
ನವದೆಹಲಿ: ಸುಪ್ರೀಂಕೋರ್ಟ್‌ನ ಪಂಚಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ಹೊರಡಿಸಿದ್ದು ಅದೇನೆಂದರೆ ಕಾರು, ಜೀಪು ಮೊದಲಾದ ಲಘು ಮೋಟಾರು ವಾಹನ ಚಾಲನೆಗೆ ಪರವಾನಗಿ ಹೊಂದಿರುವವರು, 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನಗಳನ್ನು ಯಾವುದೇ ಹೊಸ ಅನುಮತಿ ಇಲ್ಲದೆಯೇ ಚಲಾಯಿಸಬಹುದು ಎಂದು ಆದೇಶಿಸಿದೆ.
ಹೀಗಾಗಿ ಎಲ್‌ಎಂವಿ ಲೈಸೆನ್ಸ್ ಹೊಂದಿದ್ದವರು, ಸರಕು ಸಾಗಣೆ ವಾಹನ ಚಾಲನೆ ಮಾಡಿದ ವೇಳೆ ಸಂಭವಿಸುವ ಅಪಘಾತಗಳಿಗೆ ವಿಮಾ ಕಂಪನಿಗಳು ಪರಿಹಾರ ನಿರಾಕರಿಸುತ್ತಿರುವ ಪ್ರಕರಣಗಳಿಗೆ ತೆರೆ ಬೀಳಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಎಲ್‌ಎಂವಿ ಮತ್ತು ಸರಕು ಸಾಗಣೆ ವಾಹನಗಳು ಸಂಪೂರ್ಣ ಪ್ರತ್ಯೇಕ ವರ್ಗಕ್ಕೆ ಸೇರಿಲ್ಲ ಎಂದು ತಿಳಿಸಿದ್ದು ಆದರೆ ಅಪಾಯಕಾರಿ ವಸ್ತುಗಳನ್ನು ಸಾಗಣೆ ಮಾಡುವ ಇದೇ ತೂಕದ ಮಿತಿಯ ವಾಹನ ಚಾಲನೆ ಮಾಡುವವರು ಪ್ರತ್ಯೇಕ ಅನುಮತಿ ಪಡೆಯುವುದು ಅಗತ್ಯ ಎಂದು ಸ್ಪಷ್ಟಪಡಿಸಿತು.
ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 1.7 ಲಕ್ಷ ಜನರು ಸಾವನ್ನಪುತ್ತಿದ್ದಾರೆ. ಇದಕ್ಕೆ ಎಲ್‌ಎಂವಿ ಲೈಸೆನ್ಸ್ ಹೊಂದಿರುವವರು ಸರಕು ಸಾಗಣೆ ವಾಹನ ಚಾಲನೆ ಮಾಡುತ್ತಿರುವುದೇ ಕಾರಣ ಎಂಬ ಅಭಿಪ್ರಾಯವಿದೆ. ಆದರೆ ಇದಕ್ಕೆ ಪೂರಕವಾಗುವಂತೆ ಯಾವುದೇ ಸಾಕ್ಷ್ಯಗಳನ್ನು ಯಾವುದೇ ಅರ್ಜಿದಾರರು ನೀಡಿಲ್ಲ. ಬದಲಾಗಿ ರಸ್ತೆ ಅಪಘಾತ ಮತ್ತು ಸಾವಿನ ಪ್ರಕರಣಗಳಿಗೆ ಅತಿವೇಗದ ಚಾಲನೆ, ರಸ್ತೆ ವಿನ್ಯಾಸ, ಸಂಚಾರ ನಿಯಮ ಪಾಲನೆ ಮಾಡದೇ ಇರುವುದು, ಚಾಲನೆ ವೇಳೆ ಮೊಬೈಲ್ ಬಳಸುವುದು, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೇ ಇರುವುದೇ ಪ್ರಮುಖ ಕಾರಣ ಎಂದು ನ್ಯಾಯಪೀಠ ಹೇಳಿತು.
ಘಟನೆ ಹಿನ್ನೆಲೆ:
ವಿವಿಧ ಅಪಘಾತ ಪ್ರಕರಣಗಳಲ್ಲಿ ಎಲ್‌ಎಂವಿ ಲೈಸೆನ್ಸ್ ಹೊಂದಿದ್ದವರು, ಸರಕು ಸಾಗಣೆ ವಾಹನೆ ಚಾಲನೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ವಿಮಾ ಕಂಪನಿಗಳು ವಿಮೆ ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ ಎಲ್‌ಎಂವಿ ಹೊಂದಿದ್ದವರು, 7500 ಕೆಜಿ ತೂಕದ ಸರಕು ಸಾಗಣೆ ವಾಹನ ಚಾಲನೆ ಮಾಡಬಹುದೇ ಇಲ್ಲವೇ ಎಂಬ ಮೂಲ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಈ ತೀರ್ಪಿನ ಮೂಲಕ ನ್ಯಾಯಾಲಯವು ಸ್ಪಷ್ಟನೆ ನೀಡಿದೆ.






















































