ದಸರಾ ಹೆಸರಿನ ಮೂಲ ಇತಿಹಾಸ, ಬ್ರಹ್ಮಚಾರಿಣಿಯ ಪೂರ್ವಕಥೆ
ಪ್ರಜ್ವಲಾ ಶೆಣೈ, ಕಾರ್ಕಳ

ನವವಿಧ ಭಕುತಿಯಲ್ಲಿ ನವ ಅವತಾರಗಳಲ್ಲಿ ದುರ್ಗಾಮಾತೆಯನ್ನು ಪೂಜಿಸುವ ದಿವ್ಯತೆಯ ಉತ್ಸವಾಚರಣೆಯೇ ನವರಾತ್ರಿ.ಮನೆ ಮನಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಿ ಜೀವನೋತ್ಸಾಹ ತುಂಬುವಲ್ಲಿ ಹಬ್ಬಗಳ ಪಾತ್ರ ಹಿರಿದು. ಅದರಲ್ಲೂ ನವರಾತ್ರಿಯ 9 ದಿನಗಳಲ್ಲೂ ದೇವಿ ಚಾಮುಂಡೇಶ್ವರಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸುತ್ತಾ ಧನ್ಯತೆಯನ್ನು ಪಡೆಯಲಾಗುತ್ತದ
ದಸರಾ ಹೆಸರಿನ ಮೂಲ ಇತಿಹಾಸ
ದಸರಾ ಎನ್ನುವ ಪದ ಹೇಗೆ ಬಂತು ಎಂದು ನೋಡುವುದಾದರೆ ಇದು ಸಂಸ್ಕೃತ ಪದಗಳಾದ ದಶ ಎಂದರೆ ‘ಹತ್ತು’ ಹರಾ ಎಂದರೆ ‘ಸೋಲಿಸುವುದು’ ಎಂಬ ಎರಡು ಪದಗಳು ಸೇರಿ ಉಂಟಾಗಿದೆ. ದಶಹರ ಎನ್ನುವ ಪದವೇ ಮುಂದೆ ಕನ್ನಡದಲ್ಲಿ ದಸರಾ ಆಗಿ ಮಾರ್ಪಟ್ಟಿತು.
ದೇವಿಯ ಎರಡನೇ ಅವತಾರ ಬ್ರಹ್ಮಚಾರಿಣಿ
ಆಶ್ವೀಜ ಮಾಸದ ಶುಕ್ಲ ಪಕ್ಷದ ಬಿದಿಗೆ ದಿನ ನಾವು ದುರ್ಗೆಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುತ್ತೇವೆ. ಬ್ರಹ್ಮಚಾರಿಣಿ ಎಂಬ ಹೆಸರೇ ಸೂಚಿಸುವಂತೆ ಬ್ರಹ್ಮ ಎಂದರೆ ತಪಸ್ಸು ಚಾರಿಣಿ ಎಂದರೆ ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸುವವಳು ಎಂದರ್ಥ. ಬ್ರಹ್ಮಚಾರಿಣಿ ಎಂದರೆ ಜ್ಞಾನವನ್ನು ಹೊಂದಿರುವ ಎಂಬ ಅರ್ಥವೂ ಕೂಡ ಇದೆ.
ಬ್ರಹ್ಮಚಾರಿಣಿಯ ಪೂರ್ವಕಥೆ
ಶೈಲಪುತ್ರಿಯು ಹೇಗೆ ಬ್ರಹ್ಮಚಾರಿಣಿಯಾಗಿ ಅವತಾರ ತಾಳಿದಳು ಎನ್ನುವುದಕ್ಕೆ ಒಂದು ಪುರಾಣ ಕಥೆ ಇದೆ. ಶೈಲ ಪುತ್ರಿಯು ವಯಸ್ಸಿಗೆ ಬಂದಾಗ ಒಮ್ಮೆ ನಾರದ ಮುನಿಗಳನ್ನು ಭೇಟಿಯಾದಳು. ನಾರದರು ಪಾರ್ವತಿಯ ಪೂರ್ವಜನ್ಮದ ವೃತ್ತಾಂತವನ್ನೆಲ್ಲಾ ಹೇಳಿ ಶಿವನನ್ನೇ ಈ ಜನ್ಮದಲ್ಲೂ ಪತಿಯಾಗಿ ಪಡೆಯಲು ಉಪದೇಶವನ್ನು ಮಾಡಿದರು. ಆದರೆ ಪಾರ್ವತಿಯು ಶಿವನನ್ನು ಒಲಿಸುವ ಪರಿ ಹೇಗೆ ಎಂದು ಚಿಂತಿತಳಾದಳು. ನಾರದರು ಇದಕ್ಕೂ ಪರಿಹಾರವನ್ನು ಸೂಚಿಸಿ ಕಠಿಣ ತಪಸ್ಸಿಗೆ ಮಾತ್ರ ಶಿವ ಒಲಿಯುವನೆಂದು ಹೇಳಿದರು. ಪರ್ವತರಾಜನ ಮಗಳಾದ ಪಾರ್ವತಿಯು ಕೈಲಾಸದಲ್ಲಿರುವ ಶಿವನನ್ನು ಪತಿಯನ್ನಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸು ಮಾಡುತ್ತಾಳೆ. ಕಠಿಣವಾದ ತಪಸ್ಸು ಮಾಡಿದ ಕಾರಣ ಆಕೆಗೆ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು. ಆಕೆ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸಿ ಸಾವಿರಾರು ವರ್ಷ ಆಹಾರ ನಿದ್ರೆ ಇಲ್ಲದೆ ತಪಸ್ಸು ಮಾಡಿದಳು. ಕೆಲವೊಮ್ಮೆ ಆಕೆ ಎಲೆ ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಳು. ಆಕೆಯ ಭಕ್ತಿ ಮತ್ತು ದೃಢತೆಗೆ ಮೆಚ್ಚಿ ಶಿವ ಬ್ರಹ್ಮಚಾರಿಣಿಯನ್ನು ವರಿಸಿದನು.
ಬ್ರಹ್ಮಚಾರಿಣಿ ಅವತಾರ ಮತ್ತು ಪೂಜಾ ವಿಧಾನ
ತಪಸ್ಸಿನ ರೂಪಕವಾದ ತಾಯಿ ಬ್ರಹ್ಮಚಾರಿಣಿ ದೇವಿ ಶಾಂತ ಸ್ವರೂಪಿ.ಈ ದಿನ ಹಸಿರು ಬಣ್ಣದ ವಸ್ತ್ರ ಧರಿಸಿ ಸಿಂಹ/ ಹುಲಿಯ ಮೇಲೆ ಸವಾರಿ ಮಾಡುತ್ತಾಳೆ.ಒಂದು ಕೈಯಲ್ಲಿ ಜಪಮಾಲೆ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ.
ನವರಾತ್ರಿಯ ಎರಡನೇ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ವಸ್ತ್ರ ಧರಿಸಿ ತಾಯಿಗೆ ಅಕ್ಷತೆ, ಚಂದನ, ಕುಂಕುಮ ಇತ್ಯಾದಿಗಳಲ್ಲದೆ ಷೋಡಶ ಉಪಚಾರಗಳನ್ನು ಮಾಡಲಾಗುತ್ತದೆ. ದೇವಿಗೆ ಹಣ್ಣು ಕಾಯಿ,ಪಂಚಕಜ್ಜಾಯ ನೈವೇದ್ಯವನ್ನು
ಅರ್ಪಿಸಲಾಗುತ್ತದೆ.ತಾಯಿಗೆ ಇಷ್ಟವಾದ ಬಿಳಿ ಹಾಗು ಕೆಂಪು ಹೂಗಳನ್ನು ಅರ್ಪಿಸಿ ಸಂತುಷ್ಟಗೊಳಿಸಲಾಗುತ್ತದೆ. ತುಪ್ಪದ ದೀಪ ಹಾಗೂ ಕರ್ಪೂರದಾರತಿ ಬೆಳಗಿ ಶಾಂತಿ, ನೆಮ್ಮದಿ, ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.
ಯಾ ದೇವಿ ಸರ್ವಭೂತೇಷು
ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತ
ನಮಸ್ತಸೈ ನಮಸ್ತಸೈ ನಮಸ್ತಸೈ
ನಮೋ ನಮಃ
ಎಂಬ ಮಂತ್ರವನ್ನು ಪಠಿಸಿದರೆ ದೇವಿ ಸಂತುಷ್ಟಳಾಗಿ
ಇಷ್ಟಾರ್ಥಗಳನ್ನು ಇಡೇರಿಸುತ್ತಾಳೆ ಎನ್ನುವ ನಂಬಿಕೆ ಇದೆ.ಬ್ರಹ್ಮಚಾರಿಣಿಯನ್ನು ಯಾರು ಪೂಜಿಸುತ್ತಾರೋ ಅವರು ಜ್ಞಾನ ಮತ್ತು ಸಂತೋಷವನ್ನು ಹೊಂದುತ್ತಾರೆ. ದೇವಿಯ ಆರಾಧನೆಯಿಂದ ಸಂಯಮ, ಸದ್ಗುಣಗಳು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.ದೇವಿಯ ಕೃಪೆಯಿಂದ ಸಾತ್ವಿಕ ಶಕ್ತಿ ಜಾಗೃತಗೊಂಡು ತಾಮಸ ಶಕ್ತಿ ನಿಷ್ಕ್ರಿಯವಾಗುತ್ತದೆ.ತನ್ಮೂಲಕ ಯಾರು
ಬ್ರಹ್ಮಚಾರಿಣಿಯನ್ನು ಪ್ರಾರ್ಥಿಸುವರೋ ಅವರಿಗೆಲ್ಲ ಧನ, ಧಾನ್ಯ,ಸಮೃದ್ಧಿಯ ಜೊತೆಗೆ ನೆಮ್ಮದಿಯೂ ದೊರಕುವುದು.ಸರ್ವೇ ಜನಾಃ ಸುಖಿನೋ ಭವಂತು.














