
ಬೆಂಗಳೂರು: ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ, ಅಂಬೇಡ್ಕರ್ ಭವನ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಪ್ರತ್ಯೇಕವಾಗಿ ನಡೆದ ಸಂವಿಧಾನ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದು ಈ ವೇಳೆ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸಾಮಾಜಿಕ ನ್ಯಾಯದ ವಿರೋಧಿಗಳು, ಮನುಷ್ಯರನ್ನು ಜಾತಿ-ಧರ್ಮದ ಹೆಸರಲ್ಲಿ ವಿಂಗಡಿಸುವ ಮನುಸ್ಮೃತಿಯ ಪರವಾಗಿರುವವರು. ಹಾಗಾಗಿಯೇ ಅವರು ಸಂವಿಧಾನವನ್ನು ವಿರೋಧಿಸುವ, ಬದಲಾವಣೆ ಮಾಡುವ ಮಾತು, ಪ್ರಯತ್ನ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಸಂವಿಧಾನ ಅಂಗೀಕಾರವಾಗುವಾಗ ಅದನ್ನು ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್‌ನ ಅಧ್ಯಕ್ಷರಾಗಿದ್ದ ಗೋಳ್ವಾಲ್ಕರ್, ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್ ವಿರೋಧಿಸಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನ ಪುನರ್‌ರಚನೆಗೆ ವೆಂಕಟಾಚಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ವಾಗ್ದಾಳಿ ಮಾಡಿದ್ದರು. ಇಷ್ಟೆಲ್ಲ ವೈರುಧ್ಯಗಳು ನಮ್ಮ ನಡುವೆ ಇದೆ. ಸಂವಿಧಾನವನ್ನು ಪ್ರೀತಿಸುವವರ ನಡುವೆ ವಿರೋಧಿಸುವವರೂ ನಮ್ಮ ನಡುವೆ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಕಿವಿಮಾತು ನೀಡಿದರು.
ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯ. ನಾನು ಮುಖ್ಯಮಂತ್ರಿ ಆಗಿದ್ದೇ ಸಂವಿಧಾನದಿಂದ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಕೆಲವರಿಗೆ ಹೊಟ್ಟೆಯುರಿ ಇದೆ. ಆದರೆ, ಜನರ ಆಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂವಿಧಾನ ಜಾರಿಗೂ ಮೊದಲು ಅಲಿಖಿತ ಸಂವಿಧಾನ ಇತ್ತು. ಅಸಮಾನತೆ, ತಾರತಮ್ಯ, ಶೂದ್ರರನ್ನು ಕೀಳಾಗಿ ಕಾಣುವ, ಶಿಕ್ಷಣ, ಸಂಪತ್ತಿನ ಸಮಾನತೆಯೇ ಇಲ್ಲದ ವಿಚಾರಗಳು ಅಂದು ಸಮಾಜದಲ್ಲಿದ್ದವು. ಅದನ್ನು ಮನುಸ್ಮೃತಿ ಎಂದು ನಾವು ಕರೆಯುತ್ತೇವೆ. ಇಂತ ಅಲಿಖಿತ ಸಂವಿಧಾನವನ್ನು ಆರೆಸ್ಸೆಸ್ ನವರು ಪೋಷಣೆ ಮಾಡುತ್ತಿದ್ದರು. ಅಂಬೇಡ್ಕರ್ ಅವರು ಹಿಂದೂ ಕೋಡ್ ತಂದು ಮಹಿಳೆಯರಿಗೆ ಸಮಾನ ಅವಕಾಶ ಕೊಡಲು ಮುಂದಾದಾಗ ಇದರಿಂದ ಪುರುಷರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಕೆಲವರು ಹೇಳಿದರು. ಇದನ್ನೆಲ್ಲ ನಾವು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.



















