
ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಯಡಿಯೂರಪ್ಪ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದೆ. ಅವರ ಸಾವಿನ ಬಗ್ಗೆಯೂ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಸಚಿವೆ ಶೋಭಾ ಕರಂದ್ಲಾಜೆ ಅವರ ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದ ಮಾತಿಗೆ ವೈಯಕ್ತಿಕವಾಗಿಯೇ ತಿರುಗೇಟು ನೀಡಿದ್ದಾರೆ.































































































































