
ನವದೆಹಲಿ : ಕೇಂದ್ರ ಸರ್ಕಾರವು 5 ಮತ್ತು 8 ನೇ ತರಗತಿಗಳಿಗೆ ‘ನೋ-ಡಿಟೆನ್ಷನ್ ನೀತಿ’ಯನ್ನು (ಯಾರನ್ನೂ ಅನುತ್ತೀರ್ಣ ಮಾಡಬಾರದು ಎಂಬ ನೀತಿ ಅಥವಾ ಎಲ್ಲರೂ ಪಾಸ್ ಎಂಬ ನೀತಿ) ತನ್ನ ಆಡಳಿತದ ಶಾಲೆಗಳಲ್ಲಿ ರದ್ದುಗೊಳಿಸಿದೆ.
ಹೊಸ ನಿಯಮ:
ನಿಯಮಿತ ಪರೀಕ್ಷೆಯ ನಂತರ, ಕಾಲಕಾಲಕ್ಕೆ ಸೂಚಿಸಿದಂತೆ ಬಡ್ತಿ ಮಾನದಂಡಗಳನ್ನು ಪೂರೈಸಲು ಮಗು ವಿಫಲವಾದರೆ, ಫಲಿತಾಂಶ ಘೋಷಣೆಯ ದಿನಾಂಕದಿಂದ 2 ತಿಂಗಳೊಳಗೆ ಮರು ಪರೀಕ್ಷೆ ನಡೆಸಲಾಗುತ್ತದೆ. ಮರು ಪರೀಕ್ಷೆಯಲ್ಲಿ ಹಾಜರಾಗುವ ಮಗು ಮತ್ತೆ ಬಡ್ತಿ ಮಾನದಂಡ ಪೂರೈಸಲು ವಿಫಲವಾದಲ್ಲಿ, ವಿದ್ಯಾರ್ಥಿಯನ್ನು 5ನೇ ತರಗತಿ ಅಥವಾ 8ನೇ ತರಗತಿಗೆ ಹಿಂತಿರುಗಿಸಲಾಗುತ್ತದೆ. ಆದರೆ, ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಯಾವುದೇ ಶಾಲೆಯಿಂದ ಯಾವುದೇ ಮಗುವನ್ನು ಅನುತ್ತೀರ್ಣಗೊಳಿಸಿ ಹೊರಹಾಕುವಂತಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಇದು ದೇಶದ 3000 ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳಿಗೆ ಅನ್ವಯಿಸಲಿದ್ದು ಜೊತೆಗೆ, ಶಾಲಾ ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ, ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ಮಾಡಬಹುದು. ಈಗಾಗಲೇ ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು 5 ಮತ್ತು 8ನೇ ಕ್ಲಾಸ್‌ಗೆ ‘ಎಲ್ಲರೂ ಪಾಸ್ ನೀತಿ’ಯನ್ನು ತೆಗೆದುಹಾಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





