
ಹೊಸದಿಲ್ಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ 2023ರ ನವೆಂಬರ್‌ನಲ್ಲಿ ವಾರಕ್ಕೆ 70 ಗಂಟೆ ಕೆಲಸದ ಕುರಿತು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದು ಇದೀಗ ದೇಶದ ಪ್ರಗತಿಗೆ ಐಟಿ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡುವುದು ಅಗತ್ಯ. ಈ ವಾದವನ್ನು ನಾನು ಎಂದಿಗೂ ಬದಲಿಸುವುದಿಲ್ಲ. ನಾನು ಸಾಯುವವರೆಗೂ ಈ ವಾದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಭಾರತದಲ್ಲಿನ ಸಂಸ್ಥೆಗಳು ವಾರದಲ್ಲಿ 6 ದಿನಗಳು ಕೆಲಸ ಮಾಡುತ್ತಿದ್ದ ಪ್ರವೃತ್ತಿಯನ್ನು 1986ರಲ್ಲಿ 5 ದಿನಗಳಿಗೆ ಬದಲಿಸಿದ್ದರ ಬಗ್ಗೆಯೂ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಔದ್ಯೋಗಿಕ ಜೀವನ ಹಾಗೂ ಒತ್ತಡ ನಿರ್ವಹಣೆ ಎಂಬ ವಿಷಯದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದಿರುವ ಅವರು, “ನಾವು ಬದುಕನ್ನು ರೂಪಿಸಿಕೊಳ್ಳಬೇಕು ಬಳಿಕ ಜೀವನ ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ಚಿಂತಿಸಬೇಕು’ ಎಂದು 25 ವರ್ಷಗಳ ಹಿಂದೆ ಹಣಕಾಸು ತಜ್ಞ ಕೆ.ವಿ.ಕಾಮತ್ ಹೇಳಿದ್ದರು ಎಂಬುದನ್ನು ಸ್ಮರಿಸಿದ್ದಾರೆ. ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ದುಡಿಯುತ್ತಾರೆ. ರಾಷ್ಟ್ರದ ಜನತೆ ಕೂಡ ಹೀಗೆ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.



















