ಹೋಗುತ್ತಾರೆ. ಹೀಗೆ ದ್ರೋಣ -ದ್ರುಪದರು ಅಗ್ನಿವೇಶ್ಯರ ಶಿಷ್ಯರಾಗಿ ಅಭ್ಯಾಸನಿರತರಾಗಿ ಬೆಳೆಯತೊಡಗಿದ್ದಾರೆ.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page