ಭಾಗ 17
ಭರತೇಶ್ ಶೆಟ್ಟಿ,ಎಕ್ಕರ್

ಕಾಲ ಚಕ್ರ ತಿರುಗುತ್ತಿತ್ತು…ಕಾಲಗರ್ಭವೂ ಅನೇಕಾನೇಕ ಸ್ವಾರಸ್ಯಗಳನ್ನು ತೆರೆದಿಡುತ್ತಿತ್ತು. ದೇವ ಲೋಕಾಧಿಪತಿ ಇಂದ್ರನಿಗೆ ತ್ರಿಮೂರ್ತಿಗಳು ರಕ್ಷಾ ಸ್ಥಾನದಲ್ಲಿದ್ದು ದೇವರಾಗಿದ್ದಾರೆ. ಆ ಮೂವರಲ್ಲಿ ಅತಿ ಶ್ರೇಷ್ಟ ಯಾರು? ಎಂಬ ಸಂದೇಹ ಉತ್ಪತ್ತಿಯಾಯಿತು. ಪರಿಹಾರ ಹೇಗೆ ಎಂದು ತರ್ಕಿಸುವಾಗ ನಾರದರು ಪರಿಹಾರಕ್ಕಾಗಿ ಭೃಗು ಮಹರ್ಷಿಗಳ ಹೆಸರು ಸೂಚಿಸಿ, ಈ ಶೋಧನಾ ಕಾರ್ಯಕ್ಕೆ ಅವರೇ ಅರ್ಹರು ಎಂದು ಉಳಿದವರಿಂದಲೂ ಅನುಮೋದಿಸಲ್ಪಟ್ಟರು. ಹೀಗೆ ಎಲ್ಲರೂ ಒಪ್ಪುವಲ್ಲಿ ಕಾರಣವಾದದ್ದು ಭೃಗು ಮಹರ್ಷಿಗಳ ಜ್ಞಾನ ಮತ್ತವರ ಪಾದದಲ್ಲಿರುವ ದಿವ್ಯ ನೇತ್ರ. ಮನೋಗಮನ ಮಾಡಬಲ್ಲ ಅಂದರೆ ಮನದಲ್ಲಿ ಬಯಸಿದ್ದಲ್ಲಿ ಹೋಗಿ ಸೇರುವ ಶಕ್ತಿ ಹೊಂದಿದ್ದರು. ಹೀಗಾಗಲು ಅತ್ಯುನ್ನತವಾದ ಶೋಧನೆಯ ಸಾಧನೆಗೆ ಒಪ್ಪಿ ಹೊರಟ ಭೃಗು ಮಹರ್ಷಿಗಳು ಸತ್ಯಲೋಕಕ್ಕೆ ಬಂದು ಬ್ರಹ್ಮ ಶಾರದೆಯರನ್ನು ಕಾಣುತ್ತಾರೆ. ಓಲಗಸ್ಥರಾಗಿ ಗೋಷ್ಠಿಯಲ್ಲಿ ನಿರತರಾಗಿದ್ದ ಬ್ರಹ್ಮ ಶಾರದೆಯರು ಭೃಗು ಮಹರ್ಷಿಗಳ ಆಗಮನವನ್ನು ಗಮನಿಸಲಿಲ್ಲ. ಕುಪಿತರಾದ ಭೃಗುಮುನಿ ಬ್ರಹ್ಮನಿಗೆ ಇನ್ನು ಪೂಜೆ ಇಲ್ಲದೇ ಹೋಗಲಿ ಎಂದು ಶಪಿಸಿದರು.
ಅಲ್ಲಿಂದ ಕೈಲಾಸಕ್ಕೆ ಬಂದಾಗ ಪರಶಿವ ದಿಗಂಬರನಾಗಿದ್ದನು. ಶಿವದೇವನ ವಿಶೇಷವೇ ಹಾಗೆ ವರ್ಣಿಸಲ್ಪಟ್ಟಿದೆ. ದಿಗ್ದಿಗಂತಗಳಿಗೆ ವ್ಯಾಪಿಸಿರುವ ಅಂಬರವೇ ಮಹಾದೇವನ ವಸನ ಎಂಬಷ್ಟು ಸರ್ವವ್ಯಾಪಕತ್ವ – ಪ್ರಭುತ್ವ ಹೊಂದಿದವನು. ಇಂತಹ ಸ್ಥಿತಿಯಲ್ಲಿ ಪರಶಿವೆಯನ್ನು ತೊಡೆಯಲ್ಲಿ ಕುಳ್ಳಿರಿಸಿ ಯಾವುದೋ ಗಹನ ವಿಚಾರ ವಿಮರ್ಶೆಯಲ್ಲಿ ನಿರತರಾಗಿದ್ದರು. ಹಾಗಿರುವ ಶಿವನನ್ನು ನೋಡಲೂ ಆಗದೆ, ಜೊತೆಗೆ ತಾನು ಬಂದಿದ್ದರೂ ಕರೆದು ಸತ್ಕರಿಸದೇ ಉಳಿದ ಶಿವನ ಬಗೆಯಲ್ಲಿ ಕೋಪ ತಾಳಿದ ಮಹರ್ಷಿ ” ಶಿವ ನಿನ್ನನ್ನು ಭಕ್ತರಿನ್ನು ಲಿಂಗರೂಪದಲ್ಲೇ ಪೂಜಿಸಲಿ” ಎಂದು ಶಾಪವಿತ್ತರು.
ವೈಕುಂಠಕ್ಕೆ ಬಂದರೆ ಅಲ್ಲೂ ವಿಪರ್ಯಾಸ ವಿಷ್ಣು ಮಲಗಿ ನಿದ್ರಿಸಿದ್ದಾನೆ. ಲಕ್ಮೀದೇವಿ ಸೇವಾನಿರತಳಾಗಿದ್ದಾಳೆ. ಇಲ್ಲೂ ಭೃಗು ಆಗಮನ ಗಮನ ಸೆಳೆಯದೇ ಉಳಿದಾಗ ಮೊದಲೇ ಏರಿಸಿಕೊಂಡು ಬಂದಿದ್ದ ಕೋಪದ ಕಟ್ಟೆ ಒಡೆಯಿತು. ಬಲಕಾಲನ್ನೆತ್ತಿ ವಿಷ್ಣುವಿನ ಎದೆಗೆ ಒದ್ದು ಬಿಟ್ಟರು. ಎಚ್ಚೆತ್ತ ಹರಿ ಭೃಗು ಮಹರ್ಷಿಗಳನ್ನು ಸ್ವಾಗತಿಸಿ, ಉಪಚರಿಸಿ, ಸತ್ಕರಿಸಿ ಗೌರವಿಸುತ್ತಾನೆ. ಸಂಪ್ರೀತರಾದ ಮಹರ್ಷಿ ತ್ರಿಮೂರ್ತಿಗಳಲ್ಲಿ ಹರಿಯೇ ಉತ್ತಮನೆಂದು ತೀರ್ಮಾನಿಸಿದರು.
ಬಂದ ಕಾರ್ಯವಾಯಿತೆಂದು ಸ್ವರ್ಗ ಲೋಕಕ್ಕೆ ವಿಚಾರ ತಿಳಿಸಲು ಹೊರಟರೆ ಮೊದಲಿದ್ದ ಮನೋಗಮನ ( ಮನಸ್ಸಲ್ಲಿ ಯೋಚಿಸಿದ ಸ್ಥಳ ತಲುಪುವ) ಶಕ್ತಿ ಕಳಕೊಂಡಿದ್ದರು. ಕಾರಣವೇನೆಂದು ತಿಳಿಯಲು ಶ್ರೀಹರಿಯತ್ತ ತಿರುಗಿದರೆ ಭೃಗು ಮಹರ್ಷಿಯ ಪಾದದಡಿಯಲ್ಲಿದ್ದ ದಿವ್ಯ ನೇತ್ರ ವಿಷ್ಣುವಿನ ವಕ್ಷ ಸ್ಥಳದಲ್ಲಿ (ಎದೆಯಲ್ಲಿ) ಸ್ಥಾಪಿತಗೊಂಡು ಶೋಭಿಸುತ್ತಿತ್ತು. ಋಷಿವರ್ಯ ಮನದಲ್ಲಿ ಮರುಗಿ ದುಃಖಿತನಾಗಿ ನಿಂತು ನೆಲನೋಟಕರಾದರು. ಆಗ ಭಗವಾನ್ ಶ್ರೀವಿಷ್ಣು “ಸಕಲ ಜ್ಞಾನ ಸಂಪನ್ನರಾದ ತಮಗೇಕೆ ಮೌಢ್ಯ ಕವಿಯಿತು. ತ್ರಿಮೂರ್ತಿಗಳಲ್ಲಿ ಭೇದವಿಲ್ಲ. ಈ ಸತ್ಯ ತಿಳಿದಿದ್ದರೂ ಯಾಕೆ ಪರೀಕ್ಷೆಗೆ ಮುಂದಾದಿರಿ? ನಿಮ್ಮ ಪಾದದಡಿಯಲ್ಲೂ ಕಣ್ಣಿದ್ದರೂ ನಿಮ್ಮ ಜ್ಞಾನದ ಕಣ್ಣು ಮಸುಕಾಗಿರುವುದನ್ನು ತೆರೆಸಲೋಸುಗ ದೇವತೆಗಳು ಕೈಗೊಂಡ ಕಾಯಕವಿದು. ಆಗಲಿ ನಿಮ್ಮ ಈ ಕೃತ್ಯದ ಕುರುಹಾಗಿ ನನ್ನ ಎದೆಯಲ್ಲಿ ಈ ಕಣ್ಣು ಭೃಗು ಲಾಂಛನ ರೂಪದಲ್ಲಿ ಸ್ಥಿರವಾಗಿ ಉಳಿಯಲಿ” ಎಂದು ಶ್ರೀಹರಿ ಹರಸಿದ. ಭೃಗು ಮಹರ್ಷಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಜ್ಞಾನದ ಕಣ್ಣು ಈ ಪ್ರಕರಣದಿಂದ ತೆರೆಯಲ್ಪಟ್ಟಿತು.
ಹೀಗೆ ಕಾಲ ಕಳೆಯುತ್ತಿರಲು ಒಂದು ದಿನ ತಮಾಸುರನೆಂಬ ದಾನವ ದೇವಲೋಕ ಜಯಿಸಲು ಸ್ವರ್ಗಕ್ಕೆ ದಾಳಿಗೈದು ಇಂದ್ರನೊಡನೆ ಹೋರಾಡಿ ಕೈ ಸೋತನು. ಅಲ್ಲಿಂದ ಕಣ್ತಪ್ಪಿಸಿ ಓಡಿ ಬಂದು ಭೃಗು ಮಹರ್ಷಿಗಳ ಆಶ್ರಮ ಸೇರಿ ಋಷಿ ಪತ್ನಿ ‘ಖ್ಯಾತಿ’ಯಲ್ಲಿ ಆಶ್ರಯ ರಕ್ಷಣೆ ಬೇಡಿದನು. ಆರ್ತರಿಗೆ ರಕ್ಷಣೆ ನೀಡುವುದು ಧರ್ಮವೆಂದು ಒಪ್ಪಿ ಆಶ್ರಮವಾಸಿಯಾಗಿರಲು ತಮಾಸುರನಿಗೆ ಅನುಮತಿ ನೀಡಿದಳು.
ಬೆನ್ನಟ್ಟಿ ಬಂದ ಇಂದ್ರ ಭೃಗು ಆಶ್ರಮದಲ್ಲಿರುವ ರಕ್ಕಸನ ಸುಳಿವರಿತು ಋಷಿ ಪತ್ನಿ ಖ್ಯಾತಿಯಲ್ಲಿ ರಕ್ಕಸನನ್ನು ಬಿಟ್ಟುಕೊಡಲು ಸಾಮ, ದಾನ, ಭೇದ ಉಪಾಯಗಳಿಂದ ಬೇಡಿದರೂ ಒಪ್ಪದಿದ್ದಾಗ ದಂಡ ಪ್ರಯೋಗಕ್ಕೆ ಮುಂದಾಗಿ ವಜ್ರಾಯುಧವನ್ನೆತ್ತಿದ. ಋಷಿ ಪತ್ನಿಯ ಆಚಾರ ಬಲ, ತಪೋ ಬಲದಿಂದ ದೇವೇಂದ್ರ ಎತ್ತಿದ ಕೈ ಆಕೆಯ ಸಂಕಲ್ಪದಂತೆ ತಟಸ್ಥವಾಗಿ ಸ್ತಂಭನಗೊಂಡಿತು.
ಮುಂದುವರಿಯುವುದು…..



















