ಭಾಗ 19
ಭರತೇಶ್ ಶೆಟ್ಟಿ ,ಎಕ್ಕಾರ್
ಇಕ್ಷ್ವಾಕು ವಂಶದಲ್ಲಿ ಜನಿಸಿದ ರಾಜಾ ಮಹಾಭಿಷ ಸತ್ಯವಂತನಾಗಿ, ಸಾಹಸಿ, ಪರಮ ಧರ್ಮಿಷ್ಟನಾಗಿ ರಾಜ್ಯ ಪರಿಪಾಲನೆ ಗೈದು ದೇಹಾಂತ್ಯ ಹೊಂದಿದ್ದ. ಮರಣಾ ನಂತರ ಸತ್ಕರ್ಮಗಳಿಂದ ಸಂಚಿತ ಅಮಿತ ಪುಣ್ಯ ಫಲ ಬಲದ ಪರಿಣಾಮ ಸತ್ಯಲೋಕದ ಬ್ರಹ್ಮ ಸಭೆಯಲ್ಲಿ ಸದಸ್ಯನಾಗುವ ಮಹಾ ಸೌಭಾಗ್ಯ ಪಡೆದಿದ್ದ.
ಪರಶಿವನ ತಾಂಡವದಿಂದ ಪ್ರಾಕಾರಗೊಂಡು ಋಷಿ ಮುನಿಗಳಿಂದ ಪೋಷಿಸಲ್ಪಟ್ಟ ನಾಟ್ಯ ನೃತ್ಯ ತದಂಗ ಇನ್ನಿತರ ರೂಪಕಗಳು ಬ್ರಹ್ಮಸಭೆಯಲ್ಲೂ ಅಭಿವ್ಯಕ್ತಗೊಳ್ಳುತ್ತಿದ್ದವು. ಹೀಗಿರಲೊಂದು ದಿನ ಭಗವಾನ್ ವಿಷ್ಣು ವಲ್ಲಭೆ ಮಹಾಲಕ್ಷ್ಮಿಯ ಕಥನ ಪ್ರದರ್ಶನದ ಅಪೇಕ್ಷೆ ಸಭೆಯಿಂದ ಮೂಡಿತು. ಲಕ್ಷ್ಮಿ ಮಹಿಮಾನ್ವಿತೆ. ಆಕೆಯ ಪಾತ್ರಾಭಿನಯಕ್ಕೆ ಉಳಿದವರು ಅಂಜಿದರೆ, ಸಭೆಯಲ್ಲಿದ್ದ ಗಂಗಾಮಾತೆಗೆ ಏಕೋ ಏನೋ ಉತ್ಸಾಹ ಉಂಟಾಯಿತು. ಮಹಾಲಕ್ಷ್ಮಿಯ ಹುಟ್ಟಿನ ಕಥನದ ಪಾತ್ರಧಾರಿಯಾಗಲು ಒಪ್ಪಿದಳು. ಪೂರ್ವ ತಯಾರಿ, ಸಿದ್ಧತೆಗೆ ಕಾಲಾವಕಾಶ ಕೇಳಿದಳು. ಕಥೆಯ ನಟನೆ, ನಾಟ್ಯ, ಅಭಿನಯ ತಯಾರಿ ನಡೆಸಿದಳು. ಕ್ಷೀರ ಸಾಗರಕ್ಕೊಪ್ಪುವ ಶ್ವೇತ ವಸನ, ಹೊಳೆಯುವ ಮುತ್ತಿನ ಸರ, ಸರ್ವಾಂಗಗಳಿಗೆ ಕನಕ – ಮಾಣಿಕ್ಯ ಪೋಣಿಸಿದ ದಿವ್ಯಾಭರಣಗಳಿಂದ ಅಲಂಕೃತೆಯಾದಳು. ಬ್ರಹ್ಮ ದೇವರ ಆಶೀರ್ವಾದ, ಲಕ್ಷ್ಮಿಯ ಕೃಪೆ, ಕಲಾಮಾತೆ ಶಾರದೆಯ ಅನುಗ್ರಹ ಬೇಡಿದಳು. ನಿಗದಿತ ದಿನದಂದು ಅದ್ಬುತ ಸಿದ್ಧತೆ ನಟನಾ ತಯಾರಿಯಿಂದ ಸನ್ನದ್ಧಳಾಗಿ, ಬ್ರಹ್ಮ ಸಭೆಯಲ್ಲಿ ಮಹಾಲಕ್ಷ್ಮಿಯ ರೂಪಿನಲ್ಲಿ ಸುಶೋಭಿತಳಾಗಿ ಬಂದಳು. ಸಮುದ್ರದಿಂದೆದ್ದು ಬರುವ ಆ ದೃಶ್ಯ ಮನಮೋಹಕವಾಗಿ, ನೈಜತೆಯಿಂದ ಸಾಗುತ್ತಿತ್ತು. ಗಂಗೆ ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸಿ ಕಂಗೊಳಿಸುತ್ತಿದ್ದಳು. ಕಥನದಂತೆ ಮಂದಾರ ಮಾಲೆ ಹಿಡಿದು ವರಿಸುವ ವರನ ಆಯ್ಕೆಗೆ ಉಳಿದವರೆಲ್ಲರನ್ನೂ ಬಿಟ್ಟು ವಿಷ್ಣು ಪಾತ್ರಧಾರಿ ತನ್ನರಸ ವರುಣನಿಗೆ ಮಾಲಾರ್ಪಣೆಗೈಯಲು ಆಂಗಿಕ ಅಭಿನಯದೊಂದಿಗೆ ಅತ್ತ ಸಾಗುತ್ತಿರಬೇಕಾದರೆ, ಆಕಸ್ಮಿಕವಾಗಿ ಆಕೆಯ ಸೆರಗು ಜಾರಿತು. ಆಗ ಸಭಾಸದರೆಲ್ಲರೂ ತಮ್ಮ ಕೈಗಳಿಂದ ಕಣ್ಣು ಮುಚ್ಚಿಕೊಂಡರು. ಆದರೆ ಮಹಾಭಿಷ ಮೈಮರೆತು ಕುತೂಹಲಿಗನಾಗಿ ಗಂಗೆಯನ್ನೇ ನೋಡುತ್ತಿದ್ದನು. ಆಕೆಯ ನಗ್ನ ಎದೆಯ ಸುವ್ಯಕ್ತ ಸೌಂದರ್ಯವನ್ನು ಬೇಕೆಂದೇ ಅರಿತು ಸವಿಯುತ್ತಿದ್ದನು. ಎಲ್ಲರೂ ಕಣ್ಮುಚ್ಚಿದ್ದಾರೆ. ಆಗ ಓರೆಗಣ್ಣಿನಿಂದ ಗಂಗೆ ಎಲ್ಲರನ್ನು ಅವಲೋಕಿಸಿ ನೋಡಿದಳು. ತನ್ನತ್ತ ನೋಟಕನಾಗಿದ್ದಾನೆ ಮಹಾಭಿಷ ಎಂದರಿತರೂ ಜಾರಿದ ಸೆರಗು ಸರಿಪಡಿಸುವಲ್ಲಿ ನಿಧಾನಿಸಿ, ಅವಲೋಕನದಲ್ಲೇ ವ್ಯಸ್ತಳಾಗಿ ಹಿಂದುಳಿದಳು. ತನ್ನ ಸೌಂದರ್ಯಕ್ಕೋ, ಅಭಿನಯಕ್ಕೋ ಮಾರು ಹೋಗಿ ಮಹಾಭಿಷ ಮೈಮರೆತಿದ್ದಾನೆ ಎಂದುಕೊಂಡಳು.
ಇಷ್ಟಾಗುವಾಗ ಬ್ರಹ್ಮ ದೇವರ ಚಿತ್ತಕ್ಕೆ ಈ ಅಪರಾಧ- ಅಪಚಾರ ತಿಳಿಯದೆ ಉಳಿಯಲಿಲ್ಲ. ಪರಿಣಾಮ ಗಂಗೆ – ಮಹಾಭಿಷರು ಶಾಪಕ್ಕೆ ಗುರಿಯಾದರು. ” ಇಬ್ಬರೂ ಭೂಲೋಕದಲ್ಲಿ ಸತಿಪತಿಗಳಾಗಿ ಹುಟ್ಟಿ ಪುತ್ರಶೋಕವನ್ನು ಅನುಭವಿಸಿ” ಎಂದು ಶಾಪಗ್ರಸ್ಥರಾದರು. ಸತ್ಯಲೋಕದ ಸಭೆ ಪ್ರಾಂಜಲ ಮನಸ್ಸಿನ ದಿವ್ಯ ಶರೀರಿಗಳಿಂದ ಕೂಡಿದ್ದರೂ ಅಲ್ಲಿ ಸಂಭವಿಸಿದ ಚಿತ್ತ ಚಾಂಚಲ್ಯ ಸಹನೀಯವಾಗಲಿಲ್ಲ.
ಮಹಾಭಿಷ – ಗಂಗೆಯ ಕಡು ದುಃಖಕ್ಕೆ ಮರುಗಿದ ಬ್ರಹ್ಮ ದೇವ – ಗಂಗೆಯನ್ನುದ್ದೇಶಿಸಿ :- “ಶಾಪವಾಕ್ಯದಂತೆ ಭೂಮಿಯಲ್ಲಿ ನೀನು ಹುಟ್ಟಿದರೂ ನಿನಗೆ ನಿನ್ನ ಪೂರ್ವ ಸ್ಮರಣೆ ಜಾಗೃತವಾಗಿರಲಿ, ಶಾಪ ಪೂರೈಸಿ ನಿನ್ನ ಇಚ್ಚೆ ಪ್ರಕಾರ ಪುನರಪಿ ನೀನು ಈ ಲೋಕ ಸೇರಬಹುದು” ಎಂದು ಅನುಗ್ರಹಿಸಿದರು. ಮಹಾಭಿಷನಿಗೆ – “ಗಂಗೆ ಹಡೆದು ನೀಡುವ ಕೊನೆಯ ಮಗನಿಂದ ನಿನಗೆ ಸಕಲ ಸೌಭಾಗ್ಯ ಪ್ರಾಪ್ತವಾಗಿ, ಸುಪುತ್ರವಂತನಾಗಿ ಶಾಪ ಮುಕ್ತನಾಗು” ಎಂದು ವಿಮೋಚನೆಯ ದಾರಿ ತೋರಿದರು.
ಗಂಗಾ ದೇವಿಗೆ ಪ್ರಾಪ್ತವಾದ ಶಾಪವಿಚಾರ ತಿಳಿದ ಅಷ್ಟ ವಸುಗಳು ಬಂದು ಆಕೆಯ ಮಕ್ಕಳಾಗಿ ಹುಟ್ಟುವ ಅವಕಾಶ ಬೇಡಿದರು. ಅದಕ್ಕೆ ಸಕಾರಣವಿದ್ದು ಆ ಕಥೆಯ ವೃತ್ತಾಂತವನ್ನೂ ವಿವರಿಸಿದರು. ಅಷ್ಟ ವಸುಗಳು ಎಂಟು ಮಂದಿ. ಅವರಲ್ಲಿ ಕಿರಿಯವ “ದ್ಯು” ಎಂಬಾತ ತನ್ನ ಮಡದಿ ‘ವರಾಂಗಿ’ ಆಕೆಯ ಮಿತ್ರೆಯಾಗಿರುವ ರಾಣಿಯೋರ್ವಳನ್ನು ಅಮರಳಾಗಿಸಬೇಕು ಎಂದು ಬೇಡಿಕೆಯಿಟ್ಟಿದ್ದಳು. ಇದಕ್ಕಾಗಿ ಅಮೃತಪಾನ ಮಾಡಬೇಕಲ್ಲವೆ? ಮಡದಿಗೆ ಅದು ಅಸಾಧ್ಯ ಎಂದು ಎಷ್ಟು ಸಮಜಾಯಿಷಿ ಹೇಳಿದರೂ ಕೇಳದೆ ಉಳಿದಾಗ, ಪ್ರಯತ್ನಕ್ಕೆ ಒಪ್ಪಿದ ವಸು ‘ದ್ಯು’. ಕಾಮಧೇನುವಿನ ಹಾಲಿನ ಮೂಲಕ ಅಮೃತ ಸೃಷ್ಟಿಸುವ ಯೋಜನೆ ರೂಪಿಸಿದ. ಆದರೆ ಆ ಸಮಯದಲ್ಲಿ ಯಾಗ ನಿಮಿತ್ತ ಕಾಮಧೇನು ಇಂದ್ರನಿಂದ ವಸಿಷ್ಟರಿಗೆ ನೀಡಲ್ಪಟ್ಟಿತ್ತು. ಈ ಸುದ್ದಿ ತಿಳಿದು ವಸು “ದ್ಯು” ಇನ್ನುಳಿದವರನ್ನೂ ಸೇರಿಸಿ ವಸಿಷ್ಟರಿಲ್ಲದ ಹೊತ್ತು ಧೇನುವನ್ನು ಅಪಹರಿಸಲು ಮುಂದಾದರು. ಹಾಗೆ ಧೇನುವನ್ನು ಎಳೆದು ತರಲು ಯತ್ನಿಸಿ ಧೇನು ಬಾರದಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಮುಳ್ಳಿನ ಬೆತ್ತದಿಂದ ಕಾಮಧೇನುವಿನ ಬೆನ್ನಿಗೆ ದ್ಯು ಹೊಡೆಯಲಾರಂಭಿಸಿದ. ಮುಳ್ಳು ಚುಚ್ಚಿ ರಕ್ತ ಸುರಿಯುತ್ತಿತ್ತು.
ಅಷ್ಟರಲ್ಲಿ ಅಲ್ಲಿಗೆ ಬಂದ ವಸಿಷ್ಟರು ಅಷ್ಟವಸುಗಳ ಕುಕೃತ್ಯ ಕಂಡು ” ನೀವು ಮನುಷ್ಯರಾಗಿ ಹುಟ್ಟಿ ದುರ್ಮರಣ ಹೊಂದಿರಿ” ಎಂದು ಶಪಿಸಿದರು. ಅಷ್ಟವಸುಗಳು ಕಣ್ಣೀರುಗರೆದು ಮನ್ನಿಸಿ ರಕ್ಷಿಸಬೇಕೆಂದು ಗೋಗರೆದಾಗ, ಪ್ರಶಾಂತರಾದ ವಸಿಷ್ಟರು ಘಟಿತ ಘಟನೆಯನ್ನು ಅವಲೋಕಿಸಿ “ಅಷ್ಟ ವಸುಗಳಲ್ಲಿ ಕಿರಿಯವ ‘ದ್ಯು’ ಓರ್ವನನ್ನುಳಿದು ಮಿಕ್ಕವರು ಈ ಪ್ರಕರಣದಲ್ಲಿ ಸಹಭಾಗಿಗಳಾಗಿದ್ದೀರಷ್ಟೇ. ಮೇಲಾಗಿ ದ್ಯು ಮುಳ್ಳಿನ ಬೆತ್ತದಿಂದ ಧೇನುವಿನ ಬೆನ್ನು ಚುಚ್ಚಲ್ಪಡುವಂತೆ ಹೊಡೆದಿದ್ದ. ಹಾಗಾಗಿ ದ್ಯು ಪೂರ್ಣ ಪ್ರಮಾಣದಲ್ಲಿ ಮನುಷ್ಯ ಜನ್ಮ ಅನುಭವಿಸಲಿ. ಪ್ರಾಪಂಚಿಕ ಸುಖ ಬಾಹಿರನಾಗಲಿ, ಮಾತ್ರವಲ್ಲ ಮರಣ ಕಾಲದಲ್ಲಿ ಧೇನುವಿಗೆ ಚುಚ್ಚಿದ ಮುಳ್ಳುಗಳಂತೆ ಆತನೂ ಚುಚ್ಚಲ್ಪಟ್ಟು, ಯಾತನಾಮಯ ನೋವು ಅನುಭವಿಸಿ ಸಾಯುವಂತಾಗಲಿ. ಆ ಮರಣ ಕಾಲದಲ್ಲಿ ಪೂರ್ವ ಸ್ಮರಣೆಯಾಗಿ ಜನ್ಮ ರಹಸ್ಯ ನೆನಪಾಗಿ ಶಾಪ ಮುಕ್ತನಾಗಲಿ” ಎಂದು ಹೇಳಿದರು. “ನೀವು ಉಳಿದ ಏಳು ಮಂದಿ ವಸುಗಳು ಕ್ಷಣಿಕ ಕಾಲಾವಧಿಗೆ ಮನುಷ್ಯರಾಗಿ ಜನಿಸಿ, ತಕ್ಷಣವೇ ಕಾರಾಣಾಂತರಗಳಿಂದ ಶೀಘ್ರ ಮೃತ್ಯುವಶರಾಗಿ ಶಾಪ ಮುಕ್ತಿಗೊಳ್ಳಿರಿ” ಎಂದು ದಯೆ ತೋರಿದರು.
ತನ್ನ ತಪ್ಪಿಗೆ ಉಳಿದವರೂ ಶಾಪಗ್ರಸ್ಥರಾದರು, ತಾನೂ ಸುದೀರ್ಘ ಕಾಲ ಮನುಷ್ಯ ಜನುಮದಲ್ಲಿ ಬಾಳುವಂತಾಯಿತು ಎಂದು ಕೊರಗಿ ಮುನಿವರ್ಯನಲ್ಲಿ ಮನ್ನಿಸಬೇಕೆಂದು ‘ದ್ಯು’ ಪರಿ ಪರಿಯಾಗಿ ಬೇಡಿದಾಗ, ಒಲಿದ ವಸಿಷ್ಟರು “ನೀನು ಸುದೀರ್ಘ ಕಾಲ ಮಾನವನಾಗಿ ಬಾಳಲೇಬೇಕು. ಆದರೆ ಸದ್ವಿದ್ಯಾ ಪಾರಂಗತನಾಗಿ, ವಿಕ್ರಮಿಯಾಗಿ, ಧರ್ಮಿಷ್ಟನಾಗಿ, ಸತ್ಯ ಸಂಧನಾಗಿ ಲೋಕ ಮಾನ್ಯನಾಗು. ಸತ್ಕೀರ್ತಿವಂತನಾಗು” ಎಂದು ಹರಸಿದರು.
ಹೀಗೆ ನಮಗೆ ಶಾಪವಿರಲು ವಿಮುಕ್ತಿಗೆ ದಾರಿ ಮಾಡಿಕೊಡಬೇಕಮ್ಮಾ ಎಂದು ಗಂಗಾ ಮಾತೆಯಲ್ಲಿ ಅಷ್ಟ ವಸುಗಳು ಬೇಡಿದರು. ಕಾಲ ಮಹಿಮೆಯ ಪೂರಕ ವ್ಯವಸ್ಥೆಯೋ ಏನೋ ಗಂಗೆಯೂ ಒಪ್ಪಿ ಸಮ್ಮತಿ ನೀಡಿದಳು.
ಮುಂದುವರಿಯುವುದು……
✍🏻ಭರತೇಶ್ ಶೆಟ್ಟಿ ಎಕ್ಕಾರ್