
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸ್ನಾತಕೋತ್ತರ ಆಯುಷ್ ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುವ ಕಾರಣ ಆನ್ಲೈನ್ನಲ್ಲಿ ನೋಂದಣಿ, ಅರ್ಜಿ ಸಲ್ಲಿಕೆಗೆ ಡಿ.1ರವರೆಗೆ ಪೋರ್ಟಲ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಪ್ರಸಕ್ತ ಸಾಲಿಗೆ ಪಿಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ 15 ಪರ್ಸೆಂಟೈಲ್ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅರ್ಹರಾಗುವ ಎಲ್ಲರಿಗೂ ಅನುಕೂಲ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆಗಳ ಪರಿಶೀಲನೆ ಡಿ. 2ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಕೆಇಎ ಕಚೇರಿಯಲ್ಲಿ ನಡೆಯಲಿದ್ದು ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ದಾಖಲಿಸಲು ಡಿ.3ರವರೆಗೆ ಅವಕಾಶ ನೀಡಲಾಗಿದ್ದು ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಡಿ.4ರಂದು ಬೆಳಿಗ್ಗೆ 11ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಚಲನ್ ಡೌನ್ಲೋಡ್ ಮಾಡಿಕೊಂಡು ಡಿ.6ರೊಳಗೆ ಶುಲ್ಕ ಪಾವತಿಸಿ ಡಿ. 7ರ ಒಳಗೆ ಕಾಲೇಜುಗಳಿಗೆ ವರದಿ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.



















