
ಬೆಂಗಳೂರು: ಇಂದು ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತಿದ್ದು ಈ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ‘ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು… ಈ ಸಂದರ್ಭದಲ್ಲಿ, ನಮ್ಮ ಸಂವಿಧಾನವನ್ನು ರಚಿಸುವ ಮೂಲಕ, ನಮ್ಮ ಅಭಿವೃದ್ಧಿ ಪಯಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯ ಮೇಲೆ ಆಧಾರಿತವಾಗಿದೆ ಎಂದು ಖಚಿತಪಡಿಸಿದ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾವು ಗೌರವ ಸಲ್ಲಿಸುತ್ತೇವೆ. ಈ ರಾಷ್ಟ್ರೀಯ ಹಬ್ಬವು ನಮ್ಮ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತದೆ. ಅಲ್ಲದೇ ಬಲಿಷ್ಠ ಮತ್ತು ಸಮೃದ್ಧ ಭಾರತ ರಚಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಬರೆದು ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ‘ನಾಡಿನ ಸಮಸ್ತ ಬಂಧುಗಳಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು… ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದು ಗತವೈಭವದಲ್ಲಿ ಮೈಮರೆಯದೆ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುವ ಕಾಲ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಸಂವಿಧಾನದ ಮೂರು ಮುಖ್ಯ ಆಧಾರ ಸ್ಥಂಭಗಳು ಭದ್ರವಾಗಿದ್ದು ಆರೋಗ್ಯಕರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಿಧಾನದ ಪಾಲನೆಯಾಗುತ್ತಿದೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಅರ್ಥ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ಕಾಂಗ್ರೆಸ್ ಪಕ್ಷ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು ನಾಡ ಬಾಂಧವರೆಲ್ಲರೂ ಪಕ್ಷ, ಪಂಥ, ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಈ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ನಾಡಬಾಂಧವರಿಗೆಲ್ಲ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್.. ʻಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ʼ ಎಂದು ಬರೆದುಕೊಂಡಿದ್ದಾರೆ.





















