
ಬೆಂಗಳೂರು: ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ನಗರದ ಎಫ್ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಣ ತಜ್ಞರು ಹಾಗೂ ರಾಜಕೀಯ ಮುಖಂಡರ ದುಂಡು ಮೇಜಿನ ಸಭೆಯಲ್ಲಿ ಹಣಕಾಸಿನ ಕೊರತೆಯಿಂದಾಗಿ ಬಾಗಲಕೋಟೆ, ಕೊಪ್ಪಳ, ಹಾಸನ, ಹಾವೇರಿ, ಕೊಡಗು, ಚಾಮರಾಜನಗರ, ಬೀದರ್ ಸೇರಿದಂತೆ ಒಟ್ಟು 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸ್ವಂತ ಸಂಪನ್ಮೂಲಗಳಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿರುವ ವಿಶ್ವವಿದ್ಯಾಲಯಗಳ ಮೇಲೆ ಸರಕಾರ ಏಕೆ ಕಾಕದೃಷ್ಟಿ ಹಾಕುತ್ತಿದೆ. ವಿಶ್ವವಿದ್ಯಾಲಯ ಮುಚ್ಚುವುದರಿಂದ ಉನ್ನತ ಶಿಕ್ಷಣ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಆಡುವುದು ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ನಿರ್ಣಯವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಿದೆ.
ಸಭೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ಸಚಿವ ಸಂಪುಟ ಉಪಸಮಿತಿ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಬಡ ಮಕ್ಕಳ ಭವಿಷ್ಯ ನಿರ್ಮಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಬಿಡುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಎಬಿವಿಪಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದ್ದಾರೆ.