
ಬೆಂಗಳೂರು: 2025ನೇ ಸಾಲಿನ ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿರುವ ಸುದ್ದಿಗೋಷ್ಠಿಯಲ್ಲಿ ಶನಿವಾರ ಬೆಳಗ್ಗೆ 11.30ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಿದ್ದಾರೆ.
ಏ.16 ಮತ್ತು 17ರಂದು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದು ಈ ಬಾರಿಯ ಸಿಇಟಿ ಪರೀಕ್ಷೆಗೆ ಒಟ್ಟು 3.11 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಬಳಿಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2 ಬರೆದಿದ್ದ 71 ಸಾವಿರ ವಿದ್ಯಾರ್ಥಿಗಳಲ್ಲಿ 41 ಸಾವಿರ ಮಂದಿ ಫಲಿತಾಂಶ ಉತ್ತಮಗೊಂಡಿದೆ. ಇದರಲ್ಲಿ ಬಹುತೇಕ ಮಂದಿ ವಿಜ್ಞಾನ ವಿಭಾಗದವರಾಗಿದ್ದು, ಅವರ ಉತ್ತಮಗೊಂಡಿರುವ ಫಲಿತಾಂಶವನ್ನು ಸಿಇಟಿ ರ್ಯಾಂಕಿಂಗ್ಗೆ ಈಗ ಪರಿಗಣಿಸಬೇಕಿದೆ. ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದಿರುವ ಅಂಕಗಳಲ್ಲಿ ತಲಾ ಶೇ.50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ರ್ಯಾಂಕಿಂಗ್ ನೀಡಲಾಗುತ್ತದೆ. ಉತ್ತಮಗೊಂಡಿರುವ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಯಾಟ್ಸ್ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಬೇಕಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ವಿದ್ಯಾರ್ಥಿಗಳು ಹಾಗೂ ಪೋಷಕರು ಮಧ್ಯಾಹ್ನ 2 ಗಂಟೆ ನಂತರ ಫಲಿತಾಂಶವನ್ನು https://cetonline.Karnataka.gov.in/ugcetrank2025/checkresult.aspx ಹಾಗೂ https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.






















































