
ಮೈಸೂರು: ಶುಕ್ರವಾರ ಇ.ಡಿ ಅಧಿಕಾರಿಗಳು ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರು ಆಧರಿಸಿ ಮುಡಾ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಮುಡಾ ಅಧಿಕಾರಿಗೆ ಸಮನ್ಸ್ ನೀಡಿದ್ರೂ ದಾಖಲೆ ಕೊಡದ ಹಿನ್ನೆಲೆಯಲ್ಲಿ ಬೆಳಗ್ಗೆ 11:30 ಕ್ಕೆ ಇ.ಡಿ ದಾಳಿ ಮಾಡಿದ್ದಾರೆ. ಕೆಂಗೇರಿಯಲ್ಲಿರುವ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದ್ದು ಮೈಸೂರು ತಹಸೀಲ್ದಾರ್ ಕಚೇರಿಗೆ ನಾಲ್ಕು ಜನ ಇಡಿ ಅಧಿಕಾರಿಗಳು ತೆರಳಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರು ತಾಲೂಕು ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾದ ಬಗ್ಗೆ ದಾಖಲೆ ಪಡೆದುಕೊಳ್ಳಲು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.













