
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ದಾಖಲೆ ಬರೆದಿದ್ದು ಬಜೆಟ್ ಭಾಷಣದ ಆರಂಭದಲ್ಲೇ 2024-25ರ ಆಯವ್ಯಯ ದಾಖಲೆ ಪತ್ರದಲ್ಲಿ ಯುವ, ಅನ್ನದಾತ, ಬಡವ ಹಾಗೂ ಮಹಿಳೆ ಸೇರಿದಂತೆ ಒಟ್ಟು 9 ಕ್ಷೇತ್ರಗಳಿಗೆ ಪ್ರಮುವಾಗಿ ಆದ್ಯತೆ ನೀಡಿದ ಕ್ಷೇತ್ರಗಳನ್ನು ಘೋಷಿಸಲಾಗಿದೆ. ಕೌಶಲ್ಯ, ಮಧ್ಯಮವರ್ಗ, ನಿರುದ್ಯೋಗ, ಎಮ್ ಎಸ್ ಎಮ್ ಇ ಕ್ಷೇತ್ರಗಳಿಗೂ ಒತ್ತು ನೀಡಲಾಗಿದ್ದು ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಿಗೆ ಬರೋಬ್ಬರಿ 1.52 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ತರಕಾರಿ ಬೆಳೆಗಳಿಗೆ ಉತ್ತೇಜನ ನೀಡಲು ವಿಶೇಷ ಯೋಜನೆ ರೂಪಿಸಲಾಗಿದ್ದು ರೈತರಿಗಾಗಿ ಕಿಸಾನ್ ಕ್ರೆಡಿಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ದಿಗೆ 1.42 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉದ್ಯೋಗ ಸೃಷ್ಟಿಗಾಗಿ ಮೂರು ಕೌಶಲ್ಯ ಯೋಜನೆ ಜಾರಿ ಮಾಡಲಾಗಿದ್ದು ನಗರ ಅಭಿವೃದ್ಧಿ, ಇಂಧನ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಗೂ ಪ್ರತ್ಯೇಕ ಗಮನ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಮೃತಸರ- ಕೊಲ್ಕತ್ತಾ ಕೈಗಾರಿಕಾ ಕಾರಿಡಾರ್ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ.
ಇದೇ ವೇಳೆ ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ನೀಡಿದ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡುಗೆ ಪ್ರತಿಯಾಗಿ ಕೋಟಿ ಕೋಟಿ ರೂಪಾಯಿ ಅನುದಾನವನ್ನು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಘೋಷಿಸಲಾಗಿದೆ.ಮೂಲಭೂತ ಸೌಕರ್ಯಗಳ ಪೈಕಿ ಎಕ್ಸ್‌ಪ್ರೆಸ್ ವೇ ಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಉತ್ಪಾದನಾ ವಲಯದಲ್ಲಿ ಕ್ರೆಡಿಟ್ ವ್ಯವಸ್ಥ ಜಾರಿಗೊಳಿಸಲಾಗಿದೆ. ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಯೋಜನೆ, ಗ್ರಾಮೀಣ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಹಾಗೂ ಮುದ್ರಾ ಸಾಲವನ್ನು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.








