
ನವದಹೆಲಿ: ವಿಪಕ್ಷ ಬಿಜೆಪಿ ಈಗಾಗಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸತತ ಹೋರಾಟ ನಡೆಸುತ್ತಿದ್ದು ಇದರ ನಡುವೆ ಕರ್ನಾಟಕದಲ್ಲಿ ಮತ್ತೆ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಲಿದೆ.
ಚುನಾವಣಾ ಆಯೋಗವು ಇಂದು ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ 3 ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಮಹರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ.
ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಈ ಮೂರು ವಿಧಾನಸಭಾ ಚುನಾವಣೆ ದಿನಾಂಕ ಇಂದು ಆಯೋಗ ಘೋಷಿಸಲಿದೆ. ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ, ಮತದಾನ, ಮತ ಎಣಿಕೆ ದಿನಾಂಗಳು ವಿವರಣೆಯನ್ನೂ ಆಯೋಗ ನೀಡಲಿದೆ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಹೆಚ್ಡಿ ಕುಮಾರಸ್ವಾಮಿ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇತ್ತ ಬಳ್ಳಾರಿಯ ಸಂಡೂರು ಕ್ಷೇತ್ರದ ಶಾಸಕ ಇ ತುಕರಾಂ, ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀಮೆ ನೀಡಿದ್ದರು. ಇತ್ತ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ್ ಬೊಮ್ಮಾಯಿ, ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಇಂದು ಘೋಷಣೆಯಾಗಲಿದೆ..
ಇನ್ನು ಭಾರಿ ನಿರೀಕ್ಷೆ ಹುಟ್ಟಿಸಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಚುನಾವಣೆ ದಿನಾಂಕ ಇಂದೇ ಘೋಷಣೆಯಾಗಲಿದೆ. 288 ಸ್ಥಾನದ ಮಹಾರಾಷ್ಟ್ರ ವಿಧಾನಸಭೆ ನವೆಂಬರ್ 26ಕ್ಕೆ ಅಂತ್ಯಗೊಳ್ಳಲಿದೆ. ಇತ್ತ 81 ಸ್ಥಾನದ ಜಾರ್ಖಂಡ್ ವಿಧಾನಸಭೆ ಜನವರಿ 5, 2025ಕ್ಕೆ ಅಂತ್ಯಗೊಳ್ಳಲಿದೆ.































































































































