
ಬೆಂಗಳೂರು: ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯಾ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ‘2028ರ ವಿಧಾನಸಭೆ ಚುನಾವಣೆಯಲ್ಲೂ ಶತಾಯಗತಾಯ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ, ನಾವು ನಿಮಗೆ ಆರ್ಥಿಕ ಶಕ್ತಿ ಮುಂದುವರೆಸುತ್ತೇವೆ’ ಎಂದು ಮಹಿಳಾ ಕಾರ್ಯಕರ್ತೆಯರಿಗೆ ಕರೆ ನೀಡಿದ್ದಾರೆ.
ಬಿಜೆಪಿಯವರು ಅನ್ನಭಾಗ್ಯವನ್ನೂ ವಿರೋಧಿಸುತ್ತಾರೆ, ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ ಎಲ್ಲವನ್ನೂ ವಿರೋಧಿಸುತ್ತಾರೆ. ಆದರೆ ಗೃಹಲಕ್ಷ್ಮಿ ಹಣದಲ್ಲಿ ಅತ್ತೆಯು ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಮಹಿಳಾ ವಿರೋಧಿ ಬಿಜೆಪಿಗೆ ತಕ್ಕ ಉತ್ತರವನ್ನು ನೀವೇ ನೀಡಬೇಕು. 2028ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.













